ಚಾಲಕನ ಸಮಯ ಪ್ರಜ್ಞೆ ಜನರ ಜೀವ ರಕ್ಷಣೆ

| Published : Jun 10 2024, 12:30 AM IST

ಸಾರಾಂಶ

ವಡದಾಳ ಗ್ರಾಮದಿಂದ ಅಫಜಲ್ಪುರ ಪಟ್ಟಣಕ್ಕೆ ಹೊರಟಿದ್ದ 9 ಗಂಟೆಯ ಬಸ್‌ ಚಲಿಸುತ್ತಿದ್ದಾಗಲೇ ಹಿಂದಿನ ಚಕ್ರದ ಎಕ್ಸಲ್ ಕಡಿದು ಹೊರ ಬಂದ ಪರಿಣಾಮ ಬಸ್ಸಿನ ನಿಯಂತ್ರಣ ತಪ್ಪುತ್ತಿದ್ದಂತೆ ಚಾಲಕ ರಾವುತ್ ಬಿರಾದಾರ ಬಸ್ಸನ್ನು ರಾಷ್ಟ್ರೀಯ ಹೆದ್ದಾರಿ150ಇ ನ ಪಕ್ಕದಲ್ಲಿ ಹಾಕಿ ಬಸ್ಸು ನಿಲ್ಲಿಸುವ ಮೂಲಕ ಪ್ರಯಾಣಿಕರ ಜೀವ ಉಳಿಸಿದ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಚವಡಾಪುರ

ಅಫಜಲ್ಪುರ ತಾಲೂಕಿನ ವಡದಾಳ ಗ್ರಾಮದಿಂದ ಅಫಜಲ್ಪುರ ಪಟ್ಟಣಕ್ಕೆ ಹೊರಟಿದ್ದ 9 ಗಂಟೆಯ ಬಸ್‌ ಚಲಿಸುತ್ತಿದ್ದಾಗಲೇ ಹಿಂದಿನ ಚಕ್ರದ ಎಕ್ಸಲ್ ಕಡಿದು ಹೊರ ಬಂದ ಪರಿಣಾಮ ಬಸ್ಸಿನ ನಿಯಂತ್ರಣ ತಪ್ಪುತ್ತಿದ್ದಂತೆ ಚಾಲಕ ರಾವುತ್ ಬಿರಾದಾರ ಬಸ್ಸನ್ನು ರಾಷ್ಟ್ರೀಯ ಹೆದ್ದಾರಿ150ಇ ನ ಪಕ್ಕದಲ್ಲಿ ಹಾಕಿ ಬಸ್ಸು ನಿಲ್ಲಿಸುವ ಮೂಲಕ ಪ್ರಯಾಣಿಕರ ಜೀವ ಉಳಿಸಿದ ಘಟನೆ ನಡೆದಿದೆ.

ಬಳಿಕ ಚಾಲಕ ರಾವುತ ಬಿರಾದಾರ ಮಾತನಾಡಿ ಬಸ್ಸು ಚಲಾಯಿಸುತ್ತಿದ್ದಾಗ ನಿಯಂತ್ರಣ ತಪ್ಪುತ್ತಿರುವಂತೆ ಕಂಡು ಬಂತು. ಏನೋ ಅವಗಢ ಆಗುವ ಮುನ್ಸೂಚನೆ ಕಂಡು ಅಫಜಲ್ಪುರ ಪಟ್ಟಣದ ಹೊರ ವಲಯದ ಕೆಪಿಟಿಸಿಎಲ್ ಕಚೇರಿ ಎದುರು ಹೆದ್ದಾರಿ ಪಕ್ಕದಲ್ಲಿ ಬಸ್ಸು ನಿಲ್ಲಿಸಿದೆ. ಆದರೆ ಸ್ವಲ್ಪ ಏಮಾರಿದರೂ ಅವಗಢ ಸಂಭವಿಸುವ ಸಾಧ್ಯತೆ ಇತ್ತು. ಬಸ್ಸಿನ ಗೇರ್ ಬದಲಾಯಿಸಿದರೂ ಕೂಡ ಬಸ್ಸು ನಿಯಂತ್ರಣಕ್ಕೆ ಬಾರದಿರುವುದನ್ನು ನಿರ್ವಾಹಕರಾದ ಸುನೀಲಕುಮಾರ ಅವರಿಗೆ ತಿಳಿಸಿದಾಗ ಅವರು ಕೂಡ ಬಸ್ಸನ್ನು ಹೆದ್ದಾರಿ ಪಕ್ಕಕ್ಕೆ ಹಾಕಲು ಸಲಹೆ ನೀಡಿದರು. ಅದೃಷವಶಾತ್ ಯಾರಿಗೂ ಏನು ಆಗಿಲ್ಲ ಎಂದು ನಿಟ್ಟುಸಿರು ಬಿಟ್ಟರು.

ಅಫಜಲ್ಪುರ ಡಿಪೋದಲ್ಲಿ ಸಾಕಷ್ಟು ಹಳೆಯ ಮತ್ತು ಕೆಲಸಕ್ಕೆ ಬಂದಿರುವ ಬಸ್ಸಿಗಳಿವೆ. ಅವುಗಳನ್ನು ಗ್ರಾಮೀಣ ಭಾಗಗಳಲ್ಲಿ ಓಡಿಸುತ್ತಿದ್ದಾರೆ. ಹದಗೆಟ್ಟ ಮತ್ತು ಕೆಲಸಕ್ಕೆ ಬಂದಿರುವ ಬಸ್ಸುಗಳು ಯಾವಾಗ ಹೀಗೆ ಅವಗಢಕ್ಕಿಡಾಗುತ್ತವೋ ಗೊತ್ತಿಲ್ಲ. ಅಫಜಲ್ಪುರ ಡಿಪೋದವರಿಗೆ ಜನರ ಜೀವದ ಬಗ್ಗೆ ಕಾಳಜಿ ಇದ್ದರೆ ಗುಣಮಟ್ಟದ ಬಸ್ಸುಗಳನ್ನು ಓಡಿಸಲಿ ಇಲ್ಲವಾದರೆ ಬಸ್ಸುಗಳನ್ನು ಓಡಿಸುವುದನ್ನೇ ನಿಲ್ಲಿಸಲಿ. ಪುಣ್ಯಕ್ಕೆ ಚಾಲಕ, ನಿರ್ವಾಹಕರ ಜಾಗರೂಕತೆಯಿಂದ ಇಂದು ಯಾವುದೇ ಸಮಸ್ಯೆ ಆಗಲಿಲ್ಲ ಎಂದು ಪ್ರಯಾಣಿಕರು ಅಫಜಲ್ಪುರ ಡಿಪೋ ಮತ್ತು ಸಾರಿಗೆ ಸಂಸ್ಥೆ ಮೇಲೆ ಕೆಂಡ ಕಾರಿದ ಘಟನೆಯೂ ನಡೆಯಿತು.

ಬಸ್ಸಿನಲ್ಲಿ ಬಡದಾಳ, ಬಳೂರ್ಗಿ ಗ್ರಾಮದ ಐವತ್ತಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು.