ಮಂಗಳೂರಲ್ಲಿ ಡ್ರೈವಿಂಗ್‌ ಲೈಸೆನ್ಸ್‌ ನವೀಕರಣ ಹೈರಾಣು!

| Published : May 03 2024, 01:01 AM IST

ಸಾರಾಂಶ

ಡ್ರೈವಿಂಗ್‌ ಲೈಸೆನ್ಸ್‌ ಸೂಕ್ತ ಸಮಯದಲ್ಲಿ ನವೀಕರಣವಾಗದಿದ್ದರೆ ವಾಹನ ಚಾಲನೆಗೆ ತೊಡಕಾಗುತ್ತದೆ. ಅವಧಿ ಮೀರಿದ ಪರವಾನಿಗೆಯಲ್ಲಿ ವಾಹನ ಚಲಾಯಿಸಲು ಅವಕಾಶ ಇಲ್ಲ. ಅಪಘಾತವಾದರೆ ಪರಿಹಾರವೂ ಮರೀಚಿಕೆ. ಹಾಗೆಂದು ಬೇರೆ ಹೊಸದಾಗಿ ಡಿಎಲ್‌ ಮಾಡುವಂತೆಯೂ ಇಲ್ಲ. ಡಿಎಲ್‌ ನವೀಕರಣ ವಿಳಂಬದಿಂದಾಗಿ ಅರ್ಜಿ ಸಲ್ಲಿಸಿದವರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ.

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಮಂಗಳೂರು

ಸೂಕ್ತ ಕಾಲದಲ್ಲಿ ಡ್ರೈವಿಂಗ್‌ ಲೈಸೆನ್ಸ್‌(ಡಿಎಲ್‌) ನವೀಕರಣಗೊಳ್ಳದೆ ಲೈಸೆನ್ಸ್‌ದಾರರು ಪರದಾಟ ನಡೆಸುವಂತಾಗಿದೆ. ಕಳೆದ ಎರಡು ತಿಂಗಳಿಂದ ಮಂಗಳೂರಿನಲ್ಲಿ ಡಿಎಲ್‌ ಹೊಂದಿದವರು ಲೈಸೆನ್ಸ್‌ ನವೀಕರಣಕ್ಕೆ ಬವಣೆಪಡುತ್ತಿದ್ದಾರೆ.

ಪುಸ್ತಕದ ಡಿಎಲ್‌ ಹೊಂದಿದವರು ಹಾಗೂ ಹಳೆ ಸ್ಮಾರ್ಟ್‌ಕಾರ್ಡ್‌ ಹೊಂದಿದವರು ಅವಧಿ ಮುಕ್ತಾಯಗೊಂಡ ಬಳಿಕ ನವೀಕರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈಗಲೂ ಅರ್ಜಿ ಸಲ್ಲಿಕೆಯಾಗುತ್ತಲೇ ಇದೆ. ಇದೊಂದು ನಿರಂತರ ಪ್ರಕ್ರಿಯೆಯಾದರೂ ಅಂತಹವರಿಗೆ ಡಿಎಲ್‌ ನವೀಕರಣಗೊಂಡು ಹೊಸ ಸ್ಮಾರ್ಟ್‌ಕಾರ್ಡ್‌ ಸಿಕ್ಕಿಲ್ಲ. ಹೊಸ ಸ್ಮಾರ್ಟ್‌ಕಾರ್ಡ್‌ ಇಲ್ಲದಿದ್ದರೆ ಸಾರಿಗೆ ನಿಯಮ ಪ್ರಕಾರ ವಾಹನ ಚಾಲನೆ ಮಾಡುವಂತಿಲ್ಲ. ಇಂತಹ ಇಕ್ಕಟ್ಟಿನ ಪರಿಸ್ಥಿಯನ್ನು ಎದುರಿಸುವಂತಾಗಿದೆ.

ಮಂಗಳೂರು ಆರ್‌ಟಿಒ ಕಚೇರಿ ವ್ಯಾಪ್ತಿಯಲ್ಲಿ ಡಿಎಲ್‌ ನವೀಕರಣ ಕೋರಿ ಅನೇಕ ಮಂದಿ ಅರ್ಜಿ ಸಲ್ಲಿಸುತ್ತಿದ್ದಾರೆ. ಅರ್ಜಿ ಸಲ್ಲಿಕೆಯಾದ ಬಳಿಕ ನವೀಕರಣ ಪ್ರಕ್ರಿಯೆ ನಡೆಯಬೇಕು. ಪುಸ್ತಕದ ಪರವಾನಿಗೆ ದಾಖಲೆ, ಆಧಾರ್‌ ಲಿಂಕ್‌, ವೈದ್ಯಕೀ ಸರ್ಟಿಫಿಕೆಟ್‌ ಲಿಂಕ್‌ ಬಗ್ಗೆ ಪರಿಶೀಲನೆ ನಡೆಸುತ್ತಾರೆ. ಅರ್ಜಿ ವಿಲೇವಾರಿ ಹಂತದಲ್ಲಿ ಚಲನ್‌ ಮೂಲಕ ಹಣ ಪಾವತಿಸಬೇಕು. ಕೊನೆಗೆ ಹೊಸ ಸ್ಮಾರ್ಟ್‌ಕಾರ್ಡ್‌ ನೀಡಲಾಗುತ್ತದೆ. ಇಷ್ಟೆಲ್ಲ ಪ್ರಕ್ರಿಯೆಗಳಿಗೆ 15 ರಿಂದ 1 ತಿಂಗಳು ಅವಧಿ ಬೇಕು. ಆದರೆ ಮಂಗಳೂರು ಆರ್‌ಟಿಒ ಕಚೇರಿಗೆ ಅರ್ಜಿ ಸಲ್ಲಿಸಿ ಎರಡು ತಿಂಗಳು ಕಳೆದರೂ ಇನ್ನೂ ಅರ್ಜಿ ವಿಲೇವಾರಿಯೇ ಆಗುತ್ತಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ, ಅಧಿಕಾರಿಗಳ ಟೇಬಲ್‌ನಲ್ಲೇ ಇದೆ ಎನ್ನುವ ಸಮಜಾಯಿಷಿ ಸಿಗುತ್ತದೆ ಎನ್ನುತ್ತಾರೆ ನೊಂದ ಅರ್ಜಿದಾರರು. ನವೀಕರಣವಾಗದೆ ತೊಡಕು:

ಡ್ರೈವಿಂಗ್‌ ಲೈಸೆನ್ಸ್‌ ಸೂಕ್ತ ಸಮಯದಲ್ಲಿ ನವೀಕರಣವಾಗದಿದ್ದರೆ ವಾಹನ ಚಾಲನೆಗೆ ತೊಡಕಾಗುತ್ತದೆ. ಅವಧಿ ಮೀರಿದ ಪರವಾನಿಗೆಯಲ್ಲಿ ವಾಹನ ಚಲಾಯಿಸಲು ಅವಕಾಶ ಇಲ್ಲ. ಅಪಘಾತವಾದರೆ ಪರಿಹಾರವೂ ಮರೀಚಿಕೆ. ಹಾಗೆಂದು ಬೇರೆ ಹೊಸದಾಗಿ ಡಿಎಲ್‌ ಮಾಡುವಂತೆಯೂ ಇಲ್ಲ. ಡಿಎಲ್‌ ನವೀಕರಣ ವಿಳಂಬದಿಂದಾಗಿ ಅರ್ಜಿ ಸಲ್ಲಿಸಿದವರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ.

ಅರ್ಜಿ ಸಲ್ಲಿಸಿದ ಬಳಿಕ ಡಿಎಲ್‌ ನವೀಕರಣ ಪ್ರಕ್ರಿಯೆಯ ಪ್ರತಿ ಹಂತದಲ್ಲೂ ಅರ್ಜಿದಾರರಿಗೆ ಎಸ್‌ಎಂಎಸ್‌ ರವಾನೆಯಾಗುತ್ತದೆ. ನವೀಕರಣ ಅನುಮೋದನೆಗೊಂಡ ಬಳಿಕ ಅರ್ಜಿದಾರರ ಡಿಎಲ್‌ ಡಿಜಿ ಲಾಕರ್‌ ಅಥವಾ ಇ ಪರಿವಾಹನ್‌ ಪೋರ್ಟಲ್‌ನಲ್ಲೂ ಲಭ್ಯವಿರುತ್ತದೆ. ಆದರೆ ಇಲ್ಲಿ ನವೀಕರಣ ಅನುಮೋದನೆಗೊಳ್ಳದಿದ್ದರೆ ನವೀಕೃತ ಡಿಎಲ್‌ ಪೋರ್ಟಲ್‌ ಅಥವಾ ಡಿಜಿ ಲಾಕರ್‌ನಲ್ಲೂ ಸಿಗುವುದಿಲ್ಲ.

ಸ್ಮಾರ್ಟ್‌ಕಾರ್ಡ್‌ ಪೂರೈಕೆಯೂ ವಿಳಂಬ

ಸಾರಿಗೆ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಅವಕಾಶ ನೀಡಿದ ಬಳಿಕ ಸ್ಮಾರ್ಟ್‌ಕಾರ್ಡ್‌ ಪೂರೈಕೆಯನ್ನು ಹೊರಗುತ್ತಿಗೆಗೆ ನೀಡಲಾಗಿದೆ.

2005ಕ್ಕೆ ಮುನ್ನ ಡಿಎಲ್‌ ಪುಸ್ತಕ ರೂಪದಲ್ಲಿದ್ದರೆ, 2008 ರಿಂದ ಸ್ಮಾರ್ಟ್‌ಕಾರ್ಡ್‌ಗೆ ಪರಿವರ್ತನೆಗೊಂಡಿತು. ಈಗ ಚಿಪ್ ಅಳವಡಿಕೆಯ ಹೊಸ ಸ್ಮಾರ್ಟ್‌ಕಾರ್ಡ್‌ನ್ನು ಕಡ್ಡಾಯಗೊಳಿಸಲಾಗಿದೆ. ಹೊಸ ಸ್ಮಾರ್ಟ್‌ಕಾರ್ಡ್‌ನ್ನು ಖಾಸಗಿ ಕಂಪನಿಯೊಂದು ಸರಬರಾಜು ಮಾಡುತ್ತಿದೆ. ಇಲ್ಲಿ ಕೂಡ ಕಳೆದ ಎರಡು ತಿಂಗಳಿಂದ ಸ್ಮಾರ್ಟ್‌ಕಾರ್ಡ್‌ ಪೂರೈಕೆಯಾಗದೆ ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಪುತ್ತೂರು, ಬಂಟ್ವಾಳದಲ್ಲಿ ಸಮಸ್ಯೆ ಇಲ್ಲ:

ಪ್ರಾದೇಶಿಕ ಸಾರಿಗೆ ಕಚೇರಿ ಹೊಂದಿರುವ ಪುತ್ತೂರು, ಬಂಟ್ವಾಳಗಳಲ್ಲಿ ಡಿಎಲ್‌ ನವೀಕರಣ ಸಮಸ್ಯೆ ಇಲ್ಲ. ಅಲ್ಲಿ ಕೂಡ ಸುಮಾರು ಎರಡು ಸಾವಿರದಷ್ಟು ಅರ್ಜಿ ನವೀಕರಣಕ್ಕೆ ಕಾಯುತ್ತಿವೆ. ಆದರೆ ಸಲ್ಲಿಸಿದ ಅರ್ಜಿ ವಿಲೇವಾರಿಗೊಂಡು ಅನುಮೋದನೆ ಕೂಡ ಕ್ಷಿಪ್ರಗತಿಯಲ್ಲಿ ನಡೆಯುತ್ತಿದೆ. ಹಾಗಾಗಿ ಅಲ್ಲಿ ಹೊಸ ಸ್ಮಾರ್ಟ್‌ಕಾರ್ಡ್‌ ಪೂರೈಕೆಯಾಗದೆ ಕಾರ್ಡ್‌ ನೀಡಿಕೆಯಲ್ಲಿ ವಿಳಂಬವಾಗಿಯೇ ವಿನಃ ಅಧಿಕಾರಿಗಳಿಂದ ಯಾವುದೇ ತೊಂದರೆ ಆಗಿಲ್ಲ ಎನ್ನುತ್ತಾರೆ ಸ್ಥಳೀಯ ಅರ್ಜಿದಾರರು. ಪುಸ್ತಕದ ಡಿಎಲ್‌ ಹಾಗೂ ಹಳೆ ಸ್ಮಾರ್ಟ್‌ಕಾರ್ಡ್‌ ಡಿಎಲ್‌ ಹೊಂದಿರುವವರ ಬ್ಯಾಕ್‌ಲಾಗ್‌ ಪರಿಶೀಲನೆಗೆ ಸ್ವಲ್ಪ ಕಾಲ ಬೇಕಾಗುವುದರಿಂದ ಡಿಎಲ್‌ ನವೀಕರಣ ತುಸು ವಿಳಂಬವಾಗುತ್ತಿದೆ. ಆದರೂ ಒಂದೆರಡು ವಾರಗಳಲ್ಲಿ ಡಿಎಲ್‌ ನವೀಕರಣ ಪ್ರಕ್ರಿಯೆ ತ್ವರಿತಗೊಳಿಸಿ ಬಾಕಿ ಇರುವುದನ್ನು ಪೂರ್ತಿಗೊಳಿಸಲಾಗುವುದು.

-ಶ್ರೀಧರ ಮಲ್ನಾಡ್‌, ಪ್ರಾದೇಶಿಕ ಸಾರಿಗೆ ಅಧಿಕಾರಿ, ಮಂಗಳೂರು