ಸಾರಾಂಶ
ಪ್ರತಿ ವರ್ಷ ಬೇಸಿಗೆಯ ರಜಾ ಅವಧಿಯಲ್ಲಿ ಬೇಸಿಗೆ ಶಿಬಿರ ಆಯೋಜಿಸುವ ಮೂಲಕ ಮಕ್ಕಳಲ್ಲಿ ಅಡಗಿರುವ, ಪ್ರತಿಭೆ ಪ್ರದರ್ಶನಕ್ಕೆ ಸೂಕ್ತ ವೇದಿಕೆಯನ್ನು ಕಲ್ಪಿಸಿ ಕೊಡುತ್ತಾ ಬರುತ್ತಿದೆ.
ಹೂವಿನಹಡಗಲಿ: ಪಟ್ಟಣದಲ್ಲಿ ರಂಗಭಾರತಿ ಸಂಸ್ಥೆಯು ಆಯೋಜಿಸಿದ ಮಕ್ಕಳ ಬೇಸಿಗೆ ಶಿಬಿರ ಚಿಣ್ಣರ ಮೇಳಕ್ಕೆ ಸರಿಗಮಪ ಲಿಟಲ್ ಚಾಂಪ್ಸ್ ಗಾಯಕಿ ನಯನ ವಸಂತ ಅಳವಂಡಿ ನೆರವೇರಿಸಿದರು.
ಎಂ.ಪಿ. ಪ್ರಕಾಶ್ ಸಮಾಜಮುಖಿ ಟ್ರಸ್ಟ್ ಅಧ್ಯಕ್ಷೆ ಎಂ.ಪಿ. ವೀಣಾ ಮಹಾಂತೇಶ್ ಮಾತನಾಡಿ, ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪಠ್ಯೇತರ ಚಟುವಟಿಕೆಗಳು ಬಹಳ ಮುಖ್ಯವಾಗಿದೆ. ಬೇಸಿಗೆ ರಜಾ ದಿನಗಳಲ್ಲಿ ಚಿನ್ನರ ಮೇಳದಂತಹ ಶಿಬಿರಗಳು ತುಂಬ ಪ್ರಮುಖ ಪಾತ್ರ ವಹಿಸಿವೆ. ಮಕ್ಕಳಲ್ಲಿ ಶಿಸ್ತು, ಸಮಯಪ್ರಜ್ಞೆ ಮತ್ತು ಸಾಂಸ್ಕೃತಿಕ ಪ್ರಜ್ಞೆ, ಐತಿಹಾಸಿಕ ಪ್ರಜ್ಞೆ, ನಾಟಕ, ನೃತ್ಯ ಹಾಗೂ ಜಾನಪದ ಕಲೆಯ ಹಲವು ಪ್ರಕಾರಗಳ ಪರಿಚಯದೊಂದಿಗೆ ಉತ್ತಮ ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಚಿಣ್ಣರ ಮೇಳ ಮಹತ್ವದ ಪಾತ್ರ ವಹಿಸುತ್ತವೆ ಎಂದರು.ಕಳೆದ 15 ವರ್ಷಗಳಿಂದ ಹೂವಿನಹಡಗಲಿಯ ರಂಗಭಾರತಿ ಸಂಸ್ಥೆಯು, ಪ್ರತಿ ವರ್ಷ ಬೇಸಿಗೆಯ ರಜಾ ಅವಧಿಯಲ್ಲಿ ಬೇಸಿಗೆ ಶಿಬಿರ ಆಯೋಜಿಸುವ ಮೂಲಕ ಮಕ್ಕಳಲ್ಲಿ ಅಡಗಿರುವ, ಪ್ರತಿಭೆ ಪ್ರದರ್ಶನಕ್ಕೆ ಸೂಕ್ತ ವೇದಿಕೆಯನ್ನು ಕಲ್ಪಿಸಿ ಕೊಡುತ್ತಾ ಬರುತ್ತಿದೆ ಎಂದರು.
ಸಾಹಿತಿ ತೋ.ಮ. ಶಂಕ್ರಯ್ಯ ಮಾತನಾಡಿ, ಇಂದಿನ ವೈಜ್ಞಾನಿಕ ಜಗತ್ತಿನಲ್ಲಿ ಮಕ್ಕಳನ್ನು ಸಂಸ್ಕೃತರನ್ನಾಗಿಸಲು, ತಂದೆ-ತಾಯಿ ಮತ್ತು ಸಮಾಜದ ಜವಾಬ್ದಾರಿ ತುಂಬ ಇದೆ. ಅದರಿಂದ ಅವರಿಗೆ ಮನೆಯಲ್ಲಿ ಸೂಕ್ತ ತಿಳಿವಳಿಕೆ ನೀಡಿ ಉತ್ತಮ ನಾಗರಿಕರನ್ನಾಗಿ ಮಾಡಬೇಕಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಚಾರ್ಯ ಶಾಂತಮೂರ್ತಿ ಬಿ.ಕುಲಕರ್ಣಿ ಮಾತನಾಡಿ, ಎಂ.ಪಿ. ಪ್ರಕಾಶರಿಂದ ಸ್ಥಾಪಿತವಾಗಿರುವ ರಂಗಭಾರತಿ ಸಂಸ್ಥೆಯನ್ನು ಮಕ್ಕಳಾದ ಸುಮಾ ವಿಜಯ, ವೀಣಾ ಮಹಾಂತೇಶ್ ಮುನ್ನಡೆಸುತ್ತಿದ್ದಾರೆ. ಮಕ್ಕಳು ತಮ್ಮ ಬದುಕನ್ನು ವಿವಿಧ ಆಯಾಮಗಳಲ್ಲಿ ಆನಂದಿಸುವ ದಾರಿ ಹಾಗೂ ಬದುಕಿನ ಮೌಲ್ಯಗಳನ್ನು ಚಿಣ್ಣರ ಮೇಳ ಕಲಿಸುತ್ತದೆ ಎಂದರು.
ರಂಗಭಾರತಿ ನಿರ್ದೇಶಕ ವಿಜಯ್ ಬಿ.ಹಿರೇಮಠ, ಪ್ರಭು ಸೊಪ್ಪಿನ್, ಶಿಬಿರದ ನಿರ್ದೇಶಕ ಪಿ.ಆನಂದ ಬೆಂಗಳೂರು ಉಪಸ್ಥಿತರಿದ್ದರು.ಶಿಕ್ಷಕಿ ಶ್ರೀಲತಾ ನಿರೂಪಿಸಿದರು. ಶಿಕ್ಷಕ ಪಿ.ಎಂ. ಕೊಟ್ರಸ್ವಾಮಿ ಸ್ವಾಗತಿಸಿದರು. ಶಿಕ್ಷಕ ಎ.ಚಂದ್ರಪ್ಪ ವಂದಿಸಿದರು.