ಅಮಿತ್ ಶಾ ಸಂಪುಟದಿಂದ ಕೈಬಿಡಿ : ಜಯನ್ ಮಲ್ಪೆ

| Published : Dec 25 2024, 12:48 AM IST

ಸಾರಾಂಶ

ಅಂಬೇಡ್ಕರ್‌ಗೆ ಅಪಮಾನ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿ ಮಂಗಳವಾರ ಅಂಬೇಡ್ಕರ್ ಯುವಸೇನೆಯ ಉಡುಪಿ ಜಿಲ್ಲಾ ಘಟಕ ವತಿಯಿಂದ ಅಜ್ಜರಕಾಡು ಹುತಾತ್ಮ ಸ್ಮಾರಕ ಬಳಿ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಅಂಬೇಡ್ಕರ್‌ಗೆ ಅಪಮಾನ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿ ಮಂಗಳವಾರ ಅಂಬೇಡ್ಕರ್ ಯುವಸೇನೆಯ ಉಡುಪಿ ಜಿಲ್ಲಾ ಘಟಕ ವತಿಯಿಂದ ಅಜ್ಜರಕಾಡು ಹುತಾತ್ಮ ಸ್ಮಾರಕ ಬಳಿ ಪ್ರತಿಭಟನೆ ನಡೆಸಲಾಯಿತು.ಈ ಸಂದರ್ಭ ಮಾತನಾಡಿದ ದಲಿತ ಚಿಂತಕ ಜಯನ್ ಮಲ್ಪೆ, ಕೇಂದ್ರ ಗೃಹಸಚಿವ ಅಮಿತ್ ಶಾ, ತನ್ನ ಮೂರ್ಖತನದ ಪರಮಾವಧಿಯನ್ನು ಪ್ರದರ್ಶಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಮನುಸ್ಮೃತಿ ಪುಸ್ತಕಕ್ಕೆ ಬೆಂಕಿ ಹಚ್ಚಿ ಮಾತನಾಡಿದ ದಸಂಸ ಭೀಮವಾದ ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ಶೇಖರ್ ಹಾವಂಜೆ, ಮೀಸಲಾತಿಯ ಲಾಭ ಪಡೆದ ಜನಪ್ರತಿನಿಧಿಗಳು ಅಂಬೇಡ್ಕರ್‌ಗೆ ದ್ರೋಹ ಎಸೆಯುತಿದ್ದಾರೆ ಎಂದು ಆರೋಪಿಸಿದರು.ಸಹಬಾಳ್ವೆಯ ಮುಖಂಡ ಅಮೃತ್ ಶೆಣೈ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಆಡಳಿತ ನಡೆಸುವವರು ಈ ಸಂವಿಧಾನವನ್ನು ಹೇಗೆ ನಾಶಮಾಡಬಹುದು ಚಿಂತಿಸುತ್ತಿದ್ದಾರೆ. ಇದು ಆರ್‌ಎಸ್‌ಎಸ್‌ನ ಮಾನಸಿಕತೆಯ ಪ್ರದರ್ಶನ ಎಂದು ಅಭಿಪ್ರಾಯಪಟ್ಟರು.

ಹಿರಿಯ ದಲಿತ ಚಿಂತಕ ನಾರಾಯಣ ಮಣೂರು ಮಾತನಾಡಿ, ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರನ್ನು ಲೇವಡಿ ಮಾಡುವ ವೈದಿಕವಾದ ಪ್ರತಿಪಾದಿಸುವ ಗೃಹಮಂತ್ರಿ ಅಮಿತ್ ಶಾ ಅವರನ್ನು ಕೇಂದ್ರ ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.

ಬಹುಜನ ಪಕ್ಷದ ಜಿಲ್ಲಾಧ್ಯಕ್ಷ ವಕೀಲ ಮಂಜುನಾಥ ಮತ್ತು ದಲಿತ ಹಕ್ಕುಗಳ ಹೋರಾಟ ಸಮಿತಿಯ ಸಂಜೀವ ಬಳ್ಕೂರು ಮಾತನಾಡಿದರು. ಪ್ರತಿಭಟನೆಯಲ್ಲಿ ಉಡುಪಿ ವಕೀಲರ ಸಂಘದ ಅಧ್ಯಕ್ಷ ರೋನಾಲ್ಡ್ ಪ್ರವೀಣ್ ಕುಮಾರ್, ಮಹಾಬಲ ಕುಂದರ್, ಶೋಭಾ ನಾಯ್ಕ್, ಪೃಥ್ವಿರಾಜ್ ಶೆಟ್ಟಿ, ಗಿರೀಶ್ ಉದ್ಯಾವರ, ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ, ದಲಿತ ಮುಖಂಡರಾದ ಆನಂದ ಬ್ರಹ್ಮಾವರ, ಕೃಷ್ಣ ಪಡುಬಿದ್ರಿ, ಗುಣವಂತ, ರಾಮ ಮೈಯಾಡಿ, ಪ್ರಶಾಂತ್ ತೊಟ್ಟಂ, ಶೋಭಾ ಜಯಸಾಲ್ಯಾನ್ ಮುಂತಾದವರು ಭಾಗವಹಿಸಿದ್ದರು.