ಪಿಪಿಪಿ ಕೈಬಿಡಿ, ಸರ್ಕಾರಿ ವೈದ್ಯ ಕಾಲೇಜು ಸ್ಥಾಪಿಸಿ

| Published : Sep 03 2025, 01:02 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕು, ಪಿಪಿಪಿ ಮಾದರಿಯ ವೈದ್ಯಕೀಯ ಕಾಲೇಜನ್ನು ಕೈ ಬಿಡಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕು, ಪಿಪಿಪಿ ಮಾದರಿಯ ವೈದ್ಯಕೀಯ ಕಾಲೇಜನ್ನು ಕೈ ಬಿಡಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.

ನಗರದ ಡಾ.ಅಂಬೇಡ್ಕರ ವೃತ್ತದಲ್ಲಿ ಜಮಾಯಿಸಿದ ಎಬಿವಿಪಿ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಸರ್ಕಾರಿ ಮೆಡಿಕಲ್ ಕಾಲೇಜು ಬೇಕು ಎಂದು ಆಗ್ರಹಿಸಿದರು. ಬಳಿಕ ಜಿಲ್ಲಾಧಿಕಾರಿಗಳಿಗೆ ಮುತ್ತಿಗೆ ಹಾಕಲು ಮುಂದಾದಾಗ ಪೊಲೀಸರು ಹೋರಾಟಗಾರರನ್ನು ತಡೆದರು. ಈ ವೇಳೆ ಪೊಲೀಸರು ಹಾಗೂ ಎಬಿವಿಪಿ ಕಾರ್ಯಕರ ಮಧ್ಯೆ ವಾಗ್ವಾದ ಕೂಡ ನಡೆಯಿತು. ಬಳಿಕ ಪೊಲೀಸರು ಎಬಿವಿಪಿ ಕಾರ್ಯಕರ್ತರನ್ನು ಬಂಧನ ಮಾಡಿ ಬಳಿಕ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಎಬಿವಿಪಿ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಮಾತನಾಡಿ, ನಗರದ ಜಿಲ್ಲಾಸ್ಪತ್ರೆಯಲ್ಲಿ ಸರ್ಕಾರಿ ಪಿಪಿಪಿ ಮಾದರಿಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಲು ಮುಂದಾಗಿರುವುದನ್ನು ಎಬಿವಿಪಿ ತೀವ್ರವಾಗಿ ಖಂಡಿಸುತ್ತದೆ. ಜಿಲ್ಲಾಸ್ಪತ್ರೆಯಲ್ಲಿ ಈಗಾಗಲೇ ಸರ್ಕಾರಿ ವೈದ್ಯಕೀಯ ಕಾಲೇಜನ್ನು ಸ್ಥಾಪನೆ ಮಾಡಲು ಬೇಕಿರುವ ಎಲ್ಲ ಮೂಲಭೂತ ಸೌಲಭ್ಯಗಳು ಇವೆ. ಆದರೂ ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಮುಂದಾಗಿರುವುದಕ್ಕೆ ಕಾರಣದ ಸ್ಪಷ್ಟನೆ ಇಲ್ಲದಂತಾಗಿದೆ. ಈಗಾಗಲೇ ನಗರದಲ್ಲಿಯೇ ಎರಡು ಖಾಸಗಿ ವೈದ್ಯಕೀಯ ಕಾಲೇಜುಗಳು ಇವೆ. ಹಾಗಾಗಿ ನಗರದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಯ ನಿರ್ಧಾರದಿಂದ ಸರ್ಕಾರ ತಕ್ಷಣವೇ ಹಿಂದೆ ಸರಿದು ಸರ್ಕಾರಿ ವೈದ್ಯಕೀಯ ಕಾಲೇಜನ್ನು ಸ್ಥಾಪನೆ ಮಾಡಬೇಕು. ಶಿಕ್ಷಣ ಕೇವಲ ಹಣವಂತರ ಸ್ವತ್ತಲ್ಲ, ಅದು ಸರ್ವರಿಗೂ ಸಿಗುವಂತಾಗಬೇಕು ಎಂದು ಆಗ್ರಹಿಸಿದರು.

ಎಬಿವಿಪಿ ಮುಖಂಡ ಹರ್ಷ ನಾಯಕ ಮಾತನಾಡಿ, ಒಬ್ಬ ವೈದ್ಯ ರೋಗಿಗಳ ವಿಷಯದಲ್ಲಿ ತನ್ನ ಪರಿಧಿಯಲ್ಲಿ ಸರ್ವಕಾಲ ರಕ್ಷಕನ ಪಾತ್ರವನ್ನು ಪೋಷಿಸುತ್ತಾನೆ. ಆದ್ದರಿಂದ ದೇವರ ಸಮಾನನು ಎಂದು ಅರ್ಥವಿದೆ. ಇಂತಹ ವೈದ್ಯರಾಗಬೇಕು, ಸೇವೆ ಸಲ್ಲಿಸಬೇಕು ಎನ್ನುವ ಕನಸನ್ನು ಸಾವಿರಾರು ವಿದ್ಯಾರ್ಥಿಗಳು ಇಟ್ಟುಕೊಂಡಿರುತ್ತಾರೆ. ಅವರಿಗೆ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಎಬಿವಿಪಿ ಮುಖಂಡರಾದ ಸುಜ್ಞಾತಾ ಕುಲಕರ್ಣಿ, ಮಲ್ಲಿಕಾರ್ಜುನ ಮಾಳಿ, ಮಂಜುನಾಥ ಹಳ್ಳಿ, ಸಂದೀಪ ಅರಳಗುಂಡಿ, ಶಶಿಕಾಂತ ರಾಕ್ಲೆ, ಐಶ್ವರ್ಯ ಆಸಂಗಿ, ಪ್ರವೀಣ ಬಿರಾದಾರ, ಸ್ನೇಹಾ ಹಿರೇಮಠ, ಚೇತನ ಕೋರವಾರ, ಬಸವರಾಜ ಪೂಜಾರಿ, ಬಾಲಾಜಿ ಬಿರಾದಾರ, ಗೌರೀಶ, ಸುನೀಲ ರಾಠೋಡ, ತ್ರಿಶಲಾ ರಾಠೋಡ, ದಾನಮ್ಮ ಹೊಸಮನಿ ಇತರರು ಭಾಗವಹಿಸಿದ್ದರು.