ಸಾರಾಂಶ
ಈಗಿರುವ ವಿಶ್ವವಿದ್ಯಾಲಯಗಳು ಆರ್ಥಿಕ ಹೊರೆ ಎದುರಿಸುತ್ತಿವೆ. ಜತೆಗೆ ಹೊಸ ವಿವಿ ನಡೆಸುವುದು ಕಷ್ಟವಾಗುತ್ತದೆ ಎಂಬ ಕಾರಣವೊಡ್ಡಿ ಮುಚ್ಚಲು ಮುಂದಾಗಿರುವುದು ಖಂಡನೀಯ. ಇಂತಹ ನಿರ್ಣಯ ಕೈಬಿಟ್ಟು ಉನ್ನತ ಶಿಕ್ಷಣಕ್ಕೆ ಹೆಚ್ಚು ಅನುದಾನ ನೀಡಬೇಕು.
ಕೊಪ್ಪಳ:
ಈ ಹಿಂದಿನ ಬಿಜೆಪಿ ಸರ್ಕಾರ ಪ್ರಾರಂಭಿಸಿರುವ 10 ವಿಶ್ವವಿದ್ಯಾಲಯಗಳಲ್ಲಿ 9 ವಿವಿ ಮುಚ್ಚಲು ಮುಂದಾಗಿರುವ ಕಾಂಗ್ರೆಸ್ ಸರ್ಕಾರ ಈ ನಿರ್ಧಾರದಿಂದ ಹಿಂದೇ ಸರಿಯಬೇಕೆಂದು ಎಂದು ರಾಜ್ಯ ಎಸ್‌ಐಒ ಸಂಘಟನೆಯ ರಾಜ್ಯ ಸಲಹೆಗಾರ ಪೀರ ಲಟಗೇರಿ ಒತ್ತಾಯಿಸಿದ್ದಾರೆ.ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಿರುವ ವಿಶ್ವವಿದ್ಯಾಲಯಗಳು ಆರ್ಥಿಕ ಹೊರೆ ಎದುರಿಸುತ್ತಿವೆ. ಜತೆಗೆ ಹೊಸ ವಿವಿ ನಡೆಸುವುದು ಕಷ್ಟವಾಗುತ್ತದೆ ಎಂಬ ಕಾರಣವೊಡ್ಡಿ ಮುಚ್ಚಲು ಮುಂದಾಗಿರುವುದು ಖಂಡನೀಯ. ಇಂತಹ ನಿರ್ಣಯ ಕೈಬಿಟ್ಟು ಉನ್ನತ ಶಿಕ್ಷಣಕ್ಕೆ ಹೆಚ್ಚು ಅನುದಾನ ನೀಡಬೇಕೆಂದು ಹೇಳಿದ್ದಾರೆ.
ವಿವಿ ಪ್ರಾರಂಭಿಸುವ ಮೊದಲೆ ಯೋಚಿಸಬೇಕಿತ್ತು. ಜಿಲ್ಲೆಗೊಂದು ವಿವಿ ತೆರೆದರೆ ಅದರ ಘನತೆಯೂ ಕಡಿಮೆಯಾಗಿದೆ ಎನ್ನಲಾಗಿದೆ. ಆರಂಭದಲ್ಲಿಯೇ ಈ ಕುರಿತು ಚಿಂತಿಸದೆ ಇದೀಗ ಅವುಗಳನ್ನು ಮುಚ್ಚುವುದು ಸರಿಯಲ್ಲ ಎಂದರು. ಶಿಕ್ಷಣ ಸಮವರ್ಥಿ ಪಟ್ಟಿಯಲ್ಲಿದೆ. ಹೀಗಾಗಿ, ಕೇಂದ್ರ ಸರ್ಕಾರವೂ ಇದಕ್ಕೆ ಅನುದಾನ ನೀಡಬೇಕು. ಆದರೆ, ₹ 50 ಲಕ್ಷ ಕೋಟಿ ಬಜೆಟ್‌ನಲ್ಲಿ ಕೇವಲ ₹ 50 ಸಾವಿರ ಕೋಟಿ ಮಾತ್ರ ಶಿಕ್ಷಣಕ್ಕೆ ಮೀಸಲಿಡಲಾಗಿದೆ. ಇದು ಯಾತಕ್ಕೂ ಸಾಲದು, ಅನೇಕ ಆಯೋಗಗಳು ಕನಿಷ್ಠ ಶೇ. 6ರಷ್ಟು ಹಣವನ್ನು ಶಿಕ್ಷಣಕ್ಕೆ ನೀಡಬೇಕು ಎಂದು ಹೇಳಿವೆ. ಆದರೆ, ಈಗ ಕೇವಲ ಶೇ. 1ರಷ್ಟು ಅನುದಾನವನ್ನು ಕೇಂದ್ರ ಸರ್ಕಾರ ಮೀಟಲಿಟ್ಟಿಲ್ಲ ಎಂದು ಆರೋಪಿಸಿದರು. ರಾಜ್ಯ ಸರ್ಕಾರ ಇತರೆ ಯೋಜನೆಗಳಿಗೆ ಅನುದಾನ ಕಡಿಮೆ ಮಾಡಿ, ಶಿಕ್ಷಣಕ್ಕೆ ಆದ್ಯತೆ ನೀಡಿ, ಹೊಸ ವಿವಿ ಮುಚ್ಚಕೂಡದು, ಮುಚ್ಚಿದರೇ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಅಬುಬಕರ್ ಚಳಗೇರಿ. ಜಿಲ್ಲಾಧ್ಯಕ್ಷ ಫುರ್ಕಾನ್ ಅಲಿ. ಜಿಲ್ಲಾ ಕಾರ್ಯದರ್ಶಿ ಖಾಜಾಹುಸೇನ. ನಗರ ಘಟಕ ನಬಿಲ್ ಅಮೀನಪುರ ಇದ್ದರು.