ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಪ್ರವಾಸ ಕೈಗೊಂಡಿರುವ ಕೇಂದ್ರ ಬರ ಅಧ್ಯಯನ ತಂಡ ಎರಡನೇ ದಿನವಾದ ಮಂಗಳವಾರ ಹನೂರು ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬರದ ತೀವ್ರತೆ ಹಾಗೂ ಬೆಳೆಹಾನಿ ಕುರಿತು ಸಮಗ್ರ ಅಧ್ಯಯನ ನಡೆಸಿತು.
ಕನ್ನಡಪ್ರಭ ವಾರ್ತೆ ಹನೂರು
ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಪ್ರವಾಸ ಕೈಗೊಂಡಿರುವ ಕೇಂದ್ರ ಬರ ಅಧ್ಯಯನ ತಂಡ ಎರಡನೇ ದಿನವಾದ ಮಂಗಳವಾರ ಹನೂರು ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬರದ ತೀವ್ರತೆ ಹಾಗೂ ಬೆಳೆಹಾನಿ ಕುರಿತು ಸಮಗ್ರ ಅಧ್ಯಯನ ನಡೆಸಿತು.ಡಾ.ಸುದಾಮ್ ಭಾಗ್ ನೇತೃತ್ವದ ಆರು ಸದಸ್ಯರ ಕೇಂದ್ರ ತಂಡ ಬೆಳಿಗ್ಗೆಯಿಂದಲೇ ಹನೂರು ತಾಲೂಕಿನ ಹಳ್ಳಿಗಳಲ್ಲಿ ಸಂಚರಿಸಿ ರೈತರ ಜಮೀನುಗಳಿಗೆ ತೆರಳಿ ಬೆಳೆಗಳ ಸ್ಥಿತಿಗತಿಯನ್ನು ಪರಿಶೀಲಿಸಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶ್ರೀರೂಪಾ, ಜಿಲ್ಲಾ ಪಂಚಾಯತ್ ಸಿಇಒ ಮೋನಾ ರೋತ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಭಾನುಪ್ರಕಾಶ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ತಂಡಕ್ಕೆ ಸಾಥ್ ನೀಡಿದರು.
ಮೊದಲಿಗೆ ತಂಡವು ಹುಲ್ಲೇಪುರ ಗ್ರಾಮದ ರೈತ ಮಹಿಳೆ ರಾಜಮ್ಮಣ್ಣಿ ಅವರ ಜಮೀನಿಗೆ ಭೇಟಿ ನೀಡಿತು. ರಾಜಮ್ಮಣ್ಣಿ ಅವರು 2.42 ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದರು. ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಬಿತ್ತನೆ ಮಾಡಿದ ಮೆಕ್ಕೆಜೋಳ ಸಂಪೂರ್ಣವಾಗಿ ಒಣಗಿ ಹೋಗಿದೆ. ಬಿತ್ತನೆಗಾಗಿ ಮಾಡಿದ್ದ ಸಾಲ ತೀರಿಸುವುದು ಹೇಗೆ ಎಂದು ರೈತ ಮಹಿಳೆ ಕೇಂದ್ರ ಅಧಿಕಾರಿಗಳ ಮುಂದೆ ಕಣ್ಣೀರು ಹಾಕಿದರು. ಜೀವನೋಪಾಯಕ್ಕಾಗಿ ಕೇಂದ್ರ ಸರ್ಕಾರದಿಂದ ಸೂಕ್ತ ಪರಿಹಾರ ಹಾಗೂ ಬಿತ್ತನೆ ಬೀಜಕ್ಕೆ ಸಬ್ಸಿಡಿ ನೀಡಬೇಕು ಎಂದು ಮನವಿ ಮಾಡಿದರು.ನಂತರ ತಂಡವು ಹುಬ್ಬೆಹುಣಸೆ ಗ್ರಾಮದ ರೈತ ಪ್ರಕಾಶ್ ಅವರ ಹೈನುಗಾರಿಕೆ ಡೇರಿಗೆ ಭೇಟಿ ನೀಡಿತು. ಪ್ರಕಾಶ್ ಸುಮಾರು 300 ಹಸುಗಳನ್ನು ಸಾಕಾಣಿಕೆ ಮಾಡುತ್ತಿದ್ದು, ದಿನವೊಂದಕ್ಕೆ 2,500 ಲೀಟರ್ ಹಾಲು ಉತ್ಪಾದನೆ ಮಾಡುತ್ತಿದ್ದಾರೆ. ಆದರೆ ತೀವ್ರ ಬರಗಾಲದಿಂದ ಮೇವಿನ ಅಭಾವ ಉಂಟಾಗಿದ್ದು, ಹೊರಗಿನಿಂದ ದುಬಾರಿ ಬೆಲೆ ತೆತ್ತು ಮೇವು ತರಬೇಕಾಗಿದೆ. ಅಲ್ಲದೇ ಜಾನುವಾರುಗಳಿಗೆ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಿದೆ ಎಂದು ತಮ್ಮ ಸಂಕಷ್ಟವನ್ನು ತೋಡಿಕೊಂಡರು. ಗೋಶಾಲೆಗಳಿಗೆ ಮೇವು ಪೂರೈಕೆ ಹಾಗೂ ಹಾಲಿನ ದರ ಹೆಚ್ಚಳ ಮಾಡುವಂತೆ ಕೇಂದ್ರ ತಂಡಕ್ಕೆ ಪ್ರಕಾಶ್ ನಾಯ್ಡು ಮನವಿ ಮಾಡಿದರು.
ಮಧ್ಯಾಹ್ನದ ವೇಳೆ ತಂಡವು ಅಜ್ಜೀಪುರ ಗ್ರಾಮದ ರೈತ ಮಲ್ಲೇಗೌಡ ಅವರ ಅರಿಶಿನದ ಜಮೀನಿಗೆ ಭೇಟಿ ನೀಡಿತು. ಮಲ್ಲೇಗೌಡ ಅವರು ಎರಡು ಎಕರೆ ಪ್ರದೇಶದಲ್ಲಿ ಅರಿಶಿನ ಬಿತ್ತನೆ ಮಾಡಿದ್ದು, ಇದಕ್ಕಾಗಿ ಸುಮಾರು ಎರಡು ಲಕ್ಷ ರೂಪಾಯಿ ಖರ್ಚು ಮಾಡಿದ್ದರು. ಆದರೆ ಮಳೆಯಿಲ್ಲದೆ ಅರಿಶಿನ ಗಡ್ಡೆಗಳು ಕೊಳೆತು ಬೆಳೆ ಸಂಪೂರ್ಣ ನಾಶವಾಗಿದೆ. ಕುಡಿಯುವ ನೀರಿನ ಸಮಸ್ಯೆಯೂ ತೀವ್ರವಾಗಿದೆ ಎಂದು ಅಧಿಕಾರಿಗಳಿಗೆ ವಿವರಿಸಿದರು. ಹನೂರು ತಾಲೂಕಿನಲ್ಲಿ ಒಂದರಲ್ಲೇ ಸುಮಾರು 1800 ಹೆಕ್ಟೇರ್ ಪ್ರದೇಶದಲ್ಲಿ ಅರಿಶಿನ ಬೆಳೆ ಹಾನಿಗೀಡಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಕೇಂದ್ರ ತಂಡಕ್ಕೆ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಹನೂರು ಶಾಸಕ ಎಂ.ಆರ್.ಮಂಜುನಾಥ್, ಹನೂರು ತಾಲೂಕು ಅತ್ಯಂತ ಹಿಂದುಳಿದಿದ್ದು, ರೈತರು ಸಂಪೂರ್ಣವಾಗಿ ಮಳೆ ಆಧಾರಿತ ಕೃಷಿಯನ್ನು ನಂಬಿದ್ದಾರೆ. ಕೇಂದ್ರ ಸರ್ಕಾರ ಕೂಡಲೇ ರೈತರಿಗೆ ಬೆಳೆ ಪರಿಹಾರ, ಉದ್ಯೋಗ ಖಾತ್ರಿ ಯೋಜನೆಯಡಿ ಹೆಚ್ಚಿನ ದಿನಗಳ ಕೆಲಸ ಹಾಗೂ ಕುಡಿಯುವ ನೀರಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಅಧ್ಯಯನದ ನಂತರ ಮಾತನಾಡಿದ ಕೇಂದ್ರ ತಂಡದ ಮುಖ್ಯಸ್ಥ ಡಾ.ಸುದಾಮ್ ಭಾಗ್, ಪರಿಶೀಲಿಸಿದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ, ರಾಜ್ಯಕ್ಕೆ ಸೂಕ್ತ ಪರಿಹಾರ ಕೊಡಿಸಲು ಶಿಫಾರಸು ಮಾಡುವುದಾಗಿ ಭರವಸೆ ನೀಡಿದರು.ಜಿಲ್ಲಾಧಿಕಾರಿ ಶ್ರೀ ರೂಪ,ಜಿಲ್ಲಾ ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿ ಮೊನರೋತ್, ತಾಲೂಕು ದಂಡಾಧಿಕಾರಿ ಚೈತ್ರ ಹಾಗೂ ಪೊಲೀಸ್ ಅಧಿಕಾರಿಗಳು, ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು, ರೈತರು ಹಾಜರಿದ್ದರು.