ಬರ, ನರೇಗಾ ಹಣ ಸಾಲಕ್ಕೆ ಜಮಾ ಖಂಡನೀಯ: ಡಿ.ಸಿ.ತಮ್ಮಣ್ಣ

| Published : May 19 2024, 01:47 AM IST

ಬರ, ನರೇಗಾ ಹಣ ಸಾಲಕ್ಕೆ ಜಮಾ ಖಂಡನೀಯ: ಡಿ.ಸಿ.ತಮ್ಮಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಮಳೆ ಇಲ್ಲದೇ ಕಂಗೆಟ್ಟಿದ್ದ ರೈತರಿಗೆ ಈಗಷ್ಟೇ ಮಳೆ ಪ್ರಾರಂಭವಾಗಿದೆ. ಬರದಿಂದ ತತ್ತರಿಸಿದ ರೈತರು ಹಣವಿಲ್ಲದೇ ಮತ್ತೆ ಬ್ಯಾಂಕ್‌ಗೆ ಹೋಗುವ ಸನ್ನಿವೇಶ ಬಂದಿದೆ. ಇದರ ಮಧ್ಯೆ ಕೇಂದ್ರ ಸರ್ಕಾರ ರೈತರಿಗೆ ನೀಡಿರುವ ಬರ ಪರಿಹಾರವನ್ನು ಬ್ಯಾಂಕ್‌ಗಳು ಮುಟ್ಟುಗೋಲು ಹಾಕಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.

ಭಾರತೀನಗರ: ಕೇಂದ್ರ ಸರ್ಕಾರದಿಂದ ಬಂದಿರುವ ಬರ ಪರಿಹಾರ ಹಾಗೂ ನರೇಗಾ ಕೂಲಿ ಹಣವನ್ನು ರೈತರ ಸಾಲಕ್ಕೆ ಬ್ಯಾಂಕುಗಳು ಜಮೆ ಮಾಡಿಕೊಳ್ಳುತ್ತಿದ್ದು, ಇದು ಸಂಕಷ್ಟದಲ್ಲಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಮಾಜಿ ಶಾಸಕ ಡಿ.ಸಿ. ತಮ್ಮಣ್ಣ ತಿಳಿಸಿದ್ದಾರೆ.

ರೈತರ ಸಂಕಷ್ಟಕ್ಕೆ ಕೊನೆಯೇ ಇಲ್ಲ ಎನ್ನುವಂತಾಗಿದೆ. ಬರದಿಂದ ಕಂಗೆಟ್ಟಿರುವ ರೈತರ ನೆರವಿಗೆ ಧಾವಿಸಬೇಕಾಗಿದ್ದ ರಾಜ್ಯದ ಕಾಂಗ್ರೆಸ್ ಸರ್ಕಾರ ಕೈಕಟ್ಟಿ ಕೂತಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಕಿಡಿಕಾರಿದ್ದಾರೆ.

ಕೇಂದ್ರ ಸರ್ಕಾರದಿಂದ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಆಗಿದ್ದ ಬರ ಪರಿಹಾರ ಹಣವನ್ನು ಸಾಲಕ್ಕೆ ಜಮೆ ಮಾಡಿಕೊಳ್ಳುತ್ತಿರುವ ಬ್ಯಾಂಕ್‌ಗಳ ವರ್ತನೆ ನಿಜಕ್ಕೂ ಖಂಡನೀಯ. ಮೊದಲೇ ತೀವ್ರ ಬರ, ಬೆಳೆ ನಾಶದಿಂದ ಕಂಗೆಟ್ಟಿರುವ ರೈತರ ಕಣ್ಣಲ್ಲಿ ರಕ್ತ ಕಣ್ಣೀರು ತರಿಸುವ ಅಮಾನವೀಯ ಕ್ರಮ ಇದಾಗಿದೆ. ರಾಜ್ಯ ಸರ್ಕಾರ ಕೂಡಲೇ ಸಾಲ ನೀಡಿರುವ ಎಲ್ಲ ಬ್ಯಾಂಕ್‌ಗಳ ಮುಖ್ಯಸ್ಥರ ಸಭೆ ಕರೆದು, ಈ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸಿ, ಬರ ಪರಿಹಾರ ಮೊತ್ತವನ್ನು ಸಾಲಕ್ಕೆ ಜಮೆ ಮಾಡಬಾರದು ಎಂದು ತಾಕೀತು ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಮಳೆ ಇಲ್ಲದೇ ಕಂಗೆಟ್ಟಿದ್ದ ರೈತರಿಗೆ ಈಗಷ್ಟೇ ಮಳೆ ಪ್ರಾರಂಭವಾಗಿದೆ. ಬರದಿಂದ ತತ್ತರಿಸಿದ ರೈತರು ಹಣವಿಲ್ಲದೇ ಮತ್ತೆ ಬ್ಯಾಂಕ್‌ಗೆ ಹೋಗುವ ಸನ್ನಿವೇಶ ಬಂದಿದೆ. ಇದರ ಮಧ್ಯೆ ಕೇಂದ್ರ ಸರ್ಕಾರ ರೈತರಿಗೆ ನೀಡಿರುವ ಬರ ಪರಿಹಾರವನ್ನು ಬ್ಯಾಂಕ್‌ಗಳು ಮುಟ್ಟುಗೋಲು ಹಾಕಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.

ಕೂಡಲೇ ರಾಜ್ಯ ಸರ್ಕಾರ ಬರ ಪರಿಹಾರ ಹಾಗೂ ನರೇಗಾ ಹಣವನ್ನು ಜಮೆ ಮಾಡಿಕೊಳ್ಳದಂತೆ ಬ್ಯಾಂಕ್‌ನವರಿಗೆ ತಿಳಿಸದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.