ಬರದ ಜಿಲ್ಲೆ ನೀರಾವರಿ ನಾಡು ಮಾಡಬೇಕಿದೆ: ಗೋವಿಂದ ಕಾರಜೋಳ

| Published : Apr 24 2024, 02:17 AM IST

ಸಾರಾಂಶ

ಹಿರಿಯೂರು ತಾಲೂಕಿನ ಧರ್ಮ ಪುರದಲ್ಲಿ ಚಿತ್ರದುರ್ಗ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಚುನಾವಣೆ ಪ್ರಚಾರದ ರೋಡ್ ಶೋ ನಡೆಸಿದರು. ಈ ವೇಳೆ ಎಂ.ಜಯಣ್ಣ, ಡಿ.ಯಶೋಧರ್, ರವೀಂದ್ರಪ್ಪ ಮುಂತಾದವರು ಹಾಜರಿದ್ದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ಜಿಲ್ಲೆಯನ್ನು ನೀರಾವರಿಯ ನಾಡು ಮಾಡುವ ಸಂಕಲ್ಪ ಹೊಂದಿದ್ದೇನೆ ಎಂದು ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಗೋವಿಂದ ಕಾರಜೋಳ ಹೇಳಿದರು.

ತಾಲೂಕಿನ ಧರ್ಮಪುರದಲ್ಲಿ ಮಂಗಳವಾರ ಚುನಾವಣೆ ಪ್ರಯುಕ್ತ ಭರ್ಜರಿ ರೋಡ್ ಶೋ ನಡೆಸಿ ಮಾತನಾಡಿದ ಅವರು, ಇದು ಬರದ ನಾಡು. ಬಹಳಷ್ಟು ವರ್ಷ ಬರದ ಬೇಗೆಯಲ್ಲಿಯೇ ಕಳೆದಿದ್ದೀರಿ. ಅಪ್ಪರ್ ಭದ್ರಾ ಯೋಜನೆಗೆ ಸಿದ್ದರಾಮಯ್ಯನವರ ಸರ್ಕಾರ ಹಣ ಹಾಕಿ ಯೋಜನೆ ಪೂರ್ಣಗೊಳಿಸುವಲ್ಲಿ ವಿಫಲವಾಗಿದೆ. ಕೇಂದ್ರದ ಹಣ ಕಾಯುತ್ತಾ ಕಾಲಹರಣ ಮಾಡಿದ್ದೇ ಅವರ ಸಾಧನೆ. ಈ ಭಾಗದ ಜನರ, ರೈತರ ಸಂಕಷ್ಟದ ಅರಿವು ನನಗಿದೆ. ಬರದ ನಾಡಿನ ಹೆಸರು ಅಳಿಸಿ ನೀರಾವರಿಗೆ ಆದ್ಯತೆ ನೀಡಬೇಕಾಗಿದೆ. ಬಿಜೆಪಿ ಸರ್ಕಾರದಿಂದ ಮಾತ್ರ ನಿಮ್ಮ ಬೇಡಿಕೆ ಈಡೇರಬಲ್ಲುದು ಎಂಬುದನ್ನು ಮರೆಯಬೇಡಿ ಎಂದರು.

ಜೆಡಿಎಸ್ ಮುಖಂಡ ಎಂ.ರವೀಂದ್ರಪ್ಪ ಮಾತನಾಡಿ, ಸತತ 30 ವರ್ಷಗಳಿಗೂ ಅಧಿಕ ಅನುಭವವಿರುವ ಹಿರಿಯ ರಾಜಕಾರಣಿ ಗೋವಿಂದ ಕಾರಜೋಳರನ್ನು ಗೆಲ್ಲಿಸುವ ಮೂಲಕ ನಮ್ಮ ಭಾಗದ ದಶಕಗಳ ಸಂಕಷ್ಟಗಳನ್ನು ಬಗೆಹರಿಸಿಕೊಳ್ಳಬೇಕಿದೆ. ಇದು ನಾವು ನಮ್ಮ ಅನುಕೂಲಕ್ಕೆ ನೀಡುವ ಮತವಾದ್ದರಿಂದ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಲೇಬೇಕಾಗಿದೆ. ಜನ ಸೇವೆಯ ಗುರಿ ಹೊಂದಿರುವ ಗೋವಿಂದ ಕಾರಜೋಳರನ್ನು ಗೆಲ್ಲಿಸುವುದರಿಂದ ಅವರು ಕೇಂದ್ರದಲ್ಲಿ ಮಂತ್ರಿಯಾಗಲಿದ್ದಾರೆ ಎಂದರು.

ಈ ವೇಳೆ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಜಯಣ್ಣ, ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಡಿ.ಯಶೋಧರ, ಎಂಎಲ್‌ಸಿ ತಿಪ್ಪೇಸ್ವಾಮಿ, ಜೆಡಿಎಸ್ ತಾಲೂಕು ಅಧ್ಯಕ್ಷ ಹನುಮಂತರಾಯಪ್ಪ, ತಾಲೂಕು ಮಾಜಿ ಅಧ್ಯಕ್ಷ ಶಿವಪ್ರಸಾದ್ ಗೌಡ, ಬಿಜೆಪಿ ಮುಖಂಡ ಎನ್.ಆರ್. ಲಕ್ಷ್ಮಿಕಾಂತ್ ಸೇರಿ ಹಲವರಿದ್ದರು.