ಸಾರಾಂಶ
ಗಣೇಶ್ ತಮ್ಮಡಿಹಳ್ಳಿ
ಕನ್ನಡಪ್ರಭ ವಾರ್ತೆ ಶಿವಮೊಗ್ಗಜಿಲ್ಲೆಯಲ್ಲಿ ಈ ಬಾರಿ ಮಳೆ ಕೈ ಕೊಟ್ಟಿದೆ. ರಾಜ್ಯ ಸರ್ಕಾರ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದೆ. ಮಳೆ ಕೊರತೆ ಮಧ್ಯೆಯೂ ಬಿತ್ತನೆ ಮಾಡಿದ ಬೆಳೆ ಬಹುತೇಕ ಒಣಗಿಹೋಗಿವೆ. ಆದರೂ ಜಿಲ್ಲೆಯಲ್ಲಿ ರಾಸುಗಳ ಮೇವಿಗೆ ಕೊರತೆಯಾಗಿಲ್ಲ. ಮುಂದಿನ 25 ವಾರಗಳಿಗೆ ಆಗುವಷ್ಟು ಮೇವಿನ ದಾಸ್ತಾನಿದೆ.
ಜಿಲ್ಲೆಯಲ್ಲಿ ಒಟ್ಟು 7,41,461 ಜಾನುವಾರುಗಳಿವೆ. ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಒಂದು ವಾರಕ್ಕೆ 27,205 ಮೆಟ್ರಿಕ್ ಟನ್‌ನಷ್ಟು ಮೇವು ಅವಶ್ಯಕತೆ ಇದೆ. ಈಗ ಸದ್ಯ 8,06,151 ಮೆಟ್ರಿಕ್ ಟನ್ ಮೇವು ಲಭ್ಯವಿದ್ದು, 25 ವಾರಗಳಿಗೆ ಆಗುವಷ್ಟು ಮೇವು ಇದೆ. ಈಗ ಲಭ್ಯವಿರುವ ಮೇವು ಇನ್ನೂ 6 ತಿಂಗಳು ಬರುವುದರಿಂದ ಜಿಲ್ಲೆಯಲ್ಲಿ ಸದ್ಯ ಮೇವಿನ ಕೊರತೆ ಉಂಟಾಗುವುದಿಲ್ಲ. ಬೇಸಿಗೆಗೂ ಮುನ್ನ ಕೈಗೊಂಡ ಮುಂಜಾಗ್ರತಾ ಕ್ರಮದಿಂದಾಗಿ ಜಿಲ್ಲೆಯಲ್ಲಿ ಮುಂದಿನ 25 ವಾರಗಳಿಗೆ ಸಾಕಾಗುವಷ್ಟು ಮೇವು ದಾಸ್ತಾನಿದೆ. ಜಾನುವಾರುಗಳಿಗೆ ಮೇವಿನ ಕೊರತೆ ಇಲ್ಲ. ಹೀಗಾಗಿ ಮೇವು ಬ್ಯಾಂಕ್ ತೆರೆಯುವ ಪ್ರಮೇಯ ಕೂಡ ಒದಗಿಬಂದಿಲ್ಲ.ಕಳೆದ ಮುಂಗಾರಿನಲ್ಲಿ 75 ಸಾವಿರ ಹೆಕ್ಟೇರ್‌ನಷ್ಟು ಭತ್ತವನ್ನು ಬೆಳೆಯಲಾಗಿತ್ತು. ಇದಲ್ಲದೇ, ಈ ಬಾರಿ ಮುಂಗಾರಿನಲ್ಲಿ 73 ಸಾವಿರ ಹೆಕ್ಟೇರ್‌ನಷ್ಟು ಭತ್ತ ಬಿತ್ತನೆ ಮಾಡಲಾಗಿದೆ. ಈ ಬೆಳೆಯೂ ಈಗಾಗಲೇ ಕಟಾವಿಗೆ ಬಂದಿದೆ. ಮೇವಿಗೆ ಬರುವಷ್ಟು ಬೆಳೆ ಬಂದಿದೆ. ಅನಂತರ ಕಾಳುಗಟ್ಟುವ ಸಮಯದಲ್ಲಿ ಮಳೆ ಕೊರತೆ ಆಗಿದೆ. ಇದರಿಂದ ಬೆಳೆ ಕುಂಠಿತವಾದರೂ ಮೇವಿಗೆ ಸಮಸ್ಯೆ ಆಗುವುದಿಲ್ಲ. ಅಲ್ಲದೇ, ಈಗಾಗಲೇ ಹಲವು ಗ್ರಾಮದ ರೈತರು ಭತ್ತ ಹಾಗೂ ರಾಗಿ ಒಕ್ಕಣೆ ಸಮಯದಲ್ಲಿ ಮೇವನ್ನು ಸಂಗ್ರಹಿಸಿದ್ದಾರೆ. ಹೈನುಗಾರಿಕೆ ಮಾಡುವ ರೈತರು ಹಾಗೂ ಕೊಳವೆಬಾವಿ ಹೊಂದಿರುವ ಕೃಷಿಕರು ಪಶು ಇಲಾಖೆಯಲ್ಲಿ ಮೇವಿನ ಬೀಜ ಪಡೆದು, ಹಸಿರು ಮೇವು ಬೆಳೆದಿದ್ದಾರೆ. ಹೀಗಾಗಿ ಸದ್ಯ ಮೇವಿಗೆ ಸಮಸ್ಯೆ ಇಲ್ಲ. ಆದರೆ, ಹಿಂಗಾರು ಮಳೆ ಕೈ ಕೊಟ್ಟರೆ ಸ್ವಲ್ಪ ಪ್ರಮಾಣದ ಮೇವಿನ ಕೊರತೆ ಆಗಲಿದೆ ಎಂಬುದು ಪಶುಪಾಲನಾ ಇಲಾಖೆ ಅಧಿಕಾರಿಗಳ ಮಾಹಿತಿ.
18 ಸಾವಿರ ಮೇವಿನ ಕಿಟ್:ಜಿಲ್ಲೆಯಲ್ಲಿ ಸಧ್ಯಕ್ಕೆ ಮೇವಿಗೆ ಯಾವುದೇ ಕೊರತೆ ಇಲ್ಲವಾದರೂ, ಮುಂದೆ ಹಿಂಗಾರು ಮಳೆ ಕೈ ಕೊಟ್ಟು ಬೆಳೆ ಬಾರದೇ ಇದ್ದರೆ ಆಗ ಮೇವಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ಅಗತ್ಯ ಇರುವ ರೈತರಿಗೆ ಮೇವಿನ ಬೀಜದ ಕಿಟ್ ನೀಡಲು ಉದ್ದೇಶಿಸಿದೆ. ಈಗಾಗಲೇ ಜಿಲ್ಲೆಯಲ್ಲಿ ಒಟ್ಟು 18 ಸಾವಿರ ಕಿಟ್‌ಗಳು ಬಂದಿದೆ. ಡಿಸೆಂಬರ್‌ನಲ್ಲಿ ಅಗತ್ಯವಿರುವ ರೈತರಿಗೆ ಈ ಕಿಟ್ ಕೊಡಲಾಗುತ್ತಿದೆ. 10 ಕುಂಟೆ ಜಾಗದಲ್ಲಿ ಈ ಬೀಜವನ್ನು ಹಾಕಿಕೊಳ್ಳಬಹುದು. 10 ಕ್ವಿಂಟಲ್‌ವರೆಗೆ ಮೇವು ಬರಲಿದೆ. ಬಾಜೀರಾ, ಕೌಪಿ ತಳಿಯ ಮೇವಿನ ಬೀಜದಲ್ಲಿ ಬೆಳೆಯುವ ಮೇವು ಮೂರರು ಬಾರಿ ದೊರೆಯಲಿದೆ.
ಹಸಿಮೇವು ಹೆಚ್ಚು ಪೌಷ್ಟಿಕಾಂಶ:ಮೇವಿನ ಬೀಜ ಪಡೆದ ರೈತರು ಈಗಾಗಲೇ ಬಿತ್ತನೆ ಮಾಡಿ ಮೇವು ಬೆಳೆದಿದ್ದಾರೆ. ಈ ರೀತಿ ಹಸಿ ಮೇವು ರಾಸುಗಳಿಗೆ ನೀಡುವುದರಿಂದ ಜಾನುವಾರಗಳಿಗೆ ಹೆಚ್ಚು ಪೌಷ್ಟಿಕಾಂಶ ದೊರೆಯುತ್ತಿದ್ದು ಹೈನುಗಾರಿಕೆ ಮಾಡುವವರಿಗೆ ಹೆಚ್ಚು ಉಪಯೋಗವಾಗುತ್ತಿದ್ದು, ರಾಸುಗಳು ಹೆಚ್ಚು ಹಾಲು ನೀಡುತ್ತಿವೆ.
- - -ಕೋಟ್
ಜಿಲ್ಲೆಯಲ್ಲಿ ಸಧ್ಯ ಮೇವಿಗೆ ಯಾವುದೇ ಕೊರತೆ ಇಲ್ಲ. ಹಿಂಗಾರು ಮಳೆ ಕೈ ಕೊಟ್ಟರೆ ಮುಂದೆ ಏನಾದರೂ ಸ್ವಲ್ಪ ಪ್ರಮಾಣದಲ್ಲಿ ಮೇವಿನ ಕೊರತೆ ಆಗಬಹುದು. ಈಗಾಗಲೇ ಮೇವಿನ ಬೀಜದ ಕಿಟ್ ಬಂದಿದ್ದು, ಅಗತ್ಯವಿರುವ ರೈತರಿಗೆ ಶೀಘ್ರವೇ ಉಚಿತವಾಗಿ ವಿತರಿಸಲಾಗುವುದು- ಶಿವಯೋಗಿ ಯಲಿ, ಉಪನಿರ್ದೇಶಕ, ಪಶುಪಾಲನಾ ಇಲಾಖೆ, ಶಿವಮೊಗ್ಗ.
- - -(-ಫಾರ್ಮರ್1.ಜೆಪಿಜಿ: )ಸಾಂದರ್ಭಿಕ ಚಿತ್ರ