ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಜಗಳೂರು ತಾಲೂಕನ್ನು ಸಂಪೂರ್ಣವಾಗಿ ಕೈ ಬಿಟ್ಟಿರುವುದನ್ನು ಖಂಡಿಸಿ, ಜಗಳೂರು ಕ್ಷೇತ್ರದ ಶಾಸಕ ಬಿ.ದೇವೇಂದ್ರಪ್ಪ ಶನಿವಾರ ತಾಲೂಕು ಪಂಚಾಯಿತಿ ಆವರಣದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳನ್ನು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಹಾಗೂ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಅವರ ನಡೆಯ ಬಗ್ಗೆ ಜಿಲ್ಲಾಧಿಕಾರಿ ಜೊತೆ ದೂರವಾಣಿಯಲ್ಲಿ ಚರ್ಚಿಸಿ, ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಡಳಿತ, ಸಚಿವರ ನಡೆಗಳ ಕುರಿತು ಸಿಎಂ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ.

- ಡಿಸಿ ಜತೆ ದೂರವಾಣಿಯಲ್ಲಿ ಆಕ್ರೋಶ । ಜಿಲ್ಲಾ ಕೆಡಿಪಿ ಸಭೆಗೆ ಬರೋದಿಲ್ಲ ಎಂದ ಬಿ.ದೇವೇಂದ್ರಪ್ಪ

- - -

ಕನ್ನಡಪ್ರಭ ವಾರ್ತೆ ಜಗಳೂರು

ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಜಗಳೂರು ತಾಲೂಕನ್ನು ಸಂಪೂರ್ಣವಾಗಿ ಕೈ ಬಿಟ್ಟಿರುವುದನ್ನು ಖಂಡಿಸಿ, ಜಗಳೂರು ಕ್ಷೇತ್ರದ ಶಾಸಕ ಬಿ.ದೇವೇಂದ್ರಪ್ಪ ಶನಿವಾರ ತಾಲೂಕು ಪಂಚಾಯಿತಿ ಆವರಣದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳನ್ನು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಹಾಗೂ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಅವರ ನಡೆಯ ಬಗ್ಗೆ ಜಿಲ್ಲಾಧಿಕಾರಿ ಜೊತೆ ದೂರವಾಣಿಯಲ್ಲಿ ಚರ್ಚಿಸಿ, ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಡಳಿತ, ಸಚಿವರ ನಡೆಗಳ ಕುರಿತು ಸಿಎಂ ಗಮನಕ್ಕೆ ತರುವುದಾಗಿ ತಿಳಿಸಿದರು.

ತಾಲೂಕಿನ ನೈಜ ಪರಿಸ್ಥಿತಿಯ ಕುರಿತು ಸರಿಯಾದ ವರದಿ ನೀಡದೇ, ಶೋಷಿತ ಹಾಗೂ ಬಡವರ್ಗದ ಜನರಿಗೆ ಅನ್ಯಾಯ ಎಸಗಲಾಗುತ್ತಿದೆ. ತಾಲೂಕಿನಲ್ಲಿ ತೀವ್ರ ಮಳೆ ಕೊರತೆಯಿಂದಾಗಿ ಬೆಳೆ ನಷ್ಟ ಉಂಟಾಗಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಹೀಗಿದ್ದರೂ ಜಗಳೂರು ತಾಲೂಕನ್ನು ಬರಪೀಡಿತ ಪಟ್ಟಿಯಿಂದ ಹೊರಗಿಟ್ಟಿರುವುದು ಖಂಡನೀಯ. ಚುನಾವಣೆ ಸಮಯದಲ್ಲಿ ವೋಟ್ ಪಡೆಯಲು ಈ ಕ್ಷೇತ್ರ ಬೇಕು. ಆದರೆ ಜನರ ಸಂಕಷ್ಟಕ್ಕೆ ಸ್ಪಂದಿಸುವಾಗ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ತಾಲೂಕಿನ ನೈಜ ಪರಿಸ್ಥಿತಿ ಹಾಗೂ ಜ್ವಲಂತ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸದ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಂಸದರ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಶಾಸಕ ಬಿ.ದೇವೇಂದ್ರಪ್ಪ, ಇನ್ಮುಂದೆ ಯಾವುದೇ ಜಿಲ್ಲಾ ಕೆಡಿಪಿ ಸಭೆಗೆ ಹಾಜರಾಗುವುದಿಲ್ಲ ಎಂದು ಬಹಿರಂಗವಾಗಿ ಘೋಷಿಸಿದರು.

ರಾಜ್ಯದಲ್ಲಿ ಸಂಪುಟ ರಚನೆಯಾದ ನಂತರ ಮುಖ್ಯಮಂತ್ರಿಗಳು ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸ್ಪಷ್ಟ ಸೂಚನೆ ನೀಡಿದ್ದರು. ಪ್ರತಿ ತಾಲೂಕಿಗೂ ಖುದ್ದು ಭೇಟಿ ನೀಡಿ, ಅಲ್ಲಿನ ವಾಸ್ತವ ಪರಿಸ್ಥಿತಿ ಅರಿತು ವರದಿ ನೀಡಬೇಕೆಂದು ತಿಳಿಸಿದ್ದರು. ಆದರೆ, ಸಚಿವರು ಹಾಗೂ ಅಧಿಕಾರಿಗಳು ತಾಲೂಕಿನ ನೈಜ ಪರಿಸ್ಥಿತಿ ಅರಿಯಲು ಮುಂದಾಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ನ್ಯಾಯ ಸಿಗುವ ಕಡೆಗೆ ಹೋಗುತ್ತೇವೆ:

ನಿಮಗೆ ಕ್ಷೇತ್ರದ ಬಡಜನರು, ಶಾಸಕರು ಯಾರೂ ಬೇಕಾಗಿಲ್ಲ. ಆದ್ದರಿಂದ ಇನ್ಮುಂದೆ ನಾನು ಯಾವುದೇ ಕಾರಣಕ್ಕೂ ಜಿಲ್ಲಾ ಕೆಡಿಪಿ ಸಭೆಗೆ ಬರುವುದಿಲ್ಲ. ನಮ್ಮ ತಾಲೂಕಿನ ದಾರಿಯನ್ನು ನಾವೇ ನೋಡಿಕೊಳ್ಳುತ್ತೇವೆ. ನಮಗೆ ಎಲ್ಲಿ ಸ್ಪಂದನೆ ಸಿಗುತ್ತದೋ, ಎಲ್ಲಿ ನ್ಯಾಯ ಸಿಗುತ್ತದೋ ಆ ಕಡೆಗೆ ನಾವು ಹೋಗುತ್ತೇವೆ ಎಂದು ಶಾಸಕರು ಖಡಕ್ಕಾಗಿ ಹೇಳಿದರು. ಅಧಿಕಾರಿಗಳ ನಿರ್ಲಕ್ಷ್ಯ, ಉಸ್ತುವಾರಿ ಸಚಿವರು ಹಾಗೂ ಸಂಸದರ ನಡೆಗಳ ಕುರಿತು ನೇರವಾಗಿ ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು ಎಂದು ಎಚ್ಚರಿಕೆ ನೀಡಿದರು.

​ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ರೈತ ಮುಖಂಡರು ಉಪಸ್ಥಿತರಿದ್ದರು.

- - -

(ಕೋಟ್‌) ಜಿಲ್ಲಾಮಟ್ಟದ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ, ಜಗಳೂರು ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಸೂಕ್ತ ಪ್ರಸ್ತಾವನೆ ಹಾಗೂ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಮುಂದಿನ 3 ದಿನಗಳಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸುತ್ತೇವೆ.

- ಬಿ.ದೇವೇಂದ್ರಪ್ಪ, ಶಾಸಕ, ಜಗಳೂರು ಕ್ಷೇತ್ರ.

- - -

-29ಜೆ.ಜಿ.ಎಲ್.1‌ಅ:

ಜಗಳೂರು ಕ್ಷೇತ್ರದ ಶಾಸಕ ಬಿ.ದೇವೇಂದ್ರಪ್ಪ ಶನಿವಾರ ತಾಲೂಕು ಪಂಚಾಯಿತಿ ಆವರಣದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.