ಸಾರಾಂಶ
- ಸಭೆಯ ಅಭಿಪ್ರಾಯದ ಬಗ್ಗೆ ಸರ್ಕಾರದ ಗಮನ ಸೆಳೆಯಲು ಜಿಲ್ಲಾಧಿಕಾರಿಗೆ ಉಸ್ತುವಾರಿ ಸಚಿವರ ಸೂಚನೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಬರ ಪೀಡಿತ ಪ್ರದೇಶಗಳಲ್ಲಿ ಹೊಸದಾಗಿ ಬೋರ್‌ವೆಲ್ ಕೊರೆಸಲು ಅನುಮತಿ ನೀಡಬೇಕೆಂಬ ಶಾಸಕರ ಅಭಿಪ್ರಾಯವನ್ನು ಸರ್ಕಾರದ ಗಮನಕ್ಕೆ ತರಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯ್ತಿಯಲ್ಲಿ ಮಂಗಳವಾರ ನಡೆದ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಶಾಸಕರು ಸಭೆಯಲ್ಲಿ ಪ್ರಸ್ತಾಪ ಮಾಡಿರುವ ವಿಷಯವನ್ನು ಸರ್ಕಾರದ ಗಮನಕ್ಕೆ ತರಬೇಕೆಂದು ಹೇಳಿದರು.ಸಭೆ ಆರಂಭದಲ್ಲಿ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡ ಮಾತನಾಡಿ, ತಮ್ಮದು ಮಲೆನಾಡು ಕ್ಷೇತ್ರ ಈ ಬಾರಿ ಕ್ಷೇತ್ರದ ಎರಡು ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಆ ಸ್ಥಳಗಳಲ್ಲಿ ಬೋರ್‌ವೆಲ್ ಕೊರೆಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಕೋರಿಕೊಳ್ಳಲಾಗಿದೆ ಎಂದರು.
ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಾತನಾಡಿ, ಜಿಲ್ಲೆಯ ಬರಪೀಡಿತ ತಾಲೂಕುಗಳಿಗೆ ತಲಾ 20 ಲಕ್ಷ ರು. ಬಿಡುಗಡೆ ಮಾಡಲಾಗಿದೆ. ಕಡೂರು ಹಾಗೂ ಅಜ್ಜಂಪುರ ತಾಲೂಕುಗಳಿಗೆ ತಲಾ 50 ಲಕ್ಷ ರು. ಬಿಡುಗಡೆಯಾಗಿದೆ ಎಂದರು.ಹೊಸದಾಗಿ ಬೋರ್‌ವೆಲ್ ಕೊರೆಸಲು ಸರ್ಕಾರದ ನಿಯಮದ ಪ್ರಕಾರ ಅವಕಾಶ ಇಲ್ಲ. ಬರ ಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಜೋಡಣೆ, ಹಾಲಿ ಇರುವ ಬೋರ್‌ವೆಲ್ ಆಳವಡಿಸಲು ಮಾತ್ರ ಅವಕಾಶ ಇದೆ. ಟ್ಯಾಂಕರ್ ಮೂಲಕ ನೀರು ಸರಬರಾಜು ಹಾಗೂ ಖಾಸಗಿ ಬೋರ್‌ವೆಲ್‌ಗಳಿಂದ ನೀರನ್ನು ಬಳಸಿಕೊಳ್ಳಬಹುದು ಎಂದರು. ಶಾಸಕ ಎಚ್.ಡಿ. ತಮ್ಮಯ್ಯ ಮಾತನಾಡಿ, ಚಿಕ್ಕಮಗಳೂರು ತಾಲೂಕು ಬರಪೀಡಿತ ತಾಲೂಕೆಂದು ಘೋಷಣೆ ಮಾಡಲು ಮುಖ್ಯಮಂತ್ರಿ ಗಮನಕ್ಕೆ ತರಲಾಗಿದೆ ಎಂದರು.
ಬರ ಪೀಡಿತ ಪ್ರದೇಶದಲ್ಲಿ ಕುಡಿಯುವ ನೀರಿಗೆ ಯಾವ ಪ್ರಮಾಣದಲ್ಲಿ ಆದ್ಯತೆ ನೀಡುತ್ತಿರೋ, ಅದೇ ಆದ್ಯತೆಯನ್ನು ಚಿಕ್ಕಮಗಳೂರು ತಾಲೂಕಿಗೂ ನೀಡಬೇಕು. ತಾಲೂಕಿನ ಲಕ್ಯಾ ಹೋಬಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಹೇಳಿದರು.ತರೀಕೆರೆ ಶಾಸಕ ಜಿ.ಎಚ್. ಶ್ರೀನಿವಾಸ್ ಮಾತನಾಡಿ, ಬೋರ್‌ವೆಲ್ ರೀಚಾರ್ಜ್ ಮಾಡಿದರೂ ನೀರು ಸಿಗುತ್ತಿಲ್ಲ. ಖಾಸಗಿ ಯವರು ತಮ್ಮ ಬೋರ್‌ವೆಲ್‌ಗಳನ್ನು ಕೊಡುತ್ತಿಲ್ಲ, ಹಾಗಾಗಿ ಹೊಸದಾಗಿ ಬೋರ್‌ವೆಲ್ ಕೊರೆಸಲು ಅನುಮತಿ ನೀಡ ಬೇಕು. ತರೀಕೆರೆ ತಾಲೂಕಿನಲ್ಲಿ 39 ಹಾಗೂ ಅಜ್ಜಂಪುರ ತಾಲೂಕಿನ 26 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದರು.
ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಮಾತನಾಡಿ, ತಾಲೂಕು ಮಟ್ಟದ ಕೆಡಿಪಿ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಪದೇ ಪದೇ ಚರ್ಚೆಯಾಗುತ್ತಲೇ ಇರುತ್ತದೆ. ಹೊಸದಾಗಿ ಬೋರ್‌ವೆಲ್ ಕೊರೆಸಲು ಅನುಮತಿ ಇಲ್ಲ ಎಂದು ಜಿಲ್ಲಾಧಿಕಾರಿ ಹೇಳುತ್ತಿದ್ದಾರೆ. ಇದರ ಬಗ್ಗೆ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.ಜಿಲ್ಲಾಧಿಕಾರಿ ಮಾತನಾಡಿ, ಬರ ಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆಗಳಿರುವ ಕಡೆಗಳಲ್ಲಿ ಈಗಾಗಲೇ 10 ಖಾಸಗಿ ಬೋರ್ ವೆಲ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದ ಅವರು, ಖಾಸಗಿಯವರು ಬೋರ್‌ವೆಲ್ ಕೊಡದೆ ಹೋದರೆ, ಅಧಿಸೂಚನೆ ಮೂಲಕ ಅವುಗಳನ್ನು ವಶಪಡಿಸಿಕೊಳ್ಳುವ ಅಧಿಕಾರ ಜಿಲ್ಲಾಡಳಿತಕ್ಕೆ ನೀಡಲಾಗಿದೆ ಎಂದು ಹೇಳಿದರು.
ಸುಮಾರು ಒಂದು ಗಂಟೆಗಳ ಕಾಲ ಚರ್ಚೆ ನಡೆದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರು ಮಾತನಾಡಿ, ಶಾಸಕರ ಅಭಿಪ್ರಾಯವನ್ನು ಸರ್ಕಾರದ ಗಮನಕ್ಕೆ ತರಬೇಕು ಎಂದು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು. --- ಬಾಕ್ಸ್ ----ತಳ ಮಟ್ಟದಲ್ಲಿ ಸಮಸ್ಯೆ ಬಗೆಹರಿಸಿ: ಜಾರ್ಜ್
ಚಿಕ್ಕಮಗಳೂರು: ಜನರ ಸಮಸ್ಯೆಗಳನ್ನು ತಾಲೂಕು ಮಟ್ಟದಲ್ಲಿ ನೌಕರರು ಹಾಗೂ ಅಧಿಕಾರಿಗಳು ಬಗೆಹರಿಸಬೇಕು. ಹೀಗೆ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಶೇ. 80 ರಷ್ಟು ಸಮಸ್ಯೆಗಳು ಸ್ಥಳೀಯವಾಗಿ ಬಗೆಹರಿಯಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಹೇಳಿದರು.ಜನಸಂಪರ್ಕ ಸಭೆ ನಡೆಸಿದ ಸಂದರ್ಭದಲ್ಲಿ ಬಂದ ಅಹವಾಲುಗಳಲ್ಲಿ ಸ್ಥಳೀಯವಾಗಿ ಅಧಿಕಾರಿಗಳು ಬಗೆ ಹರಿಸ ಬಹುದಾದ ಸಮಸ್ಯೆಗಳು ಕಂಡು ಬಂದವು. ಅವುಗಳನ್ನು ಹೆಚ್ಚು ದಿನ ಮುಂದುವರೆಸಿಕೊಂಡು ಬರಬಾರದು. ಕೂಡಲೇ ಸ್ಪಂದಿಸಬೇಕು. ನೀವು ಜನರ ಕೆಲಸ ತಕ್ಷಣಕ್ಕೆ ಮಾಡಿಕೊಟ್ಟರೆ ನಿಮ್ಮ ಗೌರವ ಹೆಚ್ಚುತ್ತದೆ. ನಿಮಗೆ ಅಭಿನಂದನೆ ಸಹ ಸಲ್ಲಿಸುತ್ತಾರೆ ಎಂದರು. 16 ಕೆಸಿಕೆಎಂ 1
-----ಪೋಟೋ ಫೈಲ್ ನೇಮ್ 16 ಕೆಸಿಕೆಎಂ 2
ಚಿಕ್ಕಮಗಳೂರಿನ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅಧ್ಯಕ್ಷತೆಯಲ್ಲಿ ಮಂಗಳವಾರ ಕೆಡಿಪಿ ಸಭೆ ನಡೆಯಿತು. ಶಾಸಕರಾದ ಎಚ್.ಡಿ. ತಮ್ಮಯ್ಯ, ಟಿ.ಡಿ. ರಾಜೇಗೌಡ, ನಯನಾ ಮೋಟಮ್ಮ, ಡಿಸಿ ಮೀನಾ ನಾಗರಾಜ್ ಇದ್ದರು.