ಸಾರಾಂಶ
ಕಾರವಾರ:
ಇಲ್ಲಿನ ರವೀಂದ್ರನಾಥ ಟಾಗೋರ ಕಡಲ ತೀರದಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್, ಸ್ಟಾಲ್ ತೆರೆಯಲ್ಲಿದ್ದು, ಹೊರ ಜಿಲ್ಲೆ, ರಾಜ್ಯಗಳಿಂದ ಬಂದ ನೂರಾರು ವ್ಯಾಪಾರಸ್ಥರು ಕುಡಿಯುವ ನೀರಿಗೆ ತೊಂದರೆ ಅನುಭವಿಸುವಂತಾಗಿದೆ.೨೦೨೦ರಲ್ಲಿ ಟಾಗೋರ ಕಡಲ ತೀರದಲ್ಲಿ ಪ್ರವೇಶದ್ವಾರ ನಿರ್ಮಾಣ ಹಾಗೂ ರವೀಂದ್ರನಾಥ ಟಾಗೋರ ಪುತ್ಥಳಿ ಸ್ಥಾಪನೆಗೆ ಯೋಜನೆ ರೂಪಿಸಲಾಗಿತ್ತು. ಈ ವೇಳೆ ತೀರದ ಪ್ರವೇಶ ದ್ವಾರದ ಸಮೀಪವೇ ಇದ್ದ ಶುದ್ಧ ಕುಡಿಯುವ ನೀರಿನ ಘಟಕವನ್ನು ತೆರವು ಮಾಡಲಾಗಿದೆ. ಸುತ್ತಮುತ್ತ ಯಾವುದೇ ರೀತಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೇ ನೀರಿಗಾಗಿ ಅಲೆದಾಡುವಂತಾಗಿದೆ. ಹೆಚ್ಚಿನ ಜನರು ಹೊರ ರಾಜ್ಯದಿಂದ ಬಂದವರಾಗಿದ್ದು, ಇಲ್ಲಿನ ಎಂ.ಜಿ. ರಸ್ತೆಯ ನಗರಸಭೆ ಪಕ್ಕದಲ್ಲಿ ಇರುವ ಶುದ್ಧ ಕುಡಿಯುವ ನೀರಿನ ಘಟಕದ ಬಗ್ಗೆ ತಿಳಿದಿಲ್ಲ. ಹೀಗಾಗಿ ನೀರಿಗಾಗಿ ಅಲೆದಾಡುವಂತಾಗಿದೆ.ಪ್ರತಿ ವರ್ಷವು ತೀರದ ಮಯೂರ ವರ್ಮ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಉತ್ಸವ ನಡೆಯುತ್ತವೆ. ಬಟ್ಟೆ, ಮಕ್ಕಳ ಆಟಿಕೆ, ಮನೆ ಬಳಕೆ ಇತ್ಯಾದಿ ಸ್ಟಾಲ್‌ಗಳನ್ನು ಹಾಕಲಾಗುತ್ತದೆ. ಇದಕ್ಕಾಗಿ ಹೊರ ರಾಜ್ಯ, ಜಿಲ್ಲೆಗಳಿಂದ ನೂರಾರು ವ್ಯಾಪಾರಿಗಳು ಬರುತ್ತಾರೆ. ಅವರಿಗೆಲ್ಲ ಕುಡಿಯುವ ನೀರಿನ ತೊಂದರೆ ಉಂಟಾಗುತ್ತಿದೆ. ಚಿಕ್ಕಪುಟ್ಟ ವ್ಯಾಪಾರಿಗಳಿಗೆ ಪ್ರತಿನಿತ್ಯ ತಿಂಗಳುಗಳ ಕಾಲ ಹೆಚ್ಚು ಹಣ ನೀಡಿ ಕುಡಿಯುವ ನೀರನ್ನು ಖರೀದಿಸುವುದು ಆರ್ಥಿಕವಾಗಿ ಹೊರೆಯಾಗಲಿದೆ.
ಮಾರುಕಟ್ಟೆಯಲ್ಲಿ 1 ಲೀ. ನೀರಿಗೆ ₹ 20 ಇದ್ದು, ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ₹1 ಹಾಕಿದರೆ 4 ಲೀಟರ್ ನೀರು ಬರುತ್ತದೆ. ಇದರಿಂದ ವ್ಯಾಪಾರಸ್ಥರಿಗೆ ಅನುಕೂಲವಾಗುತ್ತಿತ್ತು. ಕಡಲ ತೀರದ ಸಮೀಪವೇ ಶುದ್ಧ ಕುಡಿಯುವ ನೀರಿನ ಘಟಕ ಪುನಃ ನಿರ್ಮಾಣ ಮಾಡುವ ಅವಶ್ಯಕತೆಯಿದೆ. ಜತೆಗೆ ಪ್ರವಾಸಿಗರಿಗೂ ಇದು ಕಡಿಮೆ ದರದಲ್ಲಿ ನೀರನ್ನು ಪಡೆಯಲು ಸಹಾಯವಾಗಲಿದೆ.ಕೋವಿಡ್ ಮೊದಲು ಇಲ್ಲಿಗೆ ವ್ಯಾಪಾರಕ್ಕೆ ಬಂದಾಗ ಕುಡಿಯುವ ನೀರಿನ ಘಟಕವಿತ್ತು. ಈಗ ಬಂದಾಗ ಇಲ್ಲ. ಹಣ ನೀಡಿ ನೀರಿನ ಬಾಟಲಿ ತರುತ್ತೇವೆ. ಪ್ರತಿನಿತ್ಯ ನೂರಾರು ರುಪಾಯಿ ನೀರಿಗೆ ಬೇಕಾಗುತ್ತದೆ. ಕುಡಿಯುವ ನೀರಿನ ಘಟಕವಿದ್ದರೆ ಸಾಕಷ್ಟು ಅನುಕೂಲವಾಗುತ್ತಿತ್ತು. ತೀರಕ್ಕೆ ಸಮೀಪದಲ್ಲಿ ಬಾವಿ, ಬೋರ್‌ವೆಲ್ ಕೂಡಾ ಇಲ್ಲ ಎಂದು ವ್ಯಾಪಾರಿ ಅಬ್ದುಲ್ ಶೇಖ್ ಅಳಲು ತೋಡಿಕೊಂಡಿದ್ದಾರೆ.