ರಾಜ್ಯದಲ್ಲಿ ಮಳೆ ಕೊರತೆ ಮತ್ತು ಬರದ ನೈಜ ಪರಿಸ್ಥಿತಿ ಪರಿಶೀಲಿಸಲು ಆಗಮಿಸಿರುವ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ನೇತೃತ್ವದ ಕೇಂದ್ರ ಅಂತರ್ ಸಚಿವಾಲಯದ ತಂಡ ಮೂರನೇ ದಿನವಾದ ಸೋಮವಾರ, ಚಾಮರಾಜನಗರ, ಮೈಸೂರು, ವಿಜಯನಗರ, ಬಾಗಲಕೋಟೆ ಮತ್ತು ಕೊಪ್ಪಳ ಜಿಲ್ಲೆಗಳಿಗೆ ಭೇಟಿ ನೀಡಿ, ಬರ ಪರಿಶೀಲನೆ ನಡೆಸಿತು.
ಕನ್ನಡಪ್ರಭ ವಾರ್ತೆ ಬೆಂಗಳೂರು:
ರಾಜ್ಯದಲ್ಲಿ ಮಳೆ ಕೊರತೆ ಮತ್ತು ಬರದ ನೈಜ ಪರಿಸ್ಥಿತಿ ಪರಿಶೀಲಿಸಲು ಆಗಮಿಸಿರುವ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ನೇತೃತ್ವದ ಕೇಂದ್ರ ಅಂತರ್ ಸಚಿವಾಲಯದ ತಂಡ ಮೂರನೇ ದಿನವಾದ ಸೋಮವಾರ, ಚಾಮರಾಜನಗರ, ಮೈಸೂರು, ವಿಜಯನಗರ, ಬಾಗಲಕೋಟೆ ಮತ್ತು ಕೊಪ್ಪಳ ಜಿಲ್ಲೆಗಳಿಗೆ ಭೇಟಿ ನೀಡಿ, ಬರ ಪರಿಶೀಲನೆ ನಡೆಸಿತು.ಪಾಟ್ನಾದ ಭತ್ತ ಅಭಿವೃದ್ಧಿ ಇಲಾಖೆಯ ನಿರ್ದೇಶಕ ಡಾ। ಮಾನಸಿಂಗ್ ನೇತೃತ್ವದ ತಂಡ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ, ಬಾಗಲಕೋಟೆ, ಹುನಗುಂದ ಹಾಗೂ ಇಳಕಲ್ಲ ತಾಲೂಕಿನ ವಿವಿಧ ಗ್ರಾಮಗಳಿಗೆ ತೆರಳಿ ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಹಾನಿಯ ವಾಸ್ತವ ಸ್ಥಿತಿ ಪರಿಶೀಲಿಸಿತು. ಬಿತ್ತನೆಗೆ ಮಾಡಿರುವ ವೆಚ್ಚ, ಮಳೆಯ ಪ್ರಮಾಣ, ಬೆಳೆ ಹಾನಿಯ ಪ್ರಮಾಣ, ನೀರಾವರಿ ವ್ಯವಸ್ಥೆ ಹಾಗೂ ಬೆಳೆ ವಿಮೆ ಸೇರಿ ವಿವಿಧ ಮಾಹಿತಿಗಳನ್ನು ರೈತರಿಂದ ಪಡೆದುಕೊಂಡಿತು. ಬಳಿಕ, ಕೊಪ್ಪಳ ಜಿಲ್ಲೆಯ ಕುಷ್ಟಗಿ, ಕನಕಗಿರಿ ತಾಲೂಕಿಗೆ ಭೇಟಿ ನೀಡಿ ಬೆಳೆ ಹಾನಿಯ ಪರಿಶೀಲನೆ ನಡೆಸಿತು.
ಇದೇ ವೇಳೆ, ಡಾ। ಸುದಾಮ್ ಭಾಗ್ ನೇತೃತ್ವದ ತಂಡ ಚಾಮರಾಜನಗರ ತಾಲೂಕಿನ ಕೆರೆಹಳ್ಳಿಗೆ ಭೇಟಿ ನೀಡಿ, ಒಣಗಿದ ಸೂರ್ಯಕಾಂತಿ, ಜೋಳದ ಬೆಳೆಗಳನ್ನು ವೀಕ್ಷಿಸಿತು. ಅಧಿಕಾರಿಗಳು ನಿಗದಿತ ಅವಧಿಗಿಂತ 2 ತಾಸು ತಡವಾಗಿ ಆಗಮಿಸಿದರು. ಬಳಿಕ, ಮೈಸೂರಿಗೆ ಆಗಮಿಸಿದ ಕೇಂದ್ರ ತಂಡ, ಮೈಸೂರಿನ ಜಿ.ಪಂ.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ನೇತೃತ್ವದಲ್ಲಿ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ, ಬರ ಪರಿಸ್ಥಿತಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿತು. ಬಳಿಕ, ನಂಜನಗೂಡು ತಾಲೂಕಿನ ಚಿನ್ನದಹುಡಿ ಸೇರಿ ವಿವಿಧ ಗ್ರಾಮಗಳಿಗೆ ತೆರಳಿ ಬರ ಪರಿಸ್ಥಿತಿಯ ಪರಿಶೀಲನೆ ನಡೆಸಿತು.ಈ ಮಧ್ಯೆ, ಕೇಂದ್ರ ಕೃಷಿ ಇಲಾಖೆಯ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ನೇತೃತ್ವದ ತಂಡ, ವಿಜಯನಗರ ಜಿಲ್ಲೆ ಹೂವಿನಹಡಗಲಿ, ಹರಪನಹಳ್ಳಿ ತಾಲೂಕಿನ ಗ್ರಾಮಗಳಿಗೆ ಭೇಟಿ ನೀಡಿ, ಬೆಳೆ ಹಾನಿಯ ಪರಿಶೀಲನೆ ನಡೆಸಿತು.
ಅಧಿಕಾರಿಗಳ ಕಾಲಿಗೆ ಎರಗಲು ರೈತ ಯತ್ನ:ಬಾಗಲಕೋಟೆ ತಾಲೂಕಿನ ಭಗವತಿ ಗ್ರಾಮದಲ್ಲಿ ಈರುಳ್ಳಿ ಹೊಲ ವೀಕ್ಷಣೆ ಮಾಡುವ ವೇಳೆ ಕೇಂದ್ರ ಬರ ಅಧ್ಯಯನ ತಂಡದ ಅಧಿಕಾರಿಗಳ ಕಾಲಿಗೆರಗಲು ರೈತ ಮುಂದಾದ ಘಟನೆ ನಡೆಯಿತು. ಬರ ಅಧ್ಯಯನ ಅಧಿಕಾರಿಗಳ ಕಾಲಿಗೆರಗಿ, ಅವರ ಮುಂದೆ ಕುಳಿತು ಸೂಕ್ತ ಪರಿಹಾರ ಬೇಡಿದ ಭಗವತಿ ಗ್ರಾಮದ ರೈತ ಶಂಕ್ರಪ್ಪನನ್ನು ಸ್ಥಳೀಯ ಅಧಿಕಾರಿಗಳು ಹಿಡಿದು ಮೇಲೆತ್ತಿದರು. ಅಧಿಕಾರಿಗಳ ಮುಂದೆ ಗೋಳಾಡಿದ ರೈತ ಶಂಕ್ರಪ್ಪ, ನಮ್ಮ ಹೊಲ ಎಲ್ಲ ಹಾಳಾಗಿದೆ, ಏನೂ ಉಳಿದಿಲ್ಲ ಎಂದು ಕಣ್ಣೀರಿಟ್ಟರು.ರೈತರ ಮಕ್ಕಳಿಗೆಕನ್ಯಾ ಕೊಡಿಸಿ!:
ವಿಜಯನಗರ ಜಿಲ್ಲೆ ಹಡಗಲಿ ತಾಲೂಕಿನ ಇಟ್ಟಗಿ ಗ್ರಾಮದ ಹೊಲಕ್ಕೆ ಭೇಟಿ ನೀಡಿದ ತಂಡಕ್ಕೆ, ಮುಜುಗರದ ಪರಿಸ್ಥಿತಿ ಎದುರಾಯಿತು. ರಾಜ್ಯದಲ್ಲಿ ರೈತರ ಮಕ್ಕಳಿಗೆ 30 ರಿಂದ 40 ವರ್ಷ ಕಳೆದರೂ ಮದುವೆಗೆ ಕನ್ಯಾ ಸಿಗುತ್ತಿಲ್ಲ, ಆದ್ದರಿಂದ ಕಾನೂನು ಬದ್ಧವಾಗಿ ಅನಾಥಾಶ್ರಮದ ಹೆಣ್ಣು ಮಕ್ಕಳನ್ನು ರೈತರ ಮಕ್ಕಳಿಗೆ ಕೊಡಿಸಿ, ಮದುವೆ ಮಾಡಿಸಬೇಕೆಂದು ಸ್ಥಳೀಯ ಯುವಕರು ಬರ ಅಧ್ಯಯನ ತಂಡಕ್ಕೆ ಮನವಿ ಸಲ್ಲಿಸಿದರು. ಈ ವೇಳೆ, ರೈತರ ಮಕ್ಕಳಿಗೆ ರೈತರ ಹೆಣ್ಣು ಮಕ್ಕಳನ್ನು ಕೊಟ್ಟು ಮದುವೆ ಮಾಡಿದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ತಲಾ ₹10 ಲಕ್ಷ ಠೇವಣಿ ಮಾಡುವಂತೆ ರಾಜ್ಯ ಈರುಳ್ಳಿ ಬೆಳೆಗಾರರ ಸಂಘ ಒತ್ತಾಯಿಸಿದ್ದು ತಂಡಕ್ಕೆ ತೀರಾ ಮುಜುಗುರ ಅನಿಸಿತು.ಬಡಕಲು ಜಾನುವಾರು ತೋರಿಸದ ಆಡಳಿತ!:ಬರ ಅಧ್ಯಯನ ಮಾಡಲು ಬಂದ ಕೇಂದ್ರ ತಂಡಕ್ಕೆ ಜಿಲ್ಲಾಡಳಿತ ಮೇವಿಲ್ಲದೆ ಬಳಲಿದ ದನ ಕರುಗಳನ್ನು ತೋರಿಸಬೇಕಿತ್ತು. ಆದರೆ, ಚಾಮರಾಜನಗರ ತಾಲೂಕು ಕೆರೆಹಳ್ಳಿಗೆ ಬಂದ ತಂಡಕ್ಕೆ ಕನಕಗಿರಿ ಜೈನ ಮಠದ ಗೋಶಾಲೆಯಲ್ಲಿರುವ ದಷ್ಟಪುಪ್ಟವಾದ ಗಿರ್ ತಳಿಯ ಹಸು, ಎಮ್ಮೆಗಳನ್ನು ತೋರಿಸಲಾಯಿತು. ಜಿಲ್ಲಾದ್ಯಂತ ಬರ ಘೋಷಣೆ ಮಾಡಲಾಗಿದ್ದರೂ ಇದುವರೆಗೆ ಸರ್ಕಾರದ ವತಿಯಿಂದ ಗೋ ಶಾಲೆ ತೆರೆದಿಲ್ಲ.