ಪಾಟ್ನಾದ ಭತ್ತ ಅಭಿವೃದ್ಧಿ ಇಲಾಖೆಯ ನಿರ್ದೇಶಕರಾದ ಡಾ.ಮಾನಸಿಂಗ್ ಅವರ ನೇತೃತ್ವದ ಅಧಿಕಾರಿಗಳ ತಂಡದಿಂದ ಭಾನುವಾರ ಜಿಲ್ಲೆಯಲ್ಲಿ ಬರ ಸಮೀಕ್ಷೆ ನಡೆಸಲಾಯಿತು. ಮೊದಲು ದೇವದುರ್ಗ ತಾಲೂಕಿಗೆ ಆಗಮಿಸಿದ ತಂಡವು ಅಲ್ಲಿ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿ ಅಗತ್ಯ ಮಾಹಿತಿಯನ್ನು ಕಲೆಹಾಕಿದರು ನಂತರ ದೇವದುರ್ಗ, ಅರಕೇರಾ, ಸಿರವಾರ, ಮಸ್ಕಿ, ಲಿಂಗಸುಗೂರು ಸೇರಿ ವಿವಿಧ ತಾಲೂಕುಗಳ ವ್ಯಾಪ್ತಿಯ ಹಳ್ಳಿಗಳಲ್ಲಿರುವ ಜಮೀನುಗಳಿಗೆ ಭೇಟಿ ನೀಡಿದ ತಂಡವು ಬೆಳೆಗಳ ಹಾನಿಯ ಸಮೀಕ್ಷೆ ನಡೆಸಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಪಾಟ್ನಾದ ಭತ್ತ ಅಭಿವೃದ್ಧಿ ಇಲಾಖೆಯ ನಿರ್ದೇಶಕರಾದ ಡಾ.ಮಾನಸಿಂಗ್ ಅವರ ನೇತೃತ್ವದ ಅಧಿಕಾರಿಗಳ ತಂಡದಿಂದ ಭಾನುವಾರ ಜಿಲ್ಲೆಯಲ್ಲಿ ಬರ ಸಮೀಕ್ಷೆ ನಡೆಸಲಾಯಿತು. ಮೊದಲು ದೇವದುರ್ಗ ತಾಲೂಕಿಗೆ ಆಗಮಿಸಿದ ತಂಡವು ಅಲ್ಲಿ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿ ಅಗತ್ಯ ಮಾಹಿತಿಯನ್ನು ಕಲೆಹಾಕಿದರು ನಂತರ ದೇವದುರ್ಗ, ಅರಕೇರಾ, ಸಿರವಾರ, ಮಸ್ಕಿ, ಲಿಂಗಸುಗೂರು ಸೇರಿ ವಿವಿಧ ತಾಲೂಕುಗಳ ವ್ಯಾಪ್ತಿಯ ಹಳ್ಳಿಗಳಲ್ಲಿರುವ ಜಮೀನುಗಳಿಗೆ ಭೇಟಿ ನೀಡಿದ ತಂಡವು ಬೆಳೆಗಳ ಹಾನಿಯ ಸಮೀಕ್ಷೆ ನಡೆಸಿದರು.

ಭಾರತ ಸರ್ಕಾರದ ವೆಚ್ಚ ಇಲಾಖೆಯ ಅಧೀನ ಕಾರ್ಯದರ್ಶಿ ಪಾರ್ಥ ಪಾಲ್ ಹಾಗೂ ಭಾರತ ಸರಕಾರದ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ರಾಕೇಶ್ ಕುಮಾರ್ ಅವರು ಜಿಲ್ಲೆಯಲ್ಲಿ ಆಗಿರುವ ಮಳೆಯ ಪ್ರಮಾಣ. ಬರದಿಂದ ಆಗಿರುವ ಬೆಳೆ ಹಾನಿ. ಕ್ರಾಫ್ ಕಟಿಂಗ್. ಕುರಿತು ಕೃಷಿ ಇಲಾಖೆ. ತೋಟಗಾರಿಕೆ ಹಾಗೂ ಪಶು ಇಲಾಖೆ ಸೇರಿದಂತೆ ಇತರೆ ಸಂಬಂಧಿಸಿದ ವಿವಿಧ ಇಲಾಖೆಯ ಅಧಿಕಾರಿಗಳಿಂದ ದೇವದುರ್ಗ ತಾಲೂಕು ಪಂಚಾಯತ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿ ಜಿಲ್ಲೆಯ ಬರದಿಂದಾದ ಹಾನಿಯ ಕುರಿತು ಸಮಗ್ರ ಮಾಹಿತಿ ಪಡೆದುಕೊಂಡರು.

ಸಭೆಯ ನಂತರ ದೇವದುರ್ಗ ತಾಲೂಕಿನ ಮಸರಕಲ್ ಗ್ರಾಮದ ಹೊಲದಲ್ಲಿ ಅನಾವೃಷ್ಟಿಯಿಂದ ಹಾನಿಯಾದ ಹತ್ತಿ ಹಾಗೂ ಮೆಣಸಿನಕಾಯಿ ಬೆಳೆ ವೀಕ್ಷಣೆ ಮಾಡಿ ರೈತರಿಂದ ಮಾಹಿತಿ ಪಡೆದುಕೊಂಡರು. ನಂತರ ಎನ್ ಗಣೇಕಲ್ ಗ್ರಾಮದ ಹೊಲದಲ್ಲಿ ಹತ್ತಿ ಬೆಳೆಹಾನಿ ವೀಕ್ಷಣೆ ಮಾಡಿ ರೈತರಿಂದ ಮಾಹಿತಿ ಪಡೆದುಕೊಂಡಾಗ ಜಮೀನಿನ ರೈತರು ನಮಗೆ ಈ ವರ್ಷ ಮಳೆ ಬರದೆ ಇರುವುದರಿಂದ ಹೊಲಕ್ಕೆ ಹಾಕಿದ ಬೀಜ ಗೊಬ್ಬರದ ದುಡ್ಡು ಬರದಂತೆ ಆಗಿದೆ. ಪ್ರತಿ ವರ್ಷ ಹತ್ತಿ ಎಕರೆಗೆ 12 ರಿಂದ 15 ಕ್ವಿಂಟಲ್ ಬರುತ್ತಿತ್ತು, ಈ ವರ್ಷ ಎಕರೆಗೆ 2 ರಿಂದ ಮೂರು ಕ್ವಿಂಟಾಲ್‌ ಬಂದಿದೆ. ಇದರಿಂದ ನಾವು ಬಹಳ ನಷ್ಟದಲ್ಲಿದ್ದೇವೆ. ಬರಗಾಲದಿಂದ ನಮ್ಮ ಊರಿನ ಜನರು ಬೇರೆ ಕಡೆಗೆ ಗೂಳೆ ಹೋಗುತ್ತಿದ್ದಾರೆ. ಎಕರೆಗೆ 50 ಸಾವಿರ ನಮಗೆ ಬರ ಪರಿಹಾರ ನೀಡಬೇಕೆಂದು ಕೇಂದ್ರ ತಂಡಕ್ಕೆ ಮನವಿ ಮಾಡಿದರು.

ಗಣೇಕಲ್ ಜಲಾಶಯಕ್ಕೆ ಬೇಟಿ ನೀಡಿ ತಂಡ ವಿಬಿ ಜಿ ರಾಮ್ ಜಿ ಕಾಮಗಾರಿಯ ವೀಕ್ಷಣೆ ಮಾಡಿ ಅಲ್ಲಿ ಕೆಲಸ ಮಾಡುತ್ತಿರುವ ಜನರಿಂದ ಕೆಲಸ ಹೇಗೆ ನಡೆಯುತ್ತಿದೆ ಇದರಿಂದ ತಮಗೆ ಆಗುತ್ತಿರುವ ಅನುಕೂಲ ಮತ್ತು ಇತರೆ ಸಮಸ್ಯೆಗಳಿದ್ದರೆ ತಿಳಿಸಿ ಎಂದು ಕೇಳಿದ ಕೇಂದ್ರ ತಂಡದ ಸದಸ್ಯರು ನಮಗೆ ಸಂಬಳ ಇನ್ನೂ ಹೆಚ್ಚಿಸ ಬೇಕು ದಿನಕ್ಕೆ 375 ರು. ಕೊಡುತ್ತಾರೆ ಅದೇ ಹೊರಗಡೆ ಕೆಲಸಕ್ಕೆ ಹೋದರೆ 700 ರಿಂದ 800 ರು. ಕೂಲಿ ಕೊಡುತ್ತಾರೆ. ಹಾಗಾಗಿ ನಮಗೆ ಕೂಲಿ ಹೆಚ್ಚಿಸಬೇಕೆಂದು ಕೆಲಸಗಾರರು ಹೇಳಿದರು.

ರಾಯಚೂರು ಜಿಲ್ಲೆಯ ಮಸರಕಲ್ ಎನ್. ಗಣೇಕಲ್. ಮಂದಕಲ್. ಯರಡೋಣ ಸೇರಿದಂತೆ ಇತರೆ ಕಡೆ ಬರ ಸಮೀಕ್ಷೆ ವೀಕ್ಷಣೆ ಮಾಡಿ ರೈತರ ಸಮಸ್ಯೆಗಳನ್ನು ಆಲಿಸಲು ನಾವು ಇಲ್ಲಿಗೆ ಬಂದಿದ್ದೇವೆ. ತಮ್ಮ ಜಮೀನುಗಳಲ್ಲಿ ಹಾನಿಯಾದ ಮಾಹಿತಿಯನ್ನು ಪರಿಶೀಲನೆ ಮಾಡಲಾಗಿದೆ. ಇದರ ಸಮಗ್ರ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಕೇಂದ್ರ ತಂಡ ರೈತರಿಗೆ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಕಾರ್ಯದರ್ಶಿ ಗಿರಿಶ್ ಆರ್. ಜಿಲ್ಲಾಧಿಕಾರಿ ಪೂವಿತಾ ಎಸ್. ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಈಶ್ವರ್ ಕಾಂದೂ. ಸಹಾಯಕ ಆಯುಕ್ತರಾದ ಡಾ. ಹಂಪಣ್ಣ ಸಜ್ಜನ. ತಹಸೀಲ್ದಾರ್‌ ನಾಗಮ್ಮ ಕಟ್ಟಿಮನಿ, ಅಮರೇಶ ಬಿರಾದಾರ್‌, ಕೃಷಿ ವಿಜ್ಞಾನಿಗಳು, ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ, ರೈತರು ಇದ್ದರು.

----

ಜಿಲ್ಲೆಯ ಸ್ಥಿತಿಗತಿಗಳ ಮಾಹಿತಿ ಪಡೆದ ಕೇಂದ್ರ ತಂಡ

ಕನ್ನಡಪ್ರಭ ವಾರ್ತೆ ದೇವದುರ್ಗ

ಮುಂಗಾರು ಮತ್ತು ಹಿಂಗಾರು ಮಳೆ ಅಭಾವದಿಂದ ನಿರ್ಮಾಣಗೊಂಡಿರುವ ಬರ ಪರಿಸ್ಥಿತಿಯನ್ನು ಅಧ್ಯಯನ ಮಾಡಿದ ತಂಡ ಜಿಲ್ಲೆಯ ಸ್ಥಿತಿ-ಗತಿಗಳ ಮಾಹಿತಿ ಪಡೆಯಿತು.

ಸ್ಥಳೀಯ ತಾಪಂ ಸಭಾಂಗಣದಲ್ಲಿ ಜರುಗಿದ ಸಭೆಯಲ್ಲಿ ಜಿಲ್ಲೆಯ ಎಲ್ಲಾ ಇಲಾಖೆಗಳ ವರದಿಯನ್ನು ಕೇಂದ್ರ ತಂಡ ಭಾನುವಾರ ಮಾಹಿತಿ ಪಡೆಯಿತು. ಜಿಲ್ಲೆಯ ರಾಯಚೂರು,ಸಿರವಾರ,ಮಾನ್ವಿ,ದೇವದುರ್ಗ,ಅರಕೇರಾ,ಲಿಂಗಸಗೂರು ತಾಲೂಕುಗಳಲ್ಲಿಯ ಬೆಳೆಯ ಪರಿಸ್ಥಿತಿ,ಮಳೆಯ ಪ್ರಮಾಣ,ಗ್ರಾಮೀಣ ಪ್ರದೇಶದಲ್ಲಿ ಕುಡಿವ ನೀರು,ಕೈಗೊಳ್ಳಲಾಗಿವರು ವಿಜಿ ಬಿ-ರಾಮಜಿ ಕಾಮಗಾರಿಗಳು,ವಿಮೆ ಸೌಲಭ್ಯಗಳ ಕುರಿತು ಜಿಲಾ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಕೃಷ್ಣಾ ಮತ್ತು ತುಂಗಭದ್ರ ನದಿ ನೀರಿನಲ್ಲಿ ಇರುವ ಲಭ್ಯತೆ ಮತ್ತು ಜಮೀನುಗಳಿಗೆ ಬಿಡಲಾಗಿರುವ ನೀರಿನ ಪ್ರಮಾಣದ ಅಂಕಿ-ಅಂಶಗಳ ಅವಲೋಕನ ಮಾಡಲಾಯಿತು. ಭತ್ತ, ಮೆಣಸಿನಕಾಯಿ, ಹತ್ತಿ, ಸಜ್ಜೆ, ಸೂರ್ಯಕಾಂತಿ ಸೇರಿದಂತೆ ತೋಟಗಾರಿಕೆ ಬೆಳೆಗಳ ಹಾನಿ ಕುರಿತು ಪರಿಶೀಲಿಸಲಾಯಿತು.

ಜಿಲ್ಲಾಧಿಕಾರಿ ಪೂರ್ವಿತಾ ಎಸ್., ಜಿಪಂ ಸಿಇಒ ಈಶ್ವರ್ ಕಾಂದೂ ಸೇರಿದಂತೆ ಇತರೆ ಇಲಾಖೆ ಅಧಿಕಾರಿಗಳು ಬರ ಪರಿಸ್ಥಿತಿ ಕುರಿತು ಕೇಂದ್ರ ತಂಡದ ಗಮನ ಸೆಳೆದರು. ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಆಗಿರುವ ಬೆಳೆ ಹಾನಿ ಕುರಿತು ಸಭೆಯಲ್ಲಿ ವಿಡಿಯೋ ಪರಿಶೀಲಿಸಿದರು. ಬರ ಪರಿಶೀಲನಾ ಸಭೆಯಲ್ಲಿ ರಾಖೇಶ ಕುಮಾರ, ಡಾ.ಮಾನಸಿಂಗ್, ಪೌರ್ತಿ ಪೌಲ್, ಗಿರೀಶ ಆರ್ ಕೇಂದ್ರ ತಂಡ ಬೆಳೆ ಹಾನಿ ಕುರಿತು ಪರಿಶೀಲಿಸಿತು.

---

ಬಾಕ್ಸ್:

ಕೇಂದ್ರ ಗಮನ ಹರಿಸಲಿ: ಕರೆಮ್ಮ

ದೇವದುರ್ಗ ತಾಲೂಕಿನ ಮಸರಕಲ್ ಬಳಿ ಬೆಳೆ ವೀಕ್ಷಿಸುತ್ತಿದ್ದ ಕೇಂದ್ರ ತಂಡವನ್ನು ಭೇಟಿ ಮಾಡಿದ ಶಾಸಕಿ, ದೇವದುರ್ಗ ಮತ್ತು ಅರಕೇರಾ ತಾಲೂಕುಗಳಲ್ಲಿ ಮುಂಗಾರು ಮತ್ತು ಹಿಂಗಾರು ಮಳೆ ಬರದ ಕಾರಣ ರೈತರು ಸಂಕಷ್ಟದಲ್ಲಿದ್ದಾರೆ. ನಾರಾಯಣಪೂರ ಬಲದಂಡೆ ನಾಲಾ ನೀರಿನ ಕೊರತೆ ಇರುವ ಹಿನ್ನೆಲೆಯಲ್ಲಿ ನೀರಾವರಿ ಸೌಲಭ್ಯ ಹೊಂದಿರುವ ರೈತರೂ ಕೂಡ ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ವಸ್ತು ಸ್ಥಿತಿಯ ಕುರಿತು ತಮ್ಮ ಅಧ್ಯಯನ ವರದಿ ಮೂಲಕ ಕೇಂದ್ರ ಸರಕಾರದ ಗಮನ ಸೆಳೆಯಬೇಕೆಂದು ಶಾಸಕಿ ಕರೆಮ್ಮ ಜಿ.ನಾಯಕ ಒತ್ತಾಯಿಸಿದರು.

----

ಕತ್ತಲಲ್ಲಿ ಬೆಳೆ ಪರಿಶೀಲನೆ ಬಗ್ಗೆ ರೈತರ ಆಕ್ಷೇಪ

ಕವಿತಾಳ: ಸಮೀಪದ ಅಮೀನಗಡ ಗ್ರಾಮದ ಬಳಿ ಕೇಂದ್ರ ಬರ ಅಧ್ಯಯನ ತಂಡದ ಅಧಿಕಾರಿಗಳು ಬೆಳೆಗಳನ್ನು ಪರಿಶೀಲನೆ ಮಾಡಿದರು.

ಸಂಜೆ 4.50ಕ್ಕೆ ಭೇಟಿಯ ಸಮಯ ನಿಗದಿಯಾಗಿತ್ತು ಅದರಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ರೈತರು ತಂಡದ ಆಗಮನಕ್ಕೆ ಕಾಯುತ್ತಿದ್ದರು ಆದರೆ ಒಂದೂವರೆ ತಾಸು ತಡವಾಗಿ ಆಗಮಿಸಿದ ತಂಡ ತೊಗರಿ ಬೆಳೆ ಪರಿಶೀಲಿಸಿ ರೈತರೊಂದಿಗೆ ಮಾಹಿತಿ ಪಡೆದರು.

ಮಳೆ ಕೊರತೆ ಕುರಿತು ಮಾಹಿತಿ ಪಡೆದ ಅಧಿಕಾರಿಗಳು ಬೆಳೆ ಹಾನಿ ಪ್ರಸ್ತುತ ಸ್ಥತಿಗತಿ ಕುರಿತು ಪ್ರಶ್ನಿಸಿದರು. ರೈತರೊಬ್ಬರು ಹಿಂದಿಯಲ್ಲಿ ಅಧಿಕಾರಿಗಳಿಗೆ ಮಾಹಿತಿ ನೀಡಿ ತೀವ್ರ ಬರ ಪರಿಸ್ಥಿತಿ ಉಂಟಾಗಿದೆ ಮಳೆ ಕೊರತೆಯಿಂದ ಈರುಳ್ಳಿ, ಹತ್ತಿ ಮತ್ತು ತೊಗರಿ ಮತ್ತಿತರ ಬೆಳೆಗಳು ನಾಶವಾಗಿ ನಷ್ಟ ಉಂಟಾಗಿದೆ ಮಳೆ ಕೊರತೆಯಿಂದ ರೈತರು ದುಡಿಯಲು ಗುಳೆ ಹೋಗುತ್ತಿದ್ದಾರೆ ಎಂದು ತಿಳಿಸಿದರು. ಬೆಳೆ ವಿಮೆ ಕುರಿತ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ ರೈತರು ಈ ಬಗ್ಗೆ ನಮಗೆ ಮಾಹಿತಿ ಇಲ್ಲ ತಾವು ಬೆಳೆ ವಿಮೆ ಮಾಡಿಸಿಲ್ಲ ಹೀಗಾಗಿ ಪ್ರತಿ ಎಕರೆಗೆ 40-50 ಸಾವಿರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಕತ್ತಲಲ್ಲಿ ಬೆಳೆ ಪರಿಶೀಲನೆ ಬಗ್ಗೆ ಕೆಲವು ರೈತರು ಆಕ್ಷೇಪ ವ್ಯಕ್ತಪಡಿಸಿ ಕೇವಲ ರಸ್ತೆ ಬದಿ ಹೊಲಗಳಲ್ಲಿ ಬೆಳೆ ಪರಿಶೀಲಿಸಿದೆ ಸಂಪೂರ್ಣ ಬೆಳೆ ನಾಶವಾದ ಜಮೀನು ಗಳನ್ನು ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.

----

04ಕೆಪಿಆರ್‌ಸಿಆರ್‌ 03: ರಾಯಚೂರು ಜಿಲ್ಲಾ ಪ್ರವಾಸ ಕೈಗೊಂಡಿರುವ ಕೇಂದ್ರ ಬರ ಅಧ್ಯಯನ ತಂಡದ ಅಧಿಕಾರಿಗಳು ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆಹಾನಿಯನ್ನು ಪರಿಶೀಲಿಸಿದರು.

04ಕೆಪಿಡಿವಿಡಿ01: ದೇವದುರ್ಗ ತಾಪಂ ಸಭಾಂಗಣದಲ್ಲಿ ಕೇಂದ್ರ ತಂಡ ಬರ ಪರಿಸ್ಥಿತಿಯ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.