ಸಾರಾಂಶ
ಮಾದಕ ದ್ರವ್ಯಗಳ ವ್ಯಸನಕ್ಕೆ ಒಳಗಾಗುವುದು ಸಾವಿಗೆ ಆಹ್ವಾನ ನೀಡಿದಂತೆ ಎಂದು ತೋರಣಗಲ್ಲು ಪೊಲೀಸ್ ಠಾಣೆಯ ತನಿಖಾದಳ ವಿಭಾಗದ ಸಬ್‌ಇನ್‌ಸ್ಪೆಕ್ಟರ್ ಎಸ್.ಎಸ್. ವಡ್ಡರ್ ಅಭಿಪ್ರಾಯಪಟ್ಟರು.
ಸಂಡೂರು: ಮಾದಕ ದ್ರವ್ಯಗಳ ವ್ಯಸನಕ್ಕೆ ಒಳಗಾಗುವುದು ಸಾವಿಗೆ ಆಹ್ವಾನ ನೀಡಿದಂತೆ ಎಂದು ತೋರಣಗಲ್ಲು ಪೊಲೀಸ್ ಠಾಣೆಯ ತನಿಖಾದಳ ವಿಭಾಗದ ಸಬ್‌ಇನ್‌ಸ್ಪೆಕ್ಟರ್ ಎಸ್.ಎಸ್. ವಡ್ಡರ್ ಅಭಿಪ್ರಾಯಪಟ್ಟರು. ತಾಲೂಕಿನ ತೋರಣಗಲ್ಲು ಗ್ರಾಮದಲ್ಲಿನ ಮೊರಾರ್ಜಿ ಅಲ್ಪಸಂಖ್ಯಾತ ವಸತಿ ಶಾಲೆಯಲ್ಲಿ ಸೋಮವಾರ ನಡೆದ ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯುವಜನತೆ ಮಾದಕ ದ್ರವ್ಯಗಳ ವ್ಯಸನಿಗಳಾಗಬಾರದು. ದುಷ್ಕರ್ಮಿಗಳು ದುಡ್ಡು ಇರುವ, ಅತಿ ಬಡವ ಹಾಗೂ ಖಿನ್ನತೆ ಇರುವ ಮಕ್ಕಳನ್ನು ಟಾರ್ಗೆಟ್ ಮಾಡಿಕೊಂಡು ತಮ್ಮ ಜಾಲದಲ್ಲಿ ಬಳಸಿಕೊಳ್ಳುವರು. ಅಪರಿಚಿತ ಹಾಗೂ ಅನುಮಾನಾಸ್ಪದ ವ್ಯಕ್ತಿಗಳ ಅಸಹಜ ಚಟುವಟಿಕೆಗಳು ಕಂಡುಬಂದಲ್ಲಿ, ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ನೀಡಿದರೆ, ಮುಂದಿನ ಕ್ರಮ ಕೈಗೊಳ್ಳುತ್ತೇವೆ.
ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣ ನಮ್ಮ ಗುರಿ ಎಂದರು. ಅಸಿಸ್ಟಂಟ್ ಸಬ್‌ಇನ್‌ಸ್ಪೆಕ್ಟರ್ ಪ್ರಕಾಶ್ ಮಾತನಾಡಿ, ಮಕ್ಕಳ ನಡೆ, ನುಡಿ ಪಾಲಕರಿಗೆ ಗೌರವ ತರುವ ರೀತಿ ಇರಬೇಕು. ವಿದ್ಯಾರ್ಥಿಗಳು ಉತ್ತಮ ಜ್ಞಾನ ಸಂಪಾದನೆಯ ಕಡೆಗೆ ಗಮನ ಹರಿಸಬೇಕು. ಹಬ್ಬಗಳನ್ನು ಮಕ್ಕಳು ತಮ್ಮ ಕುಟುಂಬದವರೊಂದಿಗೆ ಆಚರಿಸಬೇಕು. ಉತ್ತಮ ಪ್ರಜೆಗಳು ದೇಶದ ಆಸ್ತಿ ಎಂದರು.
ಕಾರ್ಯಕ್ರಮದಲ್ಲಿ ಮಾದಕ ಮುಕ್ತ ಸಮಾಜ ನಿರ್ಮಾಣ ಕುರಿತು ಪ್ರತಿಜ್ಞೆಯನ್ನು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಬೋಧಿಸಿದರು. ಪೊಲೀಸ್ ಠಾಣೆಯ ನೂರ್ ಅಹಮ್ಮದ್, ಸುಧಾಕರ್, ಆರೋಗ್ಯ ಇಲಾಖೆಯ ಸಮಾಲೋಚಕ ಪ್ರಶಾಂತ್ ಕುಮಾರ್, ಶಾಲೆಯ ಪ್ರಾಚಾರ್ಯ ವೀರೇಶ್, ಸಹ ಶಿಕ್ಷಕ ಲೋಕರೆಡ್ಡಿ, ಅಕ್ಬರ್ ಅಲಿ, ಗೌಸಿಯಾ, ರೆಹಾನಾ, ಪುಷ್ಪಾ, ಭಾಗ್ಯ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.