ಮಾದಕ ವ್ಯಸನ ಜಾಗತಿಕ ಸಮಸ್ಯೆ: ಪಿಐ ವೆಂಕಟೇಶ್

| Published : Nov 22 2024, 01:17 AM IST

ಸಾರಾಂಶ

ತಿಪಟೂರು ಬಡತನ, ನಿರುದ್ಯೋಗ, ಭಯೋತ್ಪಾದನೆ, ಭ್ರಷ್ಟಾಚಾರದಂತೆ ಮಾದಕ ವ್ಯವಸನವು ಜಾಗತಿಕ ಸಮಸ್ಯೆಯಾಗಿರುವುದು ದುರಂತವಾಗಿದ್ದು ಇತ್ತೀಚಿನ ದಿನಗಳಲ್ಲಿ ಮಾದಕ ವ್ಯಸನಗಳಿಗೆ ಯುವ ಪೀಳಿಗೆ ಹೆಚ್ಚು ಬಲಿಯಾಗುತ್ತಿರುವುದು ವಿಷಾದಕರ ಸಂಗತಿ ಎಂದು ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ ಸಿ. ವೆಂಕಟೇಶ್ ಕಳವಳ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಬಡತನ, ನಿರುದ್ಯೋಗ, ಭಯೋತ್ಪಾದನೆ, ಭ್ರಷ್ಟಾಚಾರದಂತೆ ಮಾದಕ ವ್ಯವಸನವು ಜಾಗತಿಕ ಸಮಸ್ಯೆಯಾಗಿರುವುದು ದುರಂತವಾಗಿದ್ದು ಇತ್ತೀಚಿನ ದಿನಗಳಲ್ಲಿ ಮಾದಕ ವ್ಯಸನಗಳಿಗೆ ಯುವ ಪೀಳಿಗೆ ಹೆಚ್ಚು ಬಲಿಯಾಗುತ್ತಿರುವುದು ವಿಷಾದಕರ ಸಂಗತಿ ಎಂದು ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ ಸಿ. ವೆಂಕಟೇಶ್ ಕಳವಳ ವ್ಯಕ್ತಪಡಿಸಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ರಾಜ್ಯ ಮಟ್ಟದ ಸಮನ್ವಯ ಸಂಸ್ಥೆ, ರಾಷ್ಟ್ರೀಯ ಸೇವಾ ಯೋಜನೆ, ರೆಡ್‌ಕ್ರಾಸ್ ಘಟಕ, ರೆಡ್ ರಿಬ್ಬನ್ ಘಟಕಗಳ ವತಿಯಿಂದ ನಡೆದ ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಯುವಕರು ಮಾದಕ ವ್ಯಸನಗಳ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ವಿದ್ಯಾರ್ಥಿಗಳು ಇಂತಹ ವ್ಯಸನಗಳಿಂದ ದೂರವಿದ್ದು ತಮ್ಮ ಕುಟುಂಬ, ಪರಿಸರ ಮತ್ತು ತಮ್ಮ ಸುತ್ತಮುತ್ತಲಿನ ವ್ಯಕ್ತಿಗಳಲ್ಲಿ ಮಾದಕ ವ್ಯಸನಗಳಿಂದ ದೂರವಿರುವಂತೆ ಜಾಗೃತಿ ಮೂಡಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾರ್ಥಿಗಳು ಒಳ್ಳೆಯ ವಿಚಾರಗಳನ್ನು ಗಮನಿಸಬೇಕೆ ಹೊರತು ಸಮಾಜವನ್ನು ಹಾಳು ಮಾಡುವ ಕಾರ್ಯಕ್ಕೆ ಬೆಂಬಲಿಸಬಾರದು. ಯುವಕರು ತಮ್ಮ ಶೈಕ್ಷಣಿಕ ಬದುಕಿಗೆ ಹೆಚ್ಚು ಒತ್ತು ನೀಡುತ್ತಾ ಸಂವಿಧಾನಾತ್ಮಕ ಕಾನೂನುಗಳನ್ನು ಅರಿತುಕೊಳ್ಳುವ ಮೂಲಕ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಂಡು ಉನ್ನತ ಹುದ್ದೆಗಳನ್ನು ಪಡೆದು ಸ್ವಾವಲಂಬಿಗಳಾಗಬೇಕೆಂದರು.ರಾಜ್ಯ ಸಮನ್ವಯ ಸಂಸ್ಥೆ ನಿರ್ದೇಶಕ ಬಾಲಕೃಷ್ಣರಾಜ್ ಮಾತನಾಡಿ, ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿ ಮತ್ತು ಉದ್ಯಮಗಳ ಪ್ರಭಾವದಿಂದಾಗಿ ಕೌಟುಂಬಿಕವಾಗಿ ಅನೇಕ ರೀತಿಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದು ಅನೇಕ ಮಾರಣಾಂತಿಕ ರೋಗಗಳಿಗೆ ಒಳಗಾಗುತ್ತಿದ್ದಾರೆ. ಗಾಂಜಾ, ಅಫಿಮು, ತಂಬಾಕು, ಕೊಕೇನ್ ಇನ್ನಿತರ ಮತ್ತು ಬರುವ ಔಷಧಿಗಳನ್ನು ತೆಗೆದುಕೊಳ್ಳುವ ಮೂಲಕ ಯುವಕರು ಮಾದಕ ಉನ್ಮತ್ತತೆಯಲ್ಲಿ ತೇಲಾಡುತ್ತಾ ಕ್ಷಣಿಕ ಮೋಜಿಗಾಗಿ ಜೀವನವನ್ನು ಕಳೆದುಕೊಳ್ಳುತ್ತಾ ಪೋಷಕರನ್ನು ಅನಾಥರನ್ನಾಗಿಸುತ್ತಿದ್ದಾರೆ ಎಂದರು.ರಾಜ್ಯ ಸಮನ್ವಯ ಸಂಸ್ಥೆಯ ಸಂಯೋಜಕಿ ಶೈಲಾಶ್ರೀ ಮಾತನಾಡಿ, ಮಾದಕ ವ್ಯಸನಗಳನ್ನು ಸೇವಿಸುತ್ತಾ ಬದುಕಿನಲ್ಲಿ ಅನೇಕ ಸಮಸ್ಯೆಗಳಿಗೆ ತುತ್ತಾದವರಿಗೆ ಮಾದಕ ವ್ಯವಸನ ಮುಕ್ತ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಅವರನ್ನು ಆರೋಗ್ಯವಂತರನ್ನಾಗಿ ಮಾಡಿ ಸದೃಢ ಸಮಾಜ ನಿರ್ಮಿಸುವ ಪ್ರಯತ್ನ ಮಾಡಬೇಕಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ. ಎಚ್.ಬಿ. ಕುಮಾರಸ್ವಾಮಿ ಮಾತನಾಡಿ, ಯುವಕರು ಮಾದಕ ವ್ಯಸನಗಳನ್ನು ಸೇವಿಸುವುದಷ್ಟೇ ಅಪರಾಧವಲ್ಲ ಮಾದಕ ವಸ್ತುಗಳನ್ನು ಸೇವಿಸುವಂತೆ ಇತರರನ್ನು ಪ್ರಚೋದಿಸುವುದು ಅಪರಾಧವಾಗಿದೆ. ಆದ್ದರಿಂದ ಮಾದಕ ವಸ್ತುಗಳನ್ನು ಸೇವಿಸುವವರಿಗೆ ಅರಿವು ಮೂಡಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಿಸುವಂತೆ ಕರೆ ನೀಡಿದರು.ಕಾರ್ಯಕ್ರಮದಲ್ಲಿ ಎನ್‌ಎಸ್‌ಎಸ್ ಯೋಜನಾಧಿಕಾರಿಗಳಾದ ಡಾ. ಎಂ.ಆರ್. ಚಿಕ್ಕಹೆಗ್ಗಡೆ, ಎಚ್.ಎಸ್. ಸ್ಮಿತಾ, ಎಚ್.ಸಿ. ಶಶಿಕುಮಾರ್, ವೈ.ಕೆ. ಭಾರತಿ, ರೆಡ್‌ಕ್ರಾಸ್ ಘಟಕದ ಸಮನ್ವಯಾಧಿಕಾರಿ ರಿಯಾಜ್‌ಪಾಷ, ರೆಡ್‌ರಿಬ್ಬನ್ ಘಟಕದ ಸಂಚಾಲಕರಾದ ನಾಗರಾಜು, ಶ್ರೀನಿವಾಸ್, ಸುಭದ್ರಮ್ಮ, ಶಶಿಕುಮಾರ್, ದೇವರಾಜು ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು, ಅತಿಥಿ ಉಪನ್ಯಾಸಕರು, ಗ್ರಂಥಪಾಲಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.