ಧರ್ಮಸ್ಥಳದಲ್ಲಿ ವ್ಯಸನಮುಕ್ತರ ಸಮ್ಮಿಲನ ಮತ್ತು ಶತದಿನೋತ್ಸವ ಸಮಾರಂಭ

| Published : May 21 2025, 12:18 AM IST

ಧರ್ಮಸ್ಥಳದಲ್ಲಿ ವ್ಯಸನಮುಕ್ತರ ಸಮ್ಮಿಲನ ಮತ್ತು ಶತದಿನೋತ್ಸವ ಸಮಾರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳವಾರ ಧರ್ಮಸ್ಥಳದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಆಶ್ರಯದಲ್ಲಿ ೨೯೦೦ ಮಂದಿ ವ್ಯಸನಮುಕ್ತರ ಸಮ್ಮಿಲನ ಮತ್ತು ಶತದಿನೋತ್ಸವ ಸಮಾರಂಭ ನೆರವೇರಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಮನುಷ್ಯರು ವ್ಯಸನಗಳ ದಾಸರಾಗಬಾರದು. ಚಟಗಳಿಂದಾಗಿ ಹಣ, ಆರೋಗ್ಯ, ಮರ್ಯಾದೆ, ಪ್ರೀತಿ-ವಿಶ್ವಾಸ ಎಲ್ಲವನ್ನೂ ಮದ್ಯವ್ಯಸನಿಗಳು ಕಳೆದುಕೊಳ್ಳುತ್ತಾರೆ. ವ್ಯಸನಮುಕ್ತರು ನರಕ ದಾಟಿ ಬಂದ ನಾಯಕರು ಎಂದು ಶಿರಹಟ್ಟಿ ಭಾವೈಕ್ಯತಾ ಪೀಠದ ಶ್ರೀ ಮಹಾರಾಜ ನಿರಂಜನ ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ಧರ್ಮಸ್ಥಳದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಆಶ್ರಯದಲ್ಲಿ ಆಯೋಜಿಸಿದ ೨೯೦೦ ಮಂದಿ ವ್ಯಸನಮುಕ್ತರ ಸಮ್ಮಿಲನ ಮತ್ತು ಶತದಿನೋತ್ಸವ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

ಸರ್ಕಾರ ಮದ್ಯ ಕುಡಿಸಬೇಕು ಎಂದು ಹೇಳಿದರೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮದ್ಯಪಾನ ಬಿಡಿಸಬೇಕು ಎಂದು ಪ್ರಯತ್ನಿಸುತ್ತಿದ್ದಾರೆ. ಸರ್ಕಾರ ಮದ್ಯದಂಗಡಿಗಳನ್ನು ಹೆಚ್ಚಿಸುವುದಲ್ಲದೆ ಮದ್ಯಪಾನ ನಿಯಂತ್ರಣ ಮಂಡಳಿಗೂ ಕೋಟಿಗಟ್ಟಲೆ ಹಣ ವೆಚ್ಚ ಮಾಡುತ್ತಿದೆ. ಆರೋಗ್ಯಪೂರ್ಣ ಸಭ್ಯ, ಸುಸಂಸ್ಕೃತ ಸಮಾಜ ರೂಪಿಸಲು ಹೆಗ್ಗಡೆಯವರು ಮಾಡುತ್ತಿರುವ ಸೇವೆ-ಸಾಧನೆಗಳ ಬಗ್ಗೆ ಶಾಲಾ-ಕಾಲೇಜುಗಳ ಪಠ್ಯದಲ್ಲಿ ಮಾಹಿತಿ ನೀಡಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು.

ಮದ್ಯ ನಿಷೇಧ ಮಾಡುವ ಸರ್ಕಾರ ಬಂದರೆ ಮಾತ್ರ ರಾಜ್ಯದ ಸರ್ವತೋಮುಖ ಪ್ರಗತಿ ಸಾಧ್ಯವಾಗುತ್ತದೆ. ವ್ಯಸನಗಳ ಚಟದಿಂದಾಗಿ ಇಂದು ಪುರುಷರ ಬಂಜೆತನವೂ ಹೆಚ್ಚಾಗುತ್ತಿರುವುದು ಖೇದಕರ ಎಂದು ಅವರು ತಿಳಿಸಿದರು.

ವ್ಯಸನಮುಕ್ತರು ಮುಂದೆ ದೃಢಸಂಕಲ್ಪದೊಂದಿಗೆ ಸಾರ್ಥಕ ಜೀವನ ನಡೆಸಿ ಪರಿಸರದವರಿಗೂ ವ್ಯಸನಮುಕ್ತರಾಗುವ ಪ್ರೇರಣೆ ನೀಡಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು.

ಬೆಂಗಳೂರಿನ ಕ್ಷೇಮವನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರದ್ಧಾಅಮಿತ್ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.

ಹೇಮಾವತಿ ವಿ. ಹೆಗ್ಗಡೆ ಮಾತನಾಡಿ, ಮದ್ಯವ್ಯಸನಿಗಳು ಅನ್ಯಾಯ, ಅತ್ಯಾಚಾರ ಮಾಡುತ್ತಾ ಸಂಸ್ಕಾರಕ್ಕೂ ಸಮಾಜಕ್ಕೂ ಹೊರೆಯಾಗುತ್ತಾರೆ. ವ್ಯಸನಮುಕ್ತರಾಗಿ ಹೊಸ ಬದುಕನ್ನು ಆರಂಭಿಸಿದವರು ಪಂಚೇಂದ್ರಿಯಗಳ ನಿಗ್ರಹದೊಂದಿಗೆ ಮಾನಸಿಕ ಮಾಲಿನ್ಯ ರಹಿತರಾಗಿ ಆದರ್ಶ ಜೀವನ ನಡೆಸಬೇಕು ಎಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ವ್ಯಸನಮುಕ್ತರು ಕುಟುಂಬದ ಸದಸ್ಯರೊಂದಿಗೆ ಪ್ರೀತಿ-ವಿಶ್ವಾಸದಿಂದ ಮುಕ್ತವಾಗಿ ಬೆರೆಯಬೇಕು. ಮತ್ತೆ ಯಾವುದೇ ಕಾರಣಕ್ಕೂ ದುಶ್ಚಟಗಳಿಗೆ ಬಲಿಯಾಗಬಾರದು. ವ್ಯಸನಮುಕ್ತರು ಪರಿಶುದ್ಧ ದೇಹ ಮತ್ತು ಮನಸ್ಸಿನಿಂದ ಇಂದು ದೇವರ ದರ್ಶನ ಮಾಡಿರುವುದರಿಂದ ವಿಶೇಷ ಅನುಗ್ರಹಕ್ಕೆ ಪಾತ್ರರಾಗಿರುವಿರಿ ಎಂದರು.

ವ್ಯಸನಮುಕ್ತರ ಪರವಾಗಿ ರಾಮದುರ್ಗದ ಶಂಕರಪ್ಪ ಮತ್ತು ಉಡುಪಿಯ ಶಶಿಕಲ ರಾಜು ಅನಿಸಿಕೆ ವ್ಯಕ್ತ ಪಡಿಸಿದರು.

ಮೂಡುಬಿದಿರೆಯ ಡಾ. ವಿನಯ್ ಆಳ್ವ ‘ಜಾಗೃತಿ ಅಣ್ಣ’ ಮತ್ತು ‘ಜಾಗೃತಿಮಿತ್ರ’ ಪ್ರಶಸ್ತಿ ಪ್ರದಾನ ಮಾಡಿದರು.

ಡಾ. ಪಿ. ವಿ. ಭಂಡಾರಿ, ಡಾ. ಶ್ರೀನಿವಾಸ ಭಟ್, ವಿ.ರಾಮಸ್ವಾಮಿ, ಪದ್ಮನಾಭ ಶೆಟ್ಟಿ ಮತ್ತು ಕಾಸಿಂ ಇದ್ದರು.

ಅನಿಲ್ ಕುಮಾರ್ ಆಶಯ ನುಡಿಗಳನ್ನು ಆಡಿದರು. ವಿವೇಕ್‌ ವಿ.ಪಾಯಸ್‌ ಸ್ವಾತಿಸಿದರು. ನಟರಾಜ್ ಬಾದಾಮಿ ವಂದಿಸಿದರು. ಯೋಜನಾಧಿಕಾರಿಗಳಾದ ನಾಗರಾಜ್ ಮತ್ತು ರಾಜೇಶ್ ಕಾರ್ಯಕ್ರಮ ನಿರ್ವಹಿಸಿದರು.