ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ
ಅಂತಾರಾಷ್ಟ್ರೀಯ ಮಟ್ಟದ ಮಾದಕ ವಸ್ತುಗಳ ಜಾಲ ಯುವಜನತೆಯನ್ನು ತನ್ನ ತೆಕ್ಕೆಗೆ ಬೀಳಿಸಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ವಿಷಾದ ವ್ಯಕ್ತಪಡಿಸಿದ್ದಾರೆ.ವಿಶ್ವ ತಂಬಾಕು ವಿರೋಧಿ ದಿನಾಚರಣೆ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಕೊಡಗು ವಿಶ್ವವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ಚಿಕ್ಕ ಅಳುವಾರದ ಕೊಡಗು ವಿಶ್ಚವಿದ್ಯಾಲಯ ಕ್ಯಾಂಪಸ್‌ನಲ್ಲಿ ಏರ್ಪಡಿಸಿದ್ದ ಮಾದಕ ವಸ್ತುಗಳ ಬಗ್ಗೆ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಕ್ಕಳನ್ನು ಬೆಳೆಸುವುದು ಸೂಕ್ಷ್ಮ ಕಲೆಯಾಗಿದೆ. ಮನೆಯಿಂದ ಸಂಸ್ಕಾರ ಪ್ರಾರಂಭ ಆಗಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಮನೆಯ ವಾತಾವರಣವೇ ಬದಲಾಗಿದೆ. ಮನೆಯಲ್ಲಿ ವ್ಯಸನಿಗಳು ಇದ್ದರೆ ಅಂಥ ಮನೆಯಲ್ಲಿ ಶೇ. 10ರಷ್ಟು ಪ್ರಕರಣಗಳಲ್ಲಿ ಜವಾಬ್ದಾರಿಯುತ ಮಕ್ಕಳು ಹುಟ್ಟುತ್ತಾರೆ. ಶೇ.10 ಪ್ರಕರಣಗಳಲ್ಲಿ ಹೊಂದಾಣಿಕೆ ಪ್ರವೃತ್ತಿ ಬೆಳೆಸಿಕೊಳ್ಳುತ್ತಾರೆ. ಶೇ.30ರಷ್ಟು ಮಕ್ಕಳು ಮಾನಸಿಕ ಗೊಂದಲಕ್ಕೆ ಒಳಗಾಗುತ್ತಾರೆ. ಇವೆಲ್ಲದರ ನಡುವೆ ಹೆಚ್ಚಿನ ಮಕ್ಕಳು ವ್ಯಸನಕ್ಕೆ ದಾಸರಾಗುವುದು ಖಚಿತ ಎಂದು ಅಂಕಿ ಅಂಶ ನೀಡಿದರು.ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತುಗಳು ಸುಲಭವಾಗಿ ಲಭ್ಯವಾಗುತ್ತಿವೆ. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಇದರ ದಾಸರಾಗುತ್ತಿರುವುದು ಕಂಡು ಬಂದಿದೆ ಎಂದರು.
ಮಾದಕ ವಸ್ತುಗಳ ಬಳಕೆ ಮತ್ತು ಮಾರಾಟದಲ್ಲಿ ಭಾರತ ಎರಡನೇ ಸ್ಥಾನದಲ್ಲಿರುವುದು ದುರಂತ. ಪ್ರವಾಸಿ ದೇಶಗಳಾಗಿ ಗುರುತಿಸಿಕೊಂಡಿರುವ ಬರ್ಮಾ, ಥಾಯ್ಲೆಂಡ್, ಲಾವೋಸ್‌ಗೆ ಮುಖ್ಯ ಟಾರ್ಗೆಟ್ ಭಾರತವೇ ಆಗಿದ್ದು , ಇಲ್ಲಿಯ ಮಕ್ಕಳನ್ನು ಮಾದಕ ವಸ್ತುಗಳಿಗೆ ಬಲಿಯಾಗುವಂತೆ ಮಾಡಲು ಹೊಂಚು ಹಾಕುತ್ತಿದ್ದಾರೆ. ನೆರೆ ರಾಷ್ಟ್ರಗಳೂ ಕೂಡ ಇದಕ್ಕೆ ತಮ್ಮ ಕೊಡುಗೆ ನೀಡುತ್ತಿವೆ ಎಂದರು.ಗುಜರಾತ್ ಗೋಧಿಯ ಕಣಜ ಎಂದು ಗುರುತಿಸಿಕೊಂಡಿದ್ದು ಪ್ರಸಕ್ತ ಅಲ್ಲಿ ಗಾಂಜಾ ಬಳಕೆ ಯಥೇಚ್ಛವಾಗಿದ್ದು ಗಾಂಜಾ ಕಣಜ ಆಗಿದೆ. ಕರ್ನಾಟಕದಲ್ಲೂ ಗಾಂಜಾ ಬಳಕೆ ಅಧಿಕೃತ ಮಾಡಲು ಕೂಗು ಎದ್ದಿರುವುದು ವಿಪರ್ಯಾಸವೇ ಸರಿ ಎಂದರು.
ಮನೆಯ ವಾತಾವರಣ ಸರಿ ಇಲ್ಲದಾಗ ಮಕ್ಕಳು ಖಿನ್ನತೆಗೆ ಒಳಗಾಗುತ್ತಾರೆ. ಮನೋರೋಗ ಕಾರಣದಿಂದ ಹೆಚ್ಚಿನ ಯುವಜನತೆ ವ್ಯಸನಕ್ಕೆ ಬಲಿಯಾಗಬಹುದು. ವ್ಯಸನವೂ ಮನೋರೋಗಕ್ಕೆ ಕಾರಣವಾಗುತ್ತದೆ. ಆದರೆ ನಂತರ ದುಶ್ಚಟದಿಂದ ಹೊರಬರಲು ಆಗುವುದಿಲ್ಲ. ಎಲ್ಲಾ ವಿದ್ಯಾಸಂಸ್ಥೆಗಳ ಕ್ಯಾಂಪಸ್‌ಗಳಲ್ಲೂ ಡ್ರಗ್ಸ್ ಜಾಲ ಇದೆ ಎನ್ನುವುದೇ ಆತಂಕ ಹುಟ್ಟಿಸುವ ಬೆಳವಣಿಗೆಯಾಗಿದೆ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಕೊಡಗು ವಿ.ವಿ. ಕುಲಸಚಿವ ಡಾ. ಸೀನಪ್ಪ ಮಾತನಾಡಿ, ಮಕ್ಕಳನ್ನು ಸುಂಸ್ಕೃತರನ್ನಾಗಿ ಮಾಡಲು ಒಳ್ಳೆಯ ಮನೆ ವಾತಾವರಣ, ಉತ್ತಮ ಶಿಕ್ಷಣ ಕೇಂದ್ರ ಇದ್ದರೆ ಸಾಕು ಎಂದರು. ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮುಕ್ತ ಸಮಾಜ ನಿರ್ಮಾಣ ಮಾಡುವ ಸಂಬಂಧ ಪ್ರತಿಜ್ಞಾವಿಧಿ ಬೋಧಿಸಿದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಎಂ.ಬಿ. ಅಭಿಮನ್ಯು ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಮತ್ತು ಯುವ ಜನಾಂಗದಿಂದ ಮಾತ್ರ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜನಜಾಗೃತಿ ವೇದಿಕೆ ಪ್ರಾದೇಶಿಕ ಯೋಜನಾಧಿಕಾರಿ ಹರೀಶ್ ಆಚಾರ್ಯ, ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಲೀಲಾವತಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಸೋಮವಾರಪೇಟೆ ತಾಲೂಕು ಯೋಜನಾಧಿಕಾರಿ ಎಚ್. ರೋಹಿತ್, ಶನಿವಾರಸಂತೆ ವಲಯ ಮೇಲ್ವಿಚಾರಕರಾದ ನಾಗರಾಜ್, ಪತ್ರಕರ್ತ ಸಂಘದ ಪದಾಧಿಕಾರಿಗಳಾದ ಸುನಿಲ್ ಪೊನ್ನೇಟ್ಟಿ , ಕುಡೆಕಲ್ ಗಣೇಶ್, ವನಿತಾ ಚಂದ್ರಮೋಹನ್, ಟಿ.ಆರ್.ಪ್ರಭುದೇವ್, ಕೆ.ಎಸ್. ಸಂಶುದ್ದೀನ್, ಸದಸ್ಯರು ಇದ್ದರು.ವಿದ್ಯಾರ್ಥಿಗಳಾದ ಅಮೃತ್ ರಾಜ್ ಮತ್ತು ತಂಡ ಪ್ರಾರ್ಥಿಸಿತು. ಯೋಜನಾಧಿಕಾರಿ ಎಚ್.ರೋಹಿತ್ ಸ್ವಾಗತಿಸಿದರು. ಉಪನ್ಯಾಸಕ ಡಾ.ಜಮೀರ್ ಅಹಮ್ಮದ್ ಕಾರ್ಯಕ್ರಮ ನಿರೂಪಿಸಿದರು. ಡಾ. ರಮೇಶ್ ಬಿ.ಆರ್. ವಂದಿಸಿದರು.