ಜನರನ್ನು ದುಶ್ಚಟಗಳಿಂದ ಮುಕ್ತಿಗೊಳಿಸಲು ತಮ್ಮ ಜೋಳಿಗೆಯಲ್ಲಿ ದುಶ್ಚಟಗಳನ್ನು ಭಿಕ್ಷೆಯಾಗಿ ಪಡೆದು ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಡಾ.ಮಹಾಂತ ಶಿವಯೋಗಿಗಳು ನೀಡಿದ ಕೊಡುಗೆ ಅವಿಸ್ಮರಣೀಯ. ಅವರು ಸಮಾಜದ ಯುವ ಪೀಳಿಗೆಯನ್ನು ದುಶ್ಚಟಗಳಿಂದ ರಕ್ಷಿಸುವ ಕಡೆಗೆ ಚಿತ್ತ ಹರಿಸಿ ದುಶ್ಚಟಗಳ ಬಗ್ಗೆ ಸತತ ಜಾಗೃತಿ, ಮಾರ್ಗದರ್ಶನ ನೀಡುವ ಮೂಲಕ ಸಮಾಜದ ಸುಧಾರಣೆಗೆ ಪಣತೊಟ್ಟ ಮಹಾನ್ ಚೇತನ ಎಂದು ದ.ಕ. ಜಿಲ್ಲಾ ಹೆಚ್ಚುವರಿ ಪೋಲಿಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮಾರೆಡ್ಡಿ ಹೇಳಿದರು.
ಮಂಗಳೂರು: ಜನರನ್ನು ದುಶ್ಚಟಗಳಿಂದ ಮುಕ್ತಿಗೊಳಿಸಲು ತಮ್ಮ ಜೋಳಿಗೆಯಲ್ಲಿ ದುಶ್ಚಟಗಳನ್ನು ಭಿಕ್ಷೆಯಾಗಿ ಪಡೆದು ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಡಾ.ಮಹಾಂತ ಶಿವಯೋಗಿಗಳು ನೀಡಿದ ಕೊಡುಗೆ ಅವಿಸ್ಮರಣೀಯ. ಅವರು ಸಮಾಜದ ಯುವ ಪೀಳಿಗೆಯನ್ನು ದುಶ್ಚಟಗಳಿಂದ ರಕ್ಷಿಸುವ ಕಡೆಗೆ ಚಿತ್ತ ಹರಿಸಿ ದುಶ್ಚಟಗಳ ಬಗ್ಗೆ ಸತತ ಜಾಗೃತಿ, ಮಾರ್ಗದರ್ಶನ ನೀಡುವ ಮೂಲಕ ಸಮಾಜದ ಸುಧಾರಣೆಗೆ ಪಣತೊಟ್ಟ ಮಹಾನ್ ಚೇತನ ಎಂದು ದ.ಕ. ಜಿಲ್ಲಾ ಹೆಚ್ಚುವರಿ ಪೋಲಿಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮಾರೆಡ್ಡಿ ಹೇಳಿದರು.
ಅವರು ನಗರದ ಕೆನರಾ ಕಾಲೇಜಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ ಹಾಗೂ ಕೆನರಾ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಶನಿವಾರ ನಡೆದ ಶ್ರೀ ಮ.ನಿ.ಪ್ರ.ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಪ್ರಯುಕ್ತ ವ್ಯಸನಮುಕ್ತ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ದೇಶದ ಅಭಿವೃದ್ಧಿಗೆ ಯುವ ಪೀಳಿಗೆ ಪ್ರಮುಖ ಶಕ್ತಿಯಾಗಿದ್ದು, ಅವರಿಗೆ ಮಾರ್ಗದರ್ಶನ ನೀಡಿದಾಗ ಉತ್ತಮ ಪಥದತ್ತ ಸಾಗುತ್ತಾ ದೇಶಕ್ಕೆ ಅತ್ಯುತ್ತಮ ಕೊಡುಗೆ ನೀಡಬಲ್ಲರು. ಎಳೆಯ ವಯಸ್ಸಿನಲ್ಲಿಯೇ ಮಾದಕ ವ್ಯಸನಗಳ ಬಗ್ಗೆ ಹಾಗೂ ಅದರಿಂದಾಗುವ ಘೋರ ಪರಿಣಾಮಗಳನ್ನು ತಿಳಿಸುವ ಅನಿವಾರ್ಯತೆ ಇದೆ. ಯಾರಾದರೂ ಮಾದಕ ವ್ಯಸನಗಳ ಆಮಿಷ ಒಡ್ಡಿಗಾದ ಅದನ್ನು ನಿರಾಕರಿಸಿ ‘ಬೇಡ’ ಎಂಬ ಕಠಿಣ ಸಂಕಲ್ಪ ಮಾಡಿ ಮುಂದುವರಿದರೆ ವ್ಯಸನ ಮುಕ್ತ ಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ ಎಂದರು.ಉಪನ್ಯಾಸ ನೀಡಿದ ಆಪ್ತಸಮಾಲೋಚಕ ರಫೀಕ್ ಮಾಸ್ಟರ್ ಮಾತನಾಡಿ, ಮಾದಕ ವ್ಯಸನ ಎಂಬ ಚಟ ವ್ಯಸನಕ್ಕೊಳಗಾದ ವ್ಯಕ್ತಿಯನ್ನು ಬಾಧಿಸುವುದು ಮಾತ್ರವಲ್ಲದೆ ಅವರ ತಂದೆ ತಾಯಿಯು ನರಕಯಾತನೆ ಪಡುವಂತೆ ಮಾಡುತ್ತದೆ. ಪೋಷಕರ ಸಾಮಾಜಿಕ ಗೌರವಕ್ಕೆ ಧಕ್ಕೆ ಉಂಟುಮಾಡುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಕೆಟ್ಟ ಚಟಗಳ ಕಡೆಗೆ ಗಮನ ಹರಿಸದೆ ಓದಿನ ಕಡೆಗೆ ಗಮನ ಹರಿಸಬೇಕು. ಯುವಜನರು ಸನ್ಮಾರ್ಗದಲ್ಲಿ ನಡೆದರೆ ಹೆತ್ತವರಿಗೆ ನೆಮ್ಮದಿ ಸಿಗಲು ಸಾಧ್ಯ ಹಾಗೂ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ ಎಂದರು.
ಕೆನರಾ ಕಾಲೇಜಿನ ಪ್ರಾಂಶುಪಾಲೆ ಡಾ.ಪ್ರೇಮಲತಾ ವಿ.ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ. ಉಳೆಪಾಡಿ, ಮನೋಶಾಸ್ತ್ರಜ್ಞ ಡಾ.ಸಾತ್ವಿಕ್, ಶಾಲಾ ಶಿಕ್ಷಣ ಇಲಾಖೆ ವಿಷಯ ಪರಿವೀಕ್ಷಕ ಪ್ರಕಾಶ್ ಮತ್ತಿತರರು ಇದ್ದರು.
ಜಿಲ್ಲಾ ವಾರ್ತಾಧಿಕಾರಿ ಬಿ.ಎ.ಖಾದರ್ ಶಾ ಸ್ವಾಗತಿಸಿದರು. ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕಿ ವೀಣಾ ನಿರೂಪಿಸಿದರು. ಉಪನ್ಯಾಸಕಿ ಪೂಜಾ ವಂದಿಸಿದರು.-------