ಮಾದಕವಸ್ತು ಮುಕ್ತ ಜಿಲ್ಲೆ ಜಾಗೃತಿ ಅಭಿಯಾನ

| Published : Oct 25 2024, 01:13 AM IST

ಸಾರಾಂಶ

ಪ್ರತಿ ಕಾಲೇಜುಗಳಿಗೆ ತಮ್ಮ ವಿದ್ಯಾರ್ಥಿ ಹಾಗೂ ಪಾಲಕರಿಗೆ, ಸಿಬ್ಬಂದಿಗೆ ಡ್ರಗ್ಸ್ ಕುರಿತು ಜಾಗೃತಿ ಮೂಡಿಸುವ ಜವಾಬ್ದಾರಿ ನೀಡಲಾಗಿದೆ. ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸುವ ಶಿಕ್ಷಣ ಸಂಸ್ಥೆ, ಕಾಲೇಜುಗಳಿಗೆ ಪ್ರಶಂಸನಾ ಪತ್ರ ನೀಡಿ, ಅಭಿನಂದಿಸಲಾಗುವುದು ಎಂದು ಹೇಳಿದ ಜಿಲ್ಲಾಧಿಕಾರಿ.

ಧಾರವಾಡ:

ನವೆಂಬರ್‌ ಹಾಗೂ ಡಿಸೆಂಬರ್‌ ತಿಂಗಳಲ್ಲಿ ವಿಶೇಷ ಜಾಗೃತಿ ಕಾರ್ಯಕ್ರಮ ಆಯೋಜಿಸುವ ಮೂಲಕ ಜಿಲ್ಲೆಯನ್ನು ಮಾದಕವಸ್ತು ಮುಕ್ತ ಜಿಲ್ಲೆ ಮಾಡಲು ಕ್ರಮವಹಿಸಲಾಗುವುದು. ಮಾದಕವಸ್ತು ಮುಕ್ತ ಜಿಲ್ಲೆಗಾಗಿ ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಅಭಿಯಾನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾದಕ ವಸ್ತು ನಿಯಂತ್ರಣ ಹಾಗೂ ನಿರ್ಮೂಲನೆ ಕುರಿತು ಗುರುವಾರ ನಡೆದ ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿ, ಮಾದಕ ವಸ್ತುಗಳ ಬಗ್ಗೆ ಸಾರ್ವಜನಿಕರಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಿ, ತಿಳಿವಳಿಕೆ ಮೂಡಿಸಬೇಕು. ಮಾದಕ ವಸ್ತುಗಳ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರವು ಅಗತ್ಯವಾಗಿದೆ ಎಂದರು.

ಸಂಬಂಧಿಸಿದ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯಕ್ರಮ ರೂಪಿಸಬೇಕು. ನವೆಂಬರ್‌ ಮತ್ತು ಡಿಸೆಂಬರ್‌ ತಿಂಗಳಲ್ಲಿ ಡ್ರಗ್ಸ್ ಕುರಿತು ಶಾಲಾ-ಕಾಲೇಜುಗಳಲ್ಲಿ ವಿಶೇಷ ಉಪನ್ಯಾಸ, ಕಿರುನಾಟಕ, ಏಕಪಾತ್ರಾಭಿನಯದಂತಹ ಕಾರ್ಯಕ್ರಮ ಹಮ್ಮಿಕೊಂಡು ಅಭಿಯಾನ ಮಾಡಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಹಾಗೂ ಪೊಲೀಸ್ ಆಯುಕ್ತಾಲಯ, ಶಿಕ್ಷಣ ಸಂಸ್ಥೆ, ಶಿಕ್ಷಣ, ಆರೋಗ್ಯ ಇಲಾಖೆಗಳ ಜತೆ ಚರ್ಚಿಸಿ, ಯೋಜನೆ ರೂಪಿಸಿಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಪ್ರತಿ ಕಾಲೇಜುಗಳಿಗೆ ತಮ್ಮ ವಿದ್ಯಾರ್ಥಿ ಹಾಗೂ ಪಾಲಕರಿಗೆ, ಸಿಬ್ಬಂದಿಗೆ ಡ್ರಗ್ಸ್ ಕುರಿತು ಜಾಗೃತಿ ಮೂಡಿಸುವ ಜವಾಬ್ದಾರಿ ನೀಡಲಾಗಿದೆ. ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸುವ ಶಿಕ್ಷಣ ಸಂಸ್ಥೆ, ಕಾಲೇಜುಗಳಿಗೆ ಪ್ರಶಂಸನಾ ಪತ್ರ ನೀಡಿ, ಅಭಿನಂದಿಸಲಾಗುವುದು ಎಂದರು.

ಎಸ್ಪಿ ಡಾ. ಗೋಪಾಲ ಬ್ಯಾಕೋಡ ಮಾತನಾಡಿ, ಪ್ರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಅಂಚೆ ಕಚೇರಿಗೆ ಭೇಟಿ ನೀಡಿ, ಪಾರ್ಸಲ್‌ಗಳ ಬಗ್ಗೆ, ಸಂಶಯಾಸ್ಪದ ಕೋರಿಯರ್, ಪೋಸ್ಟ್‌ಗಳ ಬಗ್ಗೆ ಮತ್ತು ಅತಿ ಹೆಚ್ಚು ಪೋಸ್ಟ್, ಪಾರ್ಸಲ್ ಬರುವ ವ್ಯಕ್ತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಪರಿಶೀಲಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಧಾರವಾಡ ಗ್ರಾಮೀಣ ಜಿಲ್ಲೆಯಲ್ಲಿ ಮಾದಕವಸ್ತು, ಕಳ್ಳಬಟ್ಟಿ ಬಗ್ಗೆ ಎಚ್ಚರಿಕೆ ವಹಿಸಿ, ಅಂತಹ ಪ್ರಕರಣ ತಿಳಿದು ಬಂದಲ್ಲಿ ತಕ್ಷಣ ಕ್ರಮಕೈಗೊಳ್ಳಲಾಗುತ್ತಿದೆ. ಅವಳಿನಗರ ಹೊರತುಪಡಿಸಿ ಜಿಲ್ಲೆಯ ಎಲ್ಲ ನಗರ ಹಾಗೂ ದೊಡ್ಡ ಗ್ರಾಮಗಳಲ್ಲಿ, ಎಲ್ಲ ಹಂತದ ಕಾಲೇಜುಗಳಲ್ಲಿ ಡ್ರಗ್ಸ್ ಕುರಿತು ವಿವಿಧ ರೀತಿ ತಿಳಿವಳಿಕೆ ಕಾರ್ಯಕ್ರಮಗಳನ್ನು ಜಿಲ್ಲಾಡಳಿತದ ಸಮನ್ವಯದಲ್ಲಿ ಆಯೋಜಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಡಿವೈಎಸ್‌ಪಿ ಶಿವಾನಂದ ಕಟಗಿ, ಡಿಡಿಪಿಐ ಎಸ್.ಎಸ್. ಕೆಳದಿಮಠ, ಡಾ. ರೋಶನ್ ಆರ್., ದೀಪಕ ಎಸ್, ಎಸಿಪಿ ಡಾ. ಶಿವರಾಜ ಕೊಕಟಭಾವಿ ಮತ್ತಿತರರು ಇದ್ದರು.