ತುಮಕೂರಿಗೆ ಬಂತು ನಶೆ ಮುಕ್ತ ಭಾರತ ಅಭಿಯಾನ

| Published : Aug 31 2025, 01:08 AM IST

ತುಮಕೂರಿಗೆ ಬಂತು ನಶೆ ಮುಕ್ತ ಭಾರತ ಅಭಿಯಾನ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ರಾಜ್ಯ ಸರ್ಕಾರ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ಎನ್.ಎಸ್.ಎಸ್. ಕೋಶ, ಎನ್.ಎ.ಸಿ.ಸಿ., ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ರಾಜ್ಯ ಪೊಲೀಸ್ ಇಲಾಖೆ ಹಾಗೂ ವಿವಿಧ ಇಲಾಖೆಗಳಿಂದ ನಶೆ ಮುಕ್ತ ಭಾರತ ಅಭಿಯಾನದ ಅಂಗವಾಗಿ ಬಂಡೀಪುರದಿಂದ ಬೀದರ್‌ವರೆಗೆ ಹಮ್ಮಿಕೊಂಡಿರುವ ಬೈಕ್ ರ್ಯಾಲಿ ನಗರಕ್ಕೆ ಆಗಮಿಸಿತು.

ಕನ್ನಡಪ್ರಭ ವಾರ್ತೆ, ತುಮಕೂರು ಕರ್ನಾಟಕ ರಾಜ್ಯ ಸರ್ಕಾರ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ಎನ್.ಎಸ್.ಎಸ್. ಕೋಶ, ಎನ್.ಎ.ಸಿ.ಸಿ., ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ರಾಜ್ಯ ಪೊಲೀಸ್ ಇಲಾಖೆ ಹಾಗೂ ವಿವಿಧ ಇಲಾಖೆಗಳಿಂದ ನಶೆ ಮುಕ್ತ ಭಾರತ ಅಭಿಯಾನದ ಅಂಗವಾಗಿ ಬಂಡೀಪುರದಿಂದ ಬೀದರ್‌ವರೆಗೆ ಹಮ್ಮಿಕೊಂಡಿರುವ ಬೈಕ್ ರ್ಯಾಲಿ ನಗರಕ್ಕೆ ಆಗಮಿಸಿತು. ನಶೆ ಮುಕ್ತ ಭಾರತ ಅಭಿಯಾನದ ರ್ಯಾಲಿಯಲ್ಲಿ ಸುಮಾರು 25 ಜನ ಪಾಲ್ಗೊಂಡಿದ್ದರು. ಈ ಅಭಿಯಾನದ ಅಂಗವಾಗಿ ನಗರದ ವಿದ್ಯೋದಯ ಕಾನೂನು ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿದ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ಮಾತನಾಡಿ, ದೇಶದಲ್ಲಿ ಶೇ. 20 ರಷ್ಟು ಯುವ ಸಮೂಹ ಮಾದಕ ವಸ್ತು ವ್ಯಸನಕ್ಕೆ ಒಳಗಾಗಿದ್ದಾರೆ. ಮಾದಕ ವಸ್ತುಗಳು ಸಮಾಜದ ಎಲ್ಲಾ ರಂಗದಲ್ಲಿಯೂ ಅದರ ಪರಿಣಾಮವನ್ನು ಬೀರುತ್ತಿದೆ. ಪ್ರಸ್ತುತ ದೇಶದಲ್ಲಿ 70 ಲಕ್ಷ ಯುವ ಸಮೂಹ ಮಾದಕ ವಸ್ತುಗಳಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಕುರಿತು ಶಾಲಾ ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವ ಮೂಲಕ ಮಾದಕ ವಸ್ತುಗಳ ಜಾಲಕ್ಕೆ ಸಿಲುಕದೆ ಸಮಾಜಕ್ಕೆ ಉತ್ತಮ ಪ್ರಜೆಗಳಾಗಿ ರೂಪಿಸಲು ಜಾಗೃತಿ ಅಭಿಯಾನವನ್ನು ನಡೆಸಬೇಕಾಗಿದೆ ಎಂದರು. ಮಾದಕ ವಸ್ತುಗಳ ಸೇವನೆಯಿಂದ ದೇಶದ ಯುವಸಮೂಹ ದೈಹಿಕ ಸಾಮರ್ಥ್ಯ ಮತ್ತು ಮಾನಸಿಕ ಸಾಮರ್ಥ್ಯ ಕುಂಠಿತಗೊಳ್ಳುವ ಪರಿಣಾಮವಾಗಿ ದೇಶದ ಬೆಳವಣಿಗೆಗೆ ಮಾರಕವಾಗಿದೆ. ಆದ್ದರಿಂದ ಯುವಕರು ಮಾದಕ ವಸ್ತುಗಳ ಚಟಕ್ಕೆ ಒಳಗಾಗದೆ ಕುಟುಂಬ, ಸಮಾಜ, ದೇಶದ ಬೆಳವಣಿಗೆಗೆ ಕಷ್ಟಪಟ್ಟು ದುಡಿಯಬೇಕಾಗಿದೆ ಎಂದು ಅವರು ಹೇಳಿದರು. ರಾಜ್ಯ ಎನ್.ಎಸ್.ಎಸ್. ಅಧಿಕಾರಿ ಪ್ರತಾಪ್‌ಲಿಂಗಯ್ಯ ಅವರು ವಿದ್ಯಾರ್ಥಿಗಳಿಗೆ ಮಾದಕ ವ್ಯಸನ ಮುಕ್ತ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯೋದಯ ಫೌಂಡೇಷನ್ ಟ್ರಸ್ಟ್ ಸಿಇಒ ಪ್ರೊ.ಕೆ.ಚಂದ್ರಣ್ಣ ವಹಿಸಿದ್ದರು. ಆಡಳಿತ ಮತ್ತು ಶೈಕ್ಷಣಿಕ ಅಧಿಕಾರಿಗಳು ಎಚ್.ಎಸ್. ರಾಜು, ಶ್ರೀ ವಿದ್ಯೋದಯ ಫೌಂಡೇಷನ್ ಟ್ರಸ್ಟ್, ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಶಮಾಸೈಯದಿ, ಡಾ. ನಾಗಣ್ಣ ಮತ್ತಿತರರು ಉಪಸ್ಥಿತರಿದ್ದರು. ಎನ್.ಎಸ್.ಎಸ್. ಸ್ವಯಂ ಸೇವಕರು ಮಾದಕ ವ್ಯಸನದ ಜಾಗೃತಿಯ ಕುರಿತು ಕಿರು ನಾಟಕವನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಎನ್.ಎಸ್.ಎಸ್. ಕಾರ್ಯಕ್ರಮದ ಅಧಿಕಾರಿಗಳು ಹಾಗೂ ಎನ್.ಎಸ್.ಎಸ್. ಸಮಿತಿಯ ಸದಸ್ಯರು ಬೋಧಕ ಮತ್ತು ಬೋಧಕೇತರ ಹಾಗೂ ಎನ್.ಎಸ್.ಎಸ್. ಸ್ವಯಂ ಸೇವಕರು ಭಾಗವಹಿಸಿದ್ದರು.