ಮಾದಕ ದ್ರವ್ಯದ ಹಾವಳಿ ತಡೆಯಲು ‘ನಶಾ ಮುಕ್ತ ಭಾರತ’ ಕಾರ್ಯಕ್ರಮ ನಿರಂತರವಾಗಿ ಆಯೋಜಿಸಿ, ಯುವ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಹಾಗೂ ಡೀನ್ ಡಾ.ಎ.ಜೆ.ಲೋಕೇಶ್ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಮಾದಕ ದ್ರವ್ಯದ ಹಾವಳಿ ತಡೆಯಲು ‘ನಶಾ ಮುಕ್ತ ಭಾರತ’ ಕಾರ್ಯಕ್ರಮ ನಿರಂತರವಾಗಿ ಆಯೋಜಿಸಿ, ಯುವ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಹಾಗೂ ಡೀನ್ ಡಾ.ಎ.ಜೆ.ಲೋಕೇಶ್ ಅಭಿಪ್ರಾಯಪಟ್ಟರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧಕ ಆಸ್ಪತ್ರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಕೊಡಗು ಶಾಖೆ, ಪ್ರಾಜೆಕ್ಟ್ ಸಮರ್ಥ್-ನಯರಾ ಎನರ್ಜಿ ಲಿಮಿಟೆಡ್‌ನ ಸಿಎಸ್‌ಆರ್ ಉಪಕ್ರಮ ಹಾಗೂ ಸಮುದಾಯ ಸಹಭಾಗಿತ್ವದಲ್ಲಿ ನಗರದ ಜಿಲ್ಲಾ ಆಸ್ಪತ್ರೆಯ ಬೋಧನಾ ಕೊಠಡಿಯಲ್ಲಿ ಗುರುವಾರ ನಡೆದ ವಿಶ್ವ ಬೆನ್ನುಹುರಿ ಗಾಯ ದಿನಾಚರಣೆ ಮತ್ತು ನಶಾ ಮುಕ್ತ ಭಾರತ ಉದ್ಘಾಟಿಸಿ ಅವರು ಮಾತನಾಡಿದರು.ವಿದ್ಯಾರ್ಥಿಗಳು ಮಾದಕ ದ್ರವ್ಯಕ್ಕೆ ದಾಸರಾಗಲು ಕಾರಣಗಳು ಮತ್ತು ಹಿರಿಯರು ವ್ಯಸನಕ್ಕೆ ಒಳಗಾಗಲು ಕಾರಣಗಳು ವಿಭಿನ್ನವಾಗಿರುತ್ತವೆ. ಆದ್ದರಿಂದ ಕಾಲೇಜುಗಳು, ಪ್ರಾಥಮಿಕ ಶಿಕ್ಷಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ವಿವಿಧ ಎನ್‌ಜಿಒಗಳ ಸಹಕಾರದೊಂದಿಗೆ ಮತ್ತಷ್ಟು ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಡಿ.ಎಸ್.ನಂಜುಂಡಯ್ಯ ಮಾತನಾಡಿ, ಬೆನ್ನುಹುರಿಯು ಮಾನವ ಶರೀರದ ಪ್ರಮುಖ ಅಂಗವಾಗಿದ್ದು, ದೇಹದ ವಿವಿಧ ಚಲನವಲನಗಳು ಹಾಗೂ ಕಾರ್ಯಚಟುವಟಿಕೆಗಳಿಗೆ ಬೆನ್ನುಹುರಿ ಪ್ರಮುಖ ಪಾತ್ರ ವಹಿಸುತ್ತದೆ. ಮೂಳೆಗಳ ಒಳಭಾಗದಲ್ಲಿರುವ ಬೆನ್ನುಹುರಿಯನ್ನು ಸಂರಕ್ಷಿಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ತಿಳಿಸಿದರು.ವೈದ್ಯಕೀಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಅತೀಶ್ ಮಾತನಾಡಿ, ನಶಾ ಮುಕ್ತ ಭಾರತ ಅಭಿಯಾನದ ಜಾಗೃತಿ ಮೂಡಿಸುವಲ್ಲಿ ವೈದ್ಯರು, ತಜ್ಞರು, ಪ್ರಾಧ್ಯಾಪಕರು, ನರ್ಸಿಂಗ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಜವಾಬ್ದಾರಿ ಮಹತ್ವದ್ದಾಗಿದೆ ಎಂದು ಹೇಳಿದರು.ಮನೋತಜ್ಞರಾದ ಡಾ.ರೂಪೇಶ್ ಮಾತನಾಡಿ, ನಶಾ ಮುಕ್ತ ಭಾರತ ಅಭಿಯಾನವು ನಿರಂತರವಾಗಿ ನಡೆಯುವ ಕಾರ್ಯಕ್ರಮ ಎಂದು ತಿಳಿಸಿದರು.ನಶಾ ಮುಕ್ತ ಭಾರತದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಂದ ಸಹಿ ಸಂಗ್ರಹ ಅಭಿಯಾನ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ವಿಮಲ ಮಾತನಾಡಿ, ಅಪಘಾತ, ಗಾಯ ಸೇರಿದಂತೆ ಹಲವು ಕಾರಣಗಳಿಂದ ಬೆನ್ನುಹುರಿಗೆ ಹಾನಿಯಾದ ಸಂದರ್ಭದಲ್ಲಿ ವ್ಯಕ್ತಿಗಳು ದೈಹಿಕವಾಗಿ ಮಾತ್ರವಲ್ಲದೆ, ಸಾಮಾಜಿಕ ಹಾಗೂ ಆರ್ಥಿಕವಾಗಿಯೂ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾರ್ಯಕ್ರಮದ ಯೋಜನಾ ನಿರ್ದೇಶಕ ಕೆ.ಆರ್.ಶಂಕರ್ ಅವರು, ಪ್ರಸ್ತುತ ದಿನದಲ್ಲಿ ದೇಶ ನಶಾಮುಕ್ತಗೊಂಡರೆ ಬೆನ್ನುಹುರಿ ಸಮಸ್ಯೆಗಳು ಕಡಿಮೆಯಾಗುತ್ತದೆ. ಬೆನ್ನುಹುರಿ ಸಮಸ್ಯೆಯನ್ನು ತಡೆಯಲು ಜಾಗೃತಿ ಅಗತ್ಯ ಎಂದರು.ಬೆನ್ನುಹುರಿ ಸಮಸ್ಯೆ ಎದುರಿಸಿ, ಚೇತರಿಸಿಕೊಂಡಿರುವ ಮಾದಾಪುರದ ಸೈಫುದ್ದೀನ್ ಅನಿಸಿಕೆ ವ್ಯಕ್ತಪಡಿಸಿದರು. ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ.ಸನತ್ ಕುಮಾರ್, ಬಿಎಸ್‌ಸಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಮಂಜುಳಾ, ಆರೋಗ್ಯ ಇಲಾಖೆಯ ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸುನೀತಾ ಪ್ರಾರ್ಥಿಸಿದರು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಚ್.ಕೆ.ಶಾಂತಿ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.