ಸಾರಾಂಶ
- ಮಾದಕ ವಸ್ತುಗಳ ಸೇವಿಸಿ ಕೊಲೆ, ದರೋಡೆ, ಜನರಿಗೆ ತೊಂದರೆ: ಜಿಲ್ಲಾಡಳಿತಕ್ಕೆ ಮುಸ್ಲಿಂ ಸಮಾಜ ದೂರು - - -
ಕನ್ನಡಪ್ರಭ ವಾರ್ತೆ ದಾವಣಗೆರೆ
ಮಾದಕ ವಸ್ತುಗಳನ್ನು ಬಳಸಿ ಅಪ್ರಾಪ್ತರು, ಯುವಕರು ಕೊಲೆ, ದರೋಡೆ ಮಾಡುವುದು, ಜನರಿಗೆ ತೊಂದರೆ ನೀಡುವುದನ್ನು ಮಾಡುತ್ತಿದ್ದಾರೆ. ಅಂತಹ ಮಾದಕ ವಸ್ತು ಸಾಗಾಟಗಾರರು, ಮಾರಾಟಗಾರರು, ಬಳಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಗುರುವಾರ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದ ತಂಜೀಮ್ ಉಲ್ ಮುಸ್ಲಿಮೀನ್ ಸಮಿತಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಗೆ ಒತ್ತಾಯಿಸಿತು.ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಅವರನ್ನು ನಲ್ಲೂರು ಗ್ರಾಮದ ತಂಜೀಮ್ ಉಲ್ ಮುಸ್ಲಿಮೀನ್ ಸಮಿತಿ ಪದಾಧಿಕಾರಿಗಳು, ಸಮಾಜದ ಮುಖಂಡರು ಭೇಟಿಯಾಗಿ ಪರಿಸ್ಥಿತಿ ವಿವರಿಸಿದರು. ಮಾದಕ ವಸ್ತುಗಳ ಹಾವಳಿ, ಅಪಾಯಗಳ ತಡೆಗೆ ಮನವಿ ಅರ್ಪಿಸಿದರು.
ಸಮಿತಿ ಕಾರ್ಯದರ್ಶಿ ಅಫ್ರೋಜ್ ಬೇಗ್ ಮಾತನಾಡಿ, ಚನ್ನಗಿರಿ ಪಟ್ಟಣ ಹಾಗೂ ನಲ್ಲೂರು ಗ್ರಾಮಗಳ ಭಾಗದಲ್ಲಿ ದಿನದಿನಕ್ಕೂ ಮಾದಕ ವ್ಯಸನಿಗಳ ಹಾವಳಿ ಹೆಚ್ಚುತ್ತಿದೆ. ಅಪ್ರಾಪ್ತರು, ಯುವಕರು ಮಾದಕ ವಸ್ತುಗಳನ್ನು ಬಳಸಿ, ಕೊಲೆ, ದರೋಡೆ, ಸುಲಿಗೆ, ಜನಸಾಮಾನ್ಯರಿಗೆ ತುಂಬಾ ತೊಂದರೆ ನೀಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.ಏ.2ರಂದು ನಲ್ಲೂರಿನಲ್ಲಿ ಮಾದಕ ವಸ್ತುಗಳನ್ನು ಉಪಯೋಗಿಸಿ, ಅಮಾಯಕ ಯುವಕ ಮೊಹಮ್ಮದ್ ಜಾವಿದ್ ಎಂಬಾತನನ್ನು ಕೊಲೆ ಮಾಡಲಾಗಿದೆ. ಮೊಹಮ್ಮದ್ ಜಾವಿದ್ ಹತ್ಯೆಗೈದ ಆರೋಪಿಗಳು ಪೊಲೀಸರಿಗೆ ಶರಣಾಗಿದ್ದಾರೆ. ಮಾದಕ ವಸ್ತುಗಳನ್ನು ಸೇವಿಸಿ, ಕೊಲೆ ಮಾಡಿರುವುದಾಗಿ ಪೊಲೀಸರ ಸಮಕ್ಷಮ ಒಪ್ಪಿಕೊಂಡಿದ್ದಾರೆ. ಇಂತಹ ಘಟನೆಯಿಂದಾಗಿ ಗ್ರಾಮಸ್ಥರು ತೀವ್ರ ಭಯದಲ್ಲೇ ದಿನ ಕಳೆಯುತ್ತಿದ್ದಾರೆ ಎಂದು ದೂರಿದರು.
ತಾಲೂಕಿನಲ್ಲಿ ಮಾದಕ ವಸ್ತುಗಳನ್ನು ಸೇವಿಸಿ, ಮೈಮೇಲೆ ಪ್ರಜ್ಞೆ ಇಲ್ಲದವರಂತೆ ಅಪರಾಧ ಕೃತ್ಯಗಳನ್ನು ಎಸಗುವ ದುಷ್ಕರ್ಮಿಗಳನ್ನು ಮಟ್ಟ ಹಾಕಬೇಕು. ದಿನದಿನಕ್ಕೂ ನಲ್ಲೂರು ಗ್ರಾಮ, ಚನ್ನಗಿರಿ ತಾಲೂಕಿನಲ್ಲಿ ಮತ್ತು ಬರುವ ಪದಾರ್ಥಗಳು, ಮಾದಕ ವಸ್ತುಗಳನ್ನು ಬಳಸಿ, ನಶೆಗೆ ವಿದ್ಯಾರ್ಥಿ, ಯುವಜನರು, ಅಪ್ರಾಪ್ತರು ಬಲಿಯಾಗಿ, ಬದುಕು, ಆರೋಗ್ಯ, ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಸಮಿತಿ ಪದಾಧಿಕಾರಿಗಳು, ಮುಸ್ಲಿಂ ಸಮಾಜದ ಮುಖಂಡರಾದ ಖಾಜಿ ತಬ್ರೇಜ್, ವಸೀಂ ಅಹಮ್ಮದ್, ರಹಮತ್ತುಲ್ಲಾ, ಅಸ್ಲಂ ಶಾಮಿಯಾನ, ಜಬೀವುಲ್ಲಾ, ಫಯಾಜ್ ಅಹಮ್ಮದ್, ನಲ್ಲೂರು ಗ್ರಾಮಸ್ಥರು, ವಿದ್ಯಾರ್ಥಿಗಳು, ಯುವಜನರು ಇದ್ದರು.
- - - -3ಕೆಡಿವಿಜಿ3.ಜೆಪಿಜಿ :ಚನ್ನಗಿರಿ ತಾಲೂಕಿನಲ್ಲಿ ಮಾದಕ ವಸ್ತುಗಳ ಹಾವಳಿಗೆ ಕಡಿವಾಣ ಹಾಕಲು ಒತ್ತಾಯಿಸಿ ನಲ್ಲೂರು ಗ್ರಾಮದ ತಂಜೀಮ್ ಉಲ್ ಮುಸ್ಲಿಮೀನ್ ಸಮಿತಿಯಿಂದ ಗುರುವಾರ ದಾವಣಗೆರೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರಿಗೆ ಮನವಿ ಅರ್ಪಿಸಿತು.