ಸಾರಾಂಶ
ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆಯ ಆಪ್ತ ಸಹಾಯಕ, ಕಲಬುರ್ಗಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ ಕಣ್ಣಿ ಮಾದಕ ದ್ರವ್ಯ ಕಳ್ಳ ಸಾಗಣೆಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾದ ಹಿನ್ನೆಲೆ, ಡ್ರಗ್ಸ್ ದಂಧೆ ನೇರವಾಗಿ ಸಚಿವರ ಆಪ್ತ ವಲಯದಲ್ಲೇ ನಡೆಯುತ್ತಿದೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಶಾಂತಗೌಡ ಪಾಟೀಲ ಗಂಭೀರ ಆರೋಪ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆಯ ಆಪ್ತ ಸಹಾಯಕ, ಕಲಬುರ್ಗಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ ಕಣ್ಣಿ ಮಾದಕ ದ್ರವ್ಯ ಕಳ್ಳ ಸಾಗಣೆಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾದ ಹಿನ್ನೆಲೆ, ಡ್ರಗ್ಸ್ ದಂಧೆ ನೇರವಾಗಿ ಸಚಿವರ ಆಪ್ತ ವಲಯದಲ್ಲೇ ನಡೆಯುತ್ತಿದೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಶಾಂತಗೌಡ ಪಾಟೀಲ ಗಂಭೀರ ಆರೋಪ ಮಾಡಿದ್ದಾರೆ.ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗರಾಜ ಕಣ್ಣಿ ಪ್ರಿಯಾಂಕ್ ಖರ್ಗೆಯ ನಿಕಟವರ್ತಿ. ಇವರು ಈಗ ಡ್ರಗ್ಸ್ ಕಳ್ಳಸಾಗಣೆಗೆ ಸಂಬಂಧಪಟ್ಟಂತೆ ಪೊಲೀಸ್ ಬಂಧನದಲ್ಲಿದ್ದಾರೆ. ಇದು ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಹೇಗೆ ಆಳವಾಗಿ ರೂಢಿಸಿಕೊಂಡಿದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ ಎಂದರು.
ಸಚಿವರು, ಯುವಕರು ಮಾದಕ ದ್ರವ್ಯದಿಂದ ದೂರವಿರಲಿ ಎಂದು ಜಾಗೃತಿ ಕಾರ್ಯಕ್ರಮ ನಡೆಸುತ್ತಾರೆ. ಆದರೆ ಅವರ ಆಪ್ತರು ಈ ಮಾರಕ ದಂಧೆಯಲ್ಲಿ ತೊಡಗಿರುವುದು ದುರಂತ. ಇದು ಕೇವಲ ವ್ಯಕ್ತಿಗತ ತಪ್ಪು ಅಲ್ಲ, ಸರ್ಕಾರದ ನೈತಿಕತೆ, ನಿಷ್ಠೆ ಹಾಗೂ ಕಣ್ಗಾವಲು ವ್ಯವಸ್ಥೆಯ ವೈಫಲ್ಯವನ್ನೂ ತೋರಿಸುತ್ತದೆ ಎಂದವರು ಕಿಡಿಕಾರಿದರು.ಬಾದಾಮಿ ತಾಲೂಕಿನಲ್ಲೂ ಡ್ರಗ್ಸ್ ವ್ಯಾಪಕ: ಜಿಲ್ಲೆಯ ಬಾದಾಮಿ ತಾಲೂಕಿನಲ್ಲೂ ಡ್ರಗ್ಸ್ ಬಹಿರಂಗವಾಗಿ ಮಾರಾಟವಾಗುತ್ತಿದೆ. ಚಿಕ್ಕ ಮಕ್ಕಳು ಕೂಡ ಇದಕ್ಕೆ ಬಲಿಯಾಗುತ್ತಿದ್ದಾರೆ. ನಾಯಕರ ಕೃಪೆಯಿಂದ ಈ ದಂಧೆ ನಡೆಯುತ್ತಿದೆ ಎಂದು ಜನರಲ್ಲಿ ಶಂಕೆ ಮೂಡುತ್ತಿದೆ ಎಂದರು.
ಕಪೋ ಕಲ್ಪಿತ ಹೇಳಿಕೆ ನೀಡಬೇಡಿ: ಶಾಸಕ ವಿಜಯಾನಂದ ಕಾಶಪ್ಪನವರ ಅವರು ಕಾಂಗ್ರೆಸ್ ನ 55 ಶಾಸಕರಿಗೆ ಬಿಜೆಪಿ ಸಂಪರ್ಕಿಸಿದ್ದಾರೆ ಎಂದು ಹೇಳಿರುವುದು ಸರಿಯಲ್ಲ. ಅವರನ್ನೇ ಪ್ರಶ್ನಿಸಿ, ನಿಮ್ಮನ್ನು ಯಾರು ಸಂಪರ್ಕಿಸಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕು. ಸುಮ್ಮನೆ ಜನರನ್ನು ಗೊಂದಲಕ್ಕೆ ದೂಡಬೇಡಿ ಎಂದು ಎಚ್ಚರಿಸಿದರು.ನರೇಗಾ ವೇತನ ವಿಳಂಬ: ನರೇಗಾ ಯೋಜನೆಯಡಿ ಉದ್ಯೋಗ ನೀಡಿದರೂ ಕಳೆದ ಏಳು ತಿಂಗಳಿಂದ ನೌಕರರಿಗೆ ವೇತನ ಪಾವತಿ ಆಗಿಲ್ಲ. ವಿಶೇಷವಾಗಿ ಕಾಶಪ್ಪನವರ ಕ್ಷೇತ್ರದ ಗಂಜಿಹಾಳ ಗ್ರಾಮದಲ್ಲಿ ನರೇಗಾದಲ್ಲಿ ಅಕ್ರಮಗಳಾಗಿವೆ. ಇದರ ಬಗ್ಗೆ ಶಾಸಕರು ಮಾತನಾಡಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ವಕ್ತಾರ ಸತ್ಯನಾರಾಯಣ ಹೇಮಾದ್ರಿ, ಪ್ರದಾನ ಕಾರ್ಯದರ್ಶಿ ಮಲ್ಲಯ್ಯ ಮೂಗನೂರ ಮಠ, ಮುತ್ತು ಉಳ್ಳಾಗಡ್ಡಿ, ಮಾಧ್ಯಮ ಸಂಚಾಲಕ ಶಿವಾನಂದ ಸುರಪುರ ಇದ್ದರು.