ಇ-ಫಾರ್ಮಸಿಗಳ ಮೇಲೆ ಸರ್ಕಾರದ ನಿಯಂತ್ರಣವಿಲ್ಲ. ನಾವು ಯಾರಿಗೆ ಎಷ್ಟು ಔಷಧ ಮಾರಾಟ ಮಾಡಿದ್ದೇವೆ ಎಂಬ ಮಾಹಿತಿಯನ್ನು ಸಂಬಂಧಿಸಿದ ಇಲಾಖೆಗೆ ನೀಡುತ್ತೇವೆ. ಆದರೆ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಔಷಧ ಮಾರಾಟದ ಯಾವುದೇ ಮಾಹಿತಿಯನ್ನು ನೀಡುವುದಿಲ್ಲ. ಕಾರಣ ಸಮಾಜದ ಮೇಲೆ ಅಡ್ಡಪರಿಣಾಮ ಉಂಟಾಗುತ್ತಿದೆ ಎಂದು ಆರೋಪಿಸಿದರು.
ಕನ್ನಡಪ್ರಭ ವಾರ್ತೆ ರಾಮನಗರ
ಆನ್ ಲೈನ್ ಮೂಲಕ ಔಷಧ ವ್ಯಾಪಾರಕ್ಕೆ ಸರ್ಕಾರ ನೀಡಿರುವ ಅನುಮತಿಯನ್ನು ಹಿಂಪಡೆಯಬೇಕು. ಕಾರ್ಪೊರೇಟ್ ವಲಯದ ಔಷಧಿ ಮಳಿಗೆಗಳು ಡಿಸ್ಕೌಂಟ್ ವ್ಯಾಪಾರವನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿಔಷಧಿ ವ್ಯಾಪಾರಿಗಳು ಬುಧವಾರ ಔಷಧಿ ಅಂಗಡಿಗಳನ್ನು ಅರ್ಧ ದಿನ ಬಂದ್ ಮಾಡಿ ಪ್ರತಿಭಟನೆ ವ್ಯಕ್ತಪಡಿಸಿದರು.
ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘ ಮತ್ತು ಕರ್ನಾಟಕ ಔಷಧ ವ್ಯಾಪಾರಿಗಳ ಸಂಘ ಜಂಟಿಯಾಗಿ ಕರೆ ನೀಡಿದ್ದ ಒಂದು ದಿನದ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದ್ದ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘ ಅರ್ಧ ದಿನ ಜಿಲ್ಲೆಯಲ್ಲಿನ ಎಲ್ಲ ಔಷಧಿ ಅಂಗಡಿಗಳನ್ನು ಬಂದ್ ಮಾಡಲು ನಿರ್ಧರಿಸಿತ್ತು.ಕನಕಪುರ ತಾಲೂಕು ಹೊರತುಪಡಿಸಿ ಜಿಲ್ಲಾ ಕೇಂದ್ರ ರಾಮನಗರ, ಚನ್ನಪಟ್ಟಣ, ಹಾರೋಹಳ್ಳಿ ಹಾಗೂ ಮಾಗಡಿ ತಾಲೂಕುಗಳಲ್ಲಿ ಔಷಧಿ ವ್ಯಾಪಾರಿಗಳು ಔಷಧಿ ಅಂಗಡಿಗಳನ್ನು ಬೆಳಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆವರೆಗೆ ಅರ್ಧ ದಿನ ಬಂದ್ ಮಾಡಿದ್ದರು. ಕನಕಪುರದಲ್ಲಿ ಔಷಧಿ ವ್ಯಾಪಾರಿಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರಮುಖ ಬೇಡಿಕೆಗಳೇನು?:ರಾಮನಗರದಲ್ಲಿ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಚಂದ್ರಯ್ಯ ಅವರಿಗೆ ಮನವಿ ಸಲ್ಲಿಸಿ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಇ-ಫಾರ್ಮಸಿ ಕಾರ್ಯಾಚರಣೆಗೆ ಅನುಮತಿ ನೀಡುವ 2018ರ ಜಿಎಸ್‌ಆರ್ 817 (ಇ) ಅಧಿಸೂಚನೆಯನ್ನು ತಕ್ಷಣವೇ ಹಿಂಪಡೆಯಬೇಕು. ಕೋವಿಡ್-19 ಅವಧಿಯಲ್ಲಿ ಮನೆಬಾಗಿಲಿಗೆ ಔಷಧಿ ತಲುಪಿಸಲು ಅನುಮತಿ ನೀಡಿದ್ದ ಜಿಎಸ್‌ಆರ್ 220 (ಇ) ಆದೇಶವನ್ನು ರದ್ದುಗೊಳಿಸಬೇಕು. ಕಾರ್ಪೊರೇಟ್ ಸಂಸ್ಥೆಗಳ ಭಾರೀ ರಿಯಾಯಿತಿ ದರ ಸಮರಕ್ಕೆ ಬ್ರೇಕ್ ಹಾಕಿ, ಎಲ್ಲ ವ್ಯಾಪಾರಿಗಳಿಗೂ ಸಮಾನ ಮುಕ್ತ ಮಾರುಕಟ್ಟೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.ರೋಗಿಗಳ ಸುರಕ್ಷತೆ, ನಕಲಿ ಔಷಧಿಗಳ ಭೀತಿ ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ನೀಡುವ ಅತಿಯಾದ ರಿಯಾಯಿತಿಗಳಿಂದ ಸ್ಥಳೀಯ ವ್ಯಾಪಾರಿಗಳ ಅಸ್ತಿತ್ವಕ್ಕೆ ಧಕ್ಕೆಯಾಗುತ್ತಿದೆ. ಆನ್‌ಲೈನ್‌ನಲ್ಲಿ ವೈದ್ಯರ ಚೀಟಿ ಇಲ್ಲದೆ ಅಥವಾ ಒಂದೇ ಚೀಟಿ ಬಳಸಿ ಪದೇ ಪದೇ ಔಷಧ ಖರೀದಿ ಮಾಡುವುದರಿಂದ ಅಪಾಯ ಹೆಚ್ಚಿದೆ.
ಇ-ಫಾರ್ಮಸಿಗಳ ಮೇಲೆ ಸರ್ಕಾರದ ನಿಯಂತ್ರಣವಿಲ್ಲ. ನಾವು ಯಾರಿಗೆ ಎಷ್ಟು ಔಷಧ ಮಾರಾಟ ಮಾಡಿದ್ದೇವೆ ಎಂಬ ಮಾಹಿತಿಯನ್ನು ಸಂಬಂಧಿಸಿದ ಇಲಾಖೆಗೆ ನೀಡುತ್ತೇವೆ. ಆದರೆ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಔಷಧ ಮಾರಾಟದ ಯಾವುದೇ ಮಾಹಿತಿಯನ್ನು ನೀಡುವುದಿಲ್ಲ. ಕಾರಣ ಸಮಾಜದ ಮೇಲೆ ಅಡ್ಡಪರಿಣಾಮ ಉಂಟಾಗುತ್ತಿದೆ ಎಂದು ಆರೋಪಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಎಚ್. ಮಂಜುನಾಥ್, ಜಂಟಿ ಕಾರ್ಯದರ್ಶಿ ರಾಜಶೇಖರ್, ಖಜಾಂಚಿ ಆರ್.ಕೆ.ಅತೀಕ್ , ಕಾರ್ಯದರ್ಶಿ ರೂಪೇಶ್ ಕುಮಾರ್ , ನಿರ್ದೇಶಕ ಕೆ.ಜಯರಾಂ,
ಔಷಧಿ ವ್ಯಾಪಾರಿಗಳಾದ ಪುರುಷೋತ್ತಮ್, ಮನ್ಸೂರ್ , ಅಕ್ರಂ ಪಾಷ, ಸುನೀನ್, ನವೀನ್ , ರಿಜ್ವಾನ್, ಮುಜಿಬುಲ್ಲಾ ಖಾನ್, ಹಾನಂಪಾಷ, ಏಜಾಜ್ ಪಾಷ, ಗವಿರಾಜ್ , ಪ್ರದೀಪ್, ನವೀನ್ ರಾವ್, ಖಾಸಿಫ್ , ಶಂಶ್ , ತೌಸಿಫ್ ಪಾಷ, ಸಮೀನ್ ಪಾಷ, ಮುಬಾರಕ್ ,ಸಾಧಿಕ್ ಪಾಷ, ರಿಜ್ವಾನ್ ಪಾಷ , ಇಮ್ರಾನ್ ಪಾಷ ಮತ್ತಿತರರು ಹಾಜರಿದ್ದರು.