ಬೆಂಗಳೂರಿನಲ್ಲಿ ಡ್ರಗ್ಸ್ ತಯಾರಾಗುತ್ತಿದ್ದರೂ ಕರ್ನಾಟಕ ಪೊಲೀಸರು ಇದನ್ನು ಪತ್ತೆ ಹಚ್ಚಲು ವಿಫಲರಾಗಿದ್ದು, ಮಹಾರಾಷ್ಟ್ರ ಪೊಲೀಸರು ಈ ಪ್ರಕರಣ ಬಯಲಿಗೆಳೆದಿರುವುದು ರಾಜ್ಯಕ್ಕೆ ನಾಚಿಕೆಗೇಡಿನ ಸಂಗತಿ
ಕೊಪ್ಪಳ: ರಾಜ್ಯಾದ್ಯಂತ ಡ್ರಗ್ಸ್ ದಂಧೆ ಅವ್ಯಾಹತ ನಡೆಯುತ್ತಿದ್ದು, ಇದು ರಾಜ್ಯ ಸರ್ಕಾರದ ಸಂಪೂರ್ಣ ವೈಫಲ್ಯಕ್ಕೆ ಸಾಕ್ಷಿಯಾಗಿದೆ, ಗೃಹ ಸಚಿವರು ನೈತಿಕ ಹೊಣೆ ಹೊತ್ತು ಕೂಡಲೇ ರಾಜೀನಾಮೆ ನೀಡುವಂತೆ ವಿಪ ಸದಸ್ಯೆ ಹೇಮಲತಾ ನಾಯಕ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದ್ಯಾವುದನ್ನು ತಲೆಕೆಡಿಸಿಕೊಳ್ಳಲು ಗೃಹ ಸಚಿವರು ಹಾಗೂ ಸರ್ಕಾರ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಡ್ರಗ್ಸ್ ದಂಧೆ ನಡೆಯುತ್ತಿರುವುದು ಪತ್ತೆಯಾಗಿದ್ದರೂ ಸಹ ಅದನ್ನು ನಿಯಂತ್ರಣ ಮಾಡುವುದಾಗಲಿ, ಅದರ ಮೂಲ ಪತ್ತೆ ಮಾಡುವುದಾಗಲಿ ಮಾಡುತ್ತಿಲ್ಲ. ಬೇಜವಾಬ್ದಾರಿ ಹೇಳಿಕೆ ನೀಡಿ ನುಣಚಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಬೆಂಗಳೂರಿನಲ್ಲಿ ಡ್ರಗ್ಸ್ ತಯಾರಾಗುತ್ತಿದ್ದರೂ ಕರ್ನಾಟಕ ಪೊಲೀಸರು ಇದನ್ನು ಪತ್ತೆ ಹಚ್ಚಲು ವಿಫಲರಾಗಿದ್ದು, ಮಹಾರಾಷ್ಟ್ರ ಪೊಲೀಸರು ಈ ಪ್ರಕರಣ ಬಯಲಿಗೆಳೆದಿರುವುದು ರಾಜ್ಯಕ್ಕೆ ನಾಚಿಕೆಗೇಡಿನ ಸಂಗತಿ. ಇದೆಲ್ಲ ಕರ್ನಾಟಕ ಪೊಲೀಸರ ವೈಫಲ್ಯವೇ ಕಾರಣ. ಪೊಲೀಸರಿಗೆ ಇಲ್ಲಿ ನಡೆಯುತ್ತಿರುವ ಡ್ರಗ್ಸ್ ದಂಧೆ ಗೊತ್ತಿಲ್ಲವೇ? ಮಹಾರಾಷ್ಟ್ರ ಪೊಲೀಸರು ಇಲ್ಲಿಗೆ ಬಂದು ದಾಳಿ ಮಾಡಿದ್ದಾರೆ. ಇದರಲ್ಲಿ ಪೊಲೀಸರ ವೈಫಲ್ಯವೇ ಇದಕ್ಕೆ ಸಾಕ್ಷಿ ಎಂದರು.
ರಾಜ್ಯದಲ್ಲಿ ಶಾಲಾ-ಕಾಲೇಜುಗಳಲ್ಲಿಯೇ ಡ್ರಗ್ಸ್ ಲಭ್ಯವಾಗುತ್ತಿದೆ, ಕೆಲವು ಪ್ರದೇಶಗಳು ಡ್ರಗ್ಸ್ ಅಡ್ಡೆಗಳಾಗಿ ಮಾರ್ಪಟ್ಟಿವೆ. ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರನ್ನು ಈ ಬಗ್ಗೆ ಪ್ರಶ್ನೆ ಮಾಡಿದರೆ ಹೇಳುವೆ, ನೋಡುವೆ, ಕ್ರಮ ಕೈಗೊಳ್ಳುವೆ ಎಂದು ಹೇಳುತ್ತಿದ್ದಾರೆಯೇ ವಿನಃ ಯಾವುದೇ ಕ್ರಮವಾಗುತ್ತಿಲ್ಲ. ಈ ಸರ್ಕಾರ ಡ್ರಗ್ಸ್ ನಡೆದಿಲ್ಲ ಎಂದು ಸುಳ್ಳು ಹೇಳಿ ಮುಚ್ಚಿಕೊಳ್ಳುತ್ತಿದ್ದಾರೆ. ಇಂದು ಮಹಿಳೆಯರು ಮನೆಗೆ ಹೊರ ಹೋಗಲಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸರ್ಕಾರ ಲಿಕ್ಕರ್‌ನಿಂದಲೇ ಬದುಕುತ್ತಿದೆ. ಮದ್ಯ ಮಾರಾಟ ಹೆಚ್ಚಿಸಲು ಅಧಿಕಾರಿಗಳಿಗೆ ಟಾರ್ಗೆಟ್ ನೀಡಲಾಗಿದೆ. ಹೊಸ ವರ್ಷದ ವೇಳೆ ಕುಡಿದು ರಸ್ತೆಯ ಮೇಲೆ ಬೀಳುವವರನ್ನು ಮನೆಗೆ ನಾವೇ ಮನೆಗೆ ಸುರಕ್ಷಿತವಾಗಿ ಕಳಿಸುತ್ತೇವೆ ಎನ್ನುತ್ತಿದ್ದಾರೆ. ಇವರಿಗೆ ನಾಚಿಕೆ ಬರಬೇಕು. ರಾಜ್ಯದ ಜನರನ್ನು ಈ ಸರ್ಕಾರ ಯಾವ ಹಂತಕ್ಕೆ ತೆಗೆದುಕೊಂಡು ಹೋಗುತ್ತಿದೆ ಎನ್ನುವುದು ಗೊತ್ತಾಗುತ್ತದೆ ಎಂದರು.ಕೊಪ್ಪಳ ಜಿಲ್ಲೆಯಲ್ಲಿ ಅಕ್ರಮ ಕ್ಲಬ್‌ಗಳು ನಡೆಯುತ್ತಿದ್ದು, ಅಳವಂಡಿ ಸಮೀಪದ ರಘುನಾಥನಹಳ್ಳಿಯಲ್ಲಿ ಇಸ್ಪೀಟ್ ದಂಧೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಡ್ರಗ್ಸ್ ಪ್ರಕರಣಗಳನ್ನು ಮುಚ್ಚಿಡುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಬಾಹ್ಯಾ ಶಕ್ತಿಗಳು ಕೈಜೋಡಿಸಿದ್ದು, ಅವುಗಳನ್ನು ಪತ್ತೆ ಮಾಡಿ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್, ನೀಲಕಂಠಯ್ಯ ಹಿರೇಮಠ, ಮಹೇಶ ಹಾದಿಮನಿ, ಪ್ರಸಾದ ಗಾಳಿ ಇತರರು ಇದ್ದರು.