ಸಾರಾಂಶ
ಮಾದಕ ವಸ್ತು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಎರಡು ಘಟನೆಗಳಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಹೆರಾಯಿನ್ ಎಂಬ ಮಾದಕ ವಸ್ತು ಮಾರಾಟಕ್ಕೆ ತೆರಳುತ್ತಿದ್ದ ಶಿವಾಜಿ ನಗರದ ನಿವಾಸಿ ಕಾರ್ತಿಕ ಸಿದ್ದಪ್ಪ ಮಲಾಡದ (25) ಎಂಬ ಆರೋಪಿಯನ್ನು ಬಂಧಿಸಲಾಗಿದೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಮಾದಕ ವಸ್ತು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಎರಡು ಘಟನೆಗಳಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಹೆರಾಯಿನ್ ಎಂಬ ಮಾದಕ ವಸ್ತು ಮಾರಾಟಕ್ಕೆ ತೆರಳುತ್ತಿದ್ದ ಶಿವಾಜಿ ನಗರದ ನಿವಾಸಿ ಕಾರ್ತಿಕ ಸಿದ್ದಪ್ಪ ಮಲಾಡದ (25) ಎಂಬ ಆರೋಪಿಯನ್ನು ಬಂಧಿಸಲಾಗಿದೆ. ಈತ ಶಿವಬಸವ ನಗರದ ಹಾಳುಬಿದ್ದ ಕ್ವಾರ್ಟರ್ಸ್ ಹತ್ತಿರ ಹೆರಾಯಿನ್ ಮಾರಾಟ ಮಾಡಲು ತೆರಳುತ್ತಿದ್ದ. ಈ ವೇಳೆ ಆತನನ್ನು ವಿಚಾರಿಸಿ, ತಪಾಸಣೆ ನಡೆಸಿದಾಗ ಆತನ ಬಳಿ ಮಾದಕ ವಸ್ತು ಇರುವುದು ಪತ್ತೆಯಾಗಿದೆ. ಆರೋಪಿಯಿಂದ ₹ 30 ಸಾವಿರ ಮೌಲ್ಯದ 16.14 ಗ್ರಾಮ ಹೆರಾಯಿನ್ ಜಪ್ತಿ ಮಾಡಲಾಗಿದೆ. ಆರೋಪಿಗೆ ಮಾದಕ ವಸ್ತು ಮಾರಾಟ ಮಾಡಿದ್ದ ಮುಂಬೈನ ಕೋಳಿವಾಡದ ಅಮ್ಮ ಎಂಬ ಮಹಿಳೆ ವಿರುದ್ಧ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಂಜಾ ಮಾರಾಟ ಮಾಡಲು ಬರುತ್ತಿದ್ದ ವೇಳೆ ಅಲಾರವಾಡ ಸೇತುವೆ ಬಳಿ ಆರೋಪಿಯೊಬ್ಬನನ್ನು ಬಂಧಿಸಲಾಗಿದೆ. ಖಾನಾಪುರ ತಾಲೂಕಿನ ಹಿರೇಹಟ್ಟಿಹೊಳಿ ಗ್ರಾಮದ ಮಲೀಕಸಾಬ ಉರ್ಫ ಮಲಿಕಜಾನ್ ಮುಕುಬುಲಸಾಬ ಸನದಿ (26) ಬಂಧಿತ ಆರೋಪಿ. ಆತನಿಂದ ₹ 47 ಸಾವಿರ ಮೌಲ್ಯದ 1074 ಗ್ರಾಂ ಗಾಂಜಾ, ದ್ವಿಚಕ್ರ ವಾಹನ, ₹800 ನಗದು ಜಪ್ತಿ ಮಾಡಲಾಗಿದೆ. ಅಲ್ಲದೇ, ಈತನಿಗೆ ಗಾಂಜಾ ಮಾರಾಟ ಮಾಡಿದ್ದ ಹಿರೇಹಟ್ಟಿಹೊಳಿ ಗ್ರಾಮದ ನೌಶಾದ ಮೆಹಬೂಬ ಸನದಿ ಮತ್ತು ಆರೋಪಿ ವಿರುದ್ಧ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.