ಜಿಲ್ಲೆಗೆ ರೈಲಿನ ಮೂಲಕ ಡ್ರಗ್ಸ್ ಸರಬರಾಜಾಗುತ್ತಿದೆ

| Published : Oct 08 2024, 01:03 AM IST

ಸಾರಾಂಶ

ಹಾಸನ: ಜಿಲ್ಲೆಗೆ ರೈಲುಗಳ ಮೂಲಕ ಮಾದಕ ವಸ್ತುಗಳು ಸರಬರಾಜಾಗುತ್ತಿರುವ ಮಾಹಿತಿಯಿದ್ದು, ರೈಲ್ವೆ ಪೊಲೀಸರು ಏನು ಮಾಡುತ್ತಿದ್ದಾರೆ? ಕೂಡಲೇ ರೈಲ್ವೆ ಪೊಲೀಸರೊಂದಿಗೆ ಸೇರಿ ಈ ಅಕ್ರಮವನ್ನು ತಡೆಯುವಂತೆ ಸಂಸದ ಶ್ರೇಯಸ್ ಎಂ.ಪಟೇಲ್ ಅವರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದರು.

ಹಾಸನ: ಜಿಲ್ಲೆಗೆ ರೈಲುಗಳ ಮೂಲಕ ಮಾದಕ ವಸ್ತುಗಳು ಸರಬರಾಜಾಗುತ್ತಿರುವ ಮಾಹಿತಿಯಿದ್ದು, ರೈಲ್ವೆ ಪೊಲೀಸರು ಏನು ಮಾಡುತ್ತಿದ್ದಾರೆ? ಕೂಡಲೇ ರೈಲ್ವೆ ಪೊಲೀಸರೊಂದಿಗೆ ಸೇರಿ ಈ ಅಕ್ರಮವನ್ನು ತಡೆಯುವಂತೆ ಸಂಸದ ಶ್ರೇಯಸ್ ಎಂ.ಪಟೇಲ್ ಅವರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯ್ತಿ ಹೊಯ್ಸಳ ಸಭಾಂಗಣದಲ್ಲಿ ಸೋಮವಾರ ನಡೆದ ತಮ್ಮ ಅಧ್ಯಕ್ಷತೆಯ ಮೊದಲ ದಿಶಾ (ಮೊದಲನೇ/ಎರಡನೇ ತ್ರೈಮಾಸಿಕ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ) ಸಭೆಯ ಆರಂಭದಲ್ಲೇ ಡ್ರಗ್ಸ್‌ ಹಾವಳಿ ಬಗ್ಗೆ ಪ್ರಸ್ತಾಪಿಸಿದ ಅವರು, ರೈಲ್ವೆ ಪೊಲೀಸರ ಕಾರ್ಯವೈಖರಿಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದರು. ಕಿಂಗ್‌ಪಿನ್ ಗಳು ರೈಲುಗಳ ಮೂಲಕವೇ ಬಂದು ಹೋಗುತ್ತಿದ್ದಾರೆ. ಹಾಸನ ಜಿಲ್ಲೆಗೆ ರೈಲುಗಳ ಮೂಲಕ ಡ್ರಗ್ಸ್ ಪೂರೈಕೆಯಾಗುತ್ತಿದೆ. ಹಳ್ಳಿಹಳ್ಳಿಗಳಲ್ಲಿ ಯುವಕರಿಗೆ ಡ್ರಗ್ಸ್ ಸಿಗುತ್ತಿದೆ. ಡ್ರಗ್ಸ್ ಸೇವಿಸಿ ಯುವಕರು ಹಾಳಾಗುತ್ತಿದ್ದಾರೆ. ರೈಲ್ವೆ ಪೊಲೀಸರು ಏನು ಮಾಡುತ್ತಿದ್ದಾರೆ ಎಂದು ರೈಲ್ವೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ರೈಲ್ವೆ ಪೊಲೀಸರು, ಜಿಲ್ಲಾ ಪೊಲೀಸರ ಜತೆಗೂಡಿ ಕೆಲಸ ಮಾಡಬೇಕು. ಡ್ರಗ್ಸ್ ಹಾವಳಿಗೆ ಸಂಪೂರ್ಣ ಕಡಿವಾಣ ಹಾಕಬೇಕು. ಡ್ರಗ್ಸ್ ಪೆಡ್ಲರ್‌ಗಳನ್ನು ಮೊದಲು ಬಂಧಿಸಿ, ಯಾರ ಒತ್ತಡಕ್ಕೂ ಮಣಿಯಬೇಡಿ ಎಂದು ತಾಕೀತು ಮಾಡಿದರು.

ಅರಣ್ಯ ಇಲಾಖೆಯಿಂದ ರೈತರಿಗೆ ಯಾವ ತೊಂದರೆ ಆಗಬಾರದು. ಭೂಮಿ ಬಗ್ಗೆ ಎಲ್ಲಾ ಕ್ಲಿಯರ್‌ ಆಗಿದ್ದರೂ ಮತ್ತೆ ಸಮಸ್ಯೆ ಕೊಡಲಾಗುತ್ತಿದೆ. ಏನೇ ಸಮಸ್ಯೆ ಇದ್ದರೂ ಇಲ್ಲಿ ತಿಳಿಸಿ. ಕೃಷಿಯಲ್ಲಿ ರೈತರಿಗೆ ಯಾವ ರೀತಿ ಸೌಲಭ್ಯ ಕೊಡಲಾಗುತ್ತಿದೆ ಸೇರಿದಂತೆ ಇತರೆ ಇಲಾಖೆಗಳ ಕಾರ್ಯವೈಖರಿ ಬಗ್ಗೆ ಸಂಸದರು ಮಾಹಿತಿ ಕೇಳಿ ನಂತರ ಸಲಹೆ ಸೂಚನೆ ನೀಡಿದರು. ಆರೋಗ್ಯ ಇಲಾಖೆ ಆಸ್ಪತ್ರೆಗಳನ್ನು ಸುಸಜ್ಜಿತವಾಗಿ ಹಾಗೂ ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು, ಅಪಘಾತ ಹಾಗೂ ತುರ್ತು ಸಂಧರ್ಭದಲ್ಲಿ ರೋಗಿಗಳನ್ನು ಮೊದಲು ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಬೇಕು ರೋಗಿಗಳನ್ನು ಸರ್ಕಾರಿ ತಾಲೂಕು ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ರವಾನೆ ಮಾಡುತ್ತಿದ್ದರೆ ಅಂತವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಈ ಬಾರಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆಯಲು ಏನೇನು ಅಗತ್ಯ ಕ್ರಮಗಳ ಅಗತ್ಯವಿದೆ ಎಲ್ಲವನ್ನೂ ಮಾಡುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಮುಂದಾಗಬೇಕು, ಶಾಲಾ ಕಾಲೇಜುಗಳ ಕಟ್ಟಡ ಸುಸಜ್ಜಿತವಾಗಿ ಇಟ್ಟುಕೊಳ್ಳಬೇಕು, ಕಟ್ಟಡಗಳು ದುರಸ್ತಿಯಲ್ಲಿ ಇದ್ದರೆ ಅವುಗಳ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಶಾಲಾ ಮಕ್ಕಳಿಗೆ ಗುಣಮಟ್ಟದ ಆಹಾರ ಹಾಗೂ ಶುದ್ಧ ಕುಡಿಯುವ ನೀರನ್ನು ಒದಗಿಸಬೇಕು ಎಂದರು.

ನಿಗಮ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ಅರಣ್ಯ ಇಲಾಖೆ ಬಳಿ ಯಾವ ಅಳತೆ ಮತ್ತು ದಾಖಲೆ ಇಲ್ಲದಿದ್ದರೂ ಕೊನೆಗೆ ಒಂದು ನಕ್ಷೆ ಇಟ್ಟುಕೊಂಡು ಇದು ನಮ್ಮ ಅರಣ್ಯಕ್ಕೆ ಸೇರಿದೆ ಎಂದು ಹಿಂಸೆ ಕೊಡುತ್ತಿರಿ. ನಾನು ಕೂಡ ಕರ್ನಾಟಕದಲ್ಲಿ ವಾಸ ಮಾಡುತ್ತಿದ್ದೇನೆ. ಅಷ್ಟೊಂದು ಎಕರೆ ಭೂಮಿಯನ್ನು ಅಕ್ರಮ ಮಾಡುವಾಗ ನೀವು ಎಲ್ಲಿ ಹೋಗಿದ್ದೀರಿ? ಅವತ್ತೆ ತಕರಾರು ಹಾಕಿದ್ದರೇ ಸರಿಯಾಗಿತ್ತು. ಈಗ ಬಂದು ಬಿಟ್ಟು ಅವರಿಗೆ ಹಿಂದೆ ಕೊಡುವುದು ಬೇಡ ಎಂದರು.

ಫಸಲ್ ಭೀಮಾ ಯೋಜನೆ ಅಡಿಯಲ್ಲಿ ರೈತರ ಬೆಳೆ ವಿಮೆ ಬೆಳೆ ಕಳೆದುಕೊಂಡ ಅರ್ಹ ರೈತರಿಗೆ ತಲುಪುತ್ತಿಲ್ಲ. ಕೃಷಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬಳಿಕ ಸರ್ಕಾರಕ್ಕೆ ವರದಿ ನೀಡಬೇಕು. ಮೊಬೈಲ್‌ ಮೂಲಕ ನಮೂದು ಮಾಡುವ ಅಂಕಿ ಅಂಶದಿಂದ ನಿಜವಾದ ಫಲಾನುಭವಿಗಳಿಗೆ ಅನ್ಯಾಯವಾಗುತ್ತಿದೆ. ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಇರುವ ಶಾಲಾ ಕಾಲೇಜು ಹಾಗೂ ಹಾಸ್ಟೆಲ್‌ಗಳಲ್ಲಿ ಮಕ್ಕಳಿಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳು ಮಕ್ಕಳಿಗೆ ಸಮರ್ಪಕವಾಗಿ ಇರುವಂತೆ ನೋಡಿಕೊಳ್ಳಬೇಕು. ತೋಟಗಾರಿಗೆ ಇಲಾಖೆಯಲ್ಲಿ ರೈತರಿಗಾಗಿ ಬರುವ ಪರಿಕರಗಳನ್ನು ಸಮರ್ಪಕವಾಗಿ ಒದಗಿಸಬೇಕು, ಹೆಚ್ಚುವರಿ ಸಲಕರಣೆಗಳ ಅಗತ್ಯ ಇದ್ದರೆ ತನ್ನ ಗಮನಕ್ಕೆ ತರುವಂತೆ ಹೇಳಿದರು.

ನಿಗದಿತ ಅವಧಿ ಮುಗಿದರೂ ಹಾಸನ - ಮಂಗಳೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಇನ್ನು ಪೂರ್ಣಗೊಂಡಿಲ್ಲ, ಈಗಲೇ ಸಕಲೇಶಪುರ ಬಳಿಯ ದೊಡ್ಡತಪ್ಪಲು ಬಳಿ ಗುಡ್ಡ ಕುಸಿದು ನಡೆದ ಅನಾಹುತಗಳು ಎಲ್ಲರಿಗೂ ಗೊತ್ತಿದೆ ಆದರೂ ಇನ್ನು ಗುತ್ತಿಗೆದಾರರು ಎಚ್ಚೆತ್ತುಕೊಂಡಿಲ್ಲ ಎಂದ ಶ್ರೇಯಸ್ ಪಟೇಲ್, ಕಂಟ್ರಾಕ್ಟರ್‌ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ ಹೊಳೆನರಸೀಪುರ ತಾಲೂಕಿನ ಹಂಗರಹಳ್ಳಿ ಬಳಿ ಈಗಾಗಲೇ ನಿರ್ಮಾಣ ಹಂತದಲ್ಲಿ ಇರುವ ರೈಲ್ವೆ ಮೇಲ್ಸೇತುವೆ ಕಾಮಗಾರಿಯಿಂದ ವಾಹನ ಸವಾರರಿಗೆ ತುಂಬಾ ತೊಂದರೆ ಆಗುತ್ತಿದೆ. ಅತೀ ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದ ಅವರು, ತುರ್ತಾಗಿ ಸರ್ವೀಸ್ ರಸ್ತೆಯನ್ನು ಸರಿಪಡಿಸಿ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಡಬೇಕು ಎಂದು ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ೭೫ ಬೆಂಗಳೂರು - ಹಾಸನ - ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪ್ರಮುಖ ವಾಣಿಜ್ಯ ವಹಿವಾಟಿಗೆ ಆಧಾರವಾಗಿರುವ ಪ್ರಮುಖ ರಸ್ತೆ ಇದಾಗಿದೆ. ಅಲ್ಲದೆ ವೈದ್ಯಕೀಯ ಸೇವೆಗಳಿಗೂ ಈ ರಸ್ತೆ ಪ್ರಮುಖ ಪತ್ರ ವಹಿಸುತ್ತದೆ. ಆದುದರಿಂದ ಕೂಡಲೇ ಇದನ್ನು ಗಂಭೀರವಾಗಿ ಪರಿಗಣಿಸಿ ಕಾಮಗಾರಿ ಪೂರ್ಣಗೊಳಿಸಬೇಕು. ಇಲ್ಲವಾದರೆ ತಮ್ಮ ವಿರುದ್ಧ ಪ್ರಕರಣ ದಾಖಲು ಮಾಡುವುದಾಗಿ ಗುತ್ತಿಗೆದಾರರಿಗೆ ಎಚ್ಚರಿಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಸಿ. ಸತ್ಯಭಾಮ, ಅಪರ ಜಿಲ್ಲಾಧಿಕಾರಿ ಕೆ.ಟಿ. ಪೂರ್ಣಿಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜೀತಾ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಆರ್‌. ಪೂರ್ಣಿಮಾ, ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಪರಪ್ಪಸ್ವಾಮಿ, ಉಪ ಕಾರ್ಯದರ್ಶಿ ಚಂದ್ರಶೇಖರ್‌, ಕೃಷ್ಣಮೂರ್ತಿ ಇತರರು ಇದ್ದರು.

ಡ್ರಗ್ಸ್‌ ಸೇವನೆ ಮಾಡೋರ ಮೇಲೂ ಕೇಸ್ ಹಾಕಿ

ಡ್ರಗ್ಸ್ ಪೂರೈಸುತ್ತಿರುವ ಪೆಡ್ಲರ್‌ಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ. ಡ್ರಗ್ಸ್ ಜತೆಗೆ ಮಟ್ಕಾ ದಂಧೆ ನಡೆಯುತ್ತಿದೆ. ಹಾಸನದಲ್ಲಿ ಹೆಚ್ಚು ಡ್ರಗ್ಸ್ ಹಾಗೂ ಮಟ್ಕಾ ದಂಧೆ ನಡೆಯುತ್ತಿದೆ. ಮುಂದೆ ಇದು ರಾಜ್ಯದಲ್ಲಿ ದೊಡ್ಡ ವಿಚಾರ ಆಗಲಿದೆ. ಡ್ರಗ್ಸ್ ಮಾರಾಟ ಮಾಡೋರು ಅಷ್ಟೇ ಅಲ್ಲ ಸೇವನೆ ಮಾಡೋರ ಮೇಲೂ ಕೇಸ್ ಹಾಕಿ ಎಂದು ಹಾಸನ ಎಸ್ಪಿಗೆ ಸೂಚನೆ ಕೊಟ್ಟರು. ಮುಂದೆ ಪೊಲೀಸ್ ಇಲಾಖೆ ಹಾಗು ರೈಲ್ವೆ ಪೊಲೀಸರು ಜಂಟಿ ಸಭೆ ನಡೆಸಿ ಎಂದು ಸಲಹೆ ಕೊಡುವುದಾಗಿ ಹೇಳಿದರು.