ಜಾಲಹಳ್ಳಿಯಲ್ಲಿ ಡ್ರೋಣ್‌ ಮೂಲಕ ಗಾಂಜಾ ಪತ್ತೆ ಕಾರ್ಯಾಚರಣೆ

| Published : Feb 12 2024, 01:30 AM IST

ಸಾರಾಂಶ

ದೇವದುರ್ಗ ತಾಲೂಕಿನ ಜಾಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮಗಳಲ್ಲಿ ಡ್ರೋಣ್‌ ಕ್ಯಾಮೆರಾ ಮೂಲಕ ಗಾಂಜಾ ಬೆಳೆ ಪತ್ತೆ ಕಾರ್ಯಾಚರಣೆ ನಡೆಸಲಾಯಿತು.

ದೇವದುರ್ಗ: ತಾಲೂಕಿನ ಜಾಲಹಳ್ಳಿ ಪೊಲೀಸ್ ಠಾಣೆ ಸಬ್‌ಇನ್ಸ್‌ಪೆಕ್ಟರ್‌ ಸುಜಾತಾ ನಾಯಕ ನೇತೃತ್ವದಲ್ಲಿ ಠಾಣೆ ವ್ಯಾಪ್ತಿಯ ಮಲ್ಲಾಪುರ, ಬೋಮನಗುಂಡ, ಗಣೇಕಲ್, ಅಲ್ಕೋಡ್, ಬಿ.ಆರ್ ಗುಂಡ, ಮೂಡಲಗುಂಡ, ಹುಲಿಗುಡ್ಡ, ಸಮುದ್ರ, ಪಂದ್ಯಾನ, ಬುಂಕಲದೊಡ್ಡಿ ಗ್ರಾಮಗಳಲ್ಲಿ ರೈತರು ಬೆಳೆದ ವಿವಿಧ ಬೆಳೆಗಳ ನಡುವೆ ಡ್ರೋಣ್‌ ಮೂಲಕ ಗಾಂಜಾ ಪತ್ತೆ ಮತ್ತು ಚಿತ್ರ ಸಂಗ್ರಹ ಕಾರ್ಯ ನಡೆಯಿತು.

ಬೆಳೆಗಳ ನಡುವೆ ಗಾಂಜಾ ಸಸಿ ನಾಟಿ ಮಾಡಿರಬಹುದು ಎನ್ನುವ ಅನುಮಾನ ಇದ್ದಲ್ಲಿ ಡ್ರೋನ್ ಕ್ಯಾಮೆರಾ ಮೂಲಕ ವಿಡಿಯೊ ಹಾಗೂ ಪೋಟೊಗಳನ್ನು ಸಂಗ್ರಹ ಮಾಡಲಾಯಿತು ಎಂದು ಪಿಎಸ್ಐ ಸುಜಾತಾ ನಾಯಕ ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಅದೇಶದ ಮೇರೆಗೆ ಈ ಕೆಲಸ ಕೈಗೊಳ್ಳಲಾಗಿದೆ. ಕೆಲವರು ಪೊಲೀಸರ ಕಣ್ಣು ತಪ್ಪಿಸಿ ಕಾನೂನು ಬಾಹಿರ ಕೆಲಸಕ್ಕೆ ಕೈ ಹಾಕುತ್ತಾರೆ. ಕಳೆದ ವರ್ಷ ಇಂತಹ ನಿಷೇಧಿತ ಬೆಳೆಗಳನ್ನು ಬೆಳೆದಿದ್ದವರನ್ನು ಪತ್ತೆ ಹಚ್ಚಿ ಅವರ ಮೇಲೆ ಈಗಾಗಲೇ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಎಲ್ಲಿ ಅಕ್ರಮ ನಡೆಯುತ್ತಿದೆ, ನಡೆಯುತ್ತದೆ ಎನ್ನುವ ಬಗ್ಗೆ ನಮ್ಮ ಇಲಾಖೆಗೆ ಮಾಹಿತಿ ಇರುತ್ತದೆ. ಕೃಷಿ ಜಮೀನುಗಳಲ್ಲಿ ನಿಷೇಧಿತ ಬೆಳೆಗಳನ್ನು ಯಾವುದೇ ಕಾರಣಕ್ಕೂ ಬೆಳೆಯಬಾರದು ಎಂದು ಅವರು ತಿಳಿಸಿದರು.