ಕರ್ನಾಟಕ ಗಡಿ ಭಾಗದಿಂದ ಕೇವಲ 20 ಕಿ.ಮೀ ದೂರದಲ್ಲಿ ಕೋಳಿ ಫಾರ್ಮ್‌ ಹೆಸರಿನಲ್ಲಿ ಅಕ್ರಮವಾಗಿ ಎಂಡಿಎಂಎ (ಮೆಫೆಡ್ರೋನ್‌) ಡ್ರಗ್ಸ್‌ ತಯಾರಿಸುತ್ತಿದ್ದ ಘಟಕವನ್ನು ಮಹಾರಾಷ್ಟ್ರ ಮಾದಕ ವಸ್ತು ನಿಗ್ರಹ ಪಡೆ ಪತ್ತೆಹಚ್ಚಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕರ್ನಾಟಕ ಗಡಿ ಭಾಗದಿಂದ ಕೇವಲ 20 ಕಿ.ಮೀ ದೂರದಲ್ಲಿ ಕೋಳಿ ಫಾರ್ಮ್‌ ಹೆಸರಿನಲ್ಲಿ ಅಕ್ರಮವಾಗಿ ಎಂಡಿಎಂಎ (ಮೆಫೆಡ್ರೋನ್‌) ಡ್ರಗ್ಸ್‌ ತಯಾರಿಸುತ್ತಿದ್ದ ಘಟಕವನ್ನು ಮಹಾರಾಷ್ಟ್ರ ಮಾದಕ ವಸ್ತು ನಿಗ್ರಹ ಪಡೆ ಪತ್ತೆಹಚ್ಚಿದೆ. ಈ ವೇಳೆ ಬೆಳಗಾವಿಯ ಇಬ್ಬರು ಸೇರಿದಂತೆ 7 ಜನರನ್ನು ಬಂಧಿಸಿರುವ ಘಟನೆ ಕೊಲ್ಹಾಪುರ ಜಿಲ್ಲೆಯ ಚಂದಗಡ ತಾಲೂಕಿನ ಹಾಜಗೋಳಿ ಗ್ರಾಮದಲ್ಲಿ ಶನಿವಾರ ನಡೆದಿದ್ದು ಈಗ ಬೆಳಕಿಗೆ ಬಂದಿದೆ.

ಮೀರಾ ರೋಡ್ ನಿವಾಸಿ ಇರ್ಫಾನ್ ಸಲೀಂ ಖಾನ್‌ನ ವಿಚಾರಣೆ ವೇಳೆ ದೊರೆತ ಮಾಹಿತಿ ಆಧರಸಿ ಟಾಸ್ಕ್ ಫೋರ್ಸ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಖಾನ್‌ ಕೋಳಿ ಫಾರ್ಮ್‌ನಲ್ಲಿ ಗುಟ್ಕಾ ತಯಾರಿಸುವುದಾಗಿ ಬಾಡಿಗೆ ಪಡೆದು ಅದರಲ್ಲಿ ಡ್ರಗ್ಸ್‌ ತಯಾರಿಸುತ್ತಿದ್ದ. ಅದಕ್ಕಾಗಿ ಯಂತ್ರೋಪಕರಣಗಳು, ಪ್ರಯೋಗಾಲಯಗಳನ್ನು ಸಹ ನಿರ್ಮಿಸಿದ್ದ ಎಂಬುದು ಗೊತ್ತಾಗಿದೆ.

ದಾಳಿ ವೇಳೆ 1.13 ಕೋಟಿ ರು.ಗೂ ಅಧಿಕ ಮೌಲ್ಯದ 208 ಗ್ರಾಂ ಸಿದ್ಧಪಡಿಸಿದ ಎಂಡಿಎಂಎ, ರಾಸಾಯನಿಕ ಕಚ್ಛಾ ವಸ್ತುಗಳು, ಯಂತ್ರೋಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಲ್ಲಿ ತಯಾರಾಗುತ್ತಿದ್ದ ಡ್ರಗ್ಸ್‌ ಅನ್ನು ಮಹಾರಾಷ್ಟ್ರ, ಕರ್ನಾಟಕ, ಗೋವಾ ಸೇರಿದಂತೆ ದೇಶದ ವಿವಿಧ ಭಾಗಗಳಿಗೆ ಪೂರೈಸಲಾಗುತ್ತಿತ್ತೇ ಎಂಬುದನ್ನು ತನಿಖೆ ನಡೆಸಲಾಗುತ್ತಿದೆ.

ಬೆಳಗಾವಿ ಗಡಿಯಿಂದ ಅತ್ಯಂತ ಸಮೀಪದಲ್ಲೇ ಇಂತಹ ಅಕ್ರಮ ಡ್ರಗ್ಸ್ ತಯಾರಿಕಾ ಘಟಕ ಪತ್ತೆಯಾಗಿರುವುದು ಗಡಿಭಾಗದಲ್ಲಿ ಆತಂಕ ಮೂಡಿಸಿದೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಡ್ರಗ್ಸ್ ತಯಾರಿಕೆ ಹಾಗೂ ಪೂರೈಕೆ ಜಾಲದಲ್ಲಿ ಇನ್ನಷ್ಟು ಜನರು ಭಾಗಿಯಾಗಿರುವ ಸಾಧ್ಯತೆಯ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.