ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುನಗರದಲ್ಲಿ ಕಳೆದ ಹಲವಾರು ವರ್ಷಗಳಿಂದ ಹಲವಾರು ಕಾಲೇಜು ಕ್ಯಾಂಪಸ್ ಗಳಲ್ಲಿ ಡ್ರಗ್ಸ್ ಮತ್ತು ವಿಶೇಷವಾಗಿ ಗಾಂಜಾದಂತಹ ಮಾದಕ ದ್ರವ್ಯ ಮತ್ತು ಅಮಲು ಪದಾರ್ಥಗಳು ವ್ಯಾಪಕವಾಗುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಅಸೋಸಿಯೇಷನ್ ಫಾರ್ ಸಿವಿಲ್ ರೈಟ್ಸ್ ಪ್ರೊಟೆಕ್ಷನ್ ಇಂಡಿಯಾ (ಎಪಿಸಿಆರ್) ಜಿಲ್ಲಾಧ್ಯಕ್ಷ ತಾಜುದ್ದೀನ್ ಷರೀಫ್ ಮನವಿ ಸಲ್ಲಿಸಿದ್ದಾರೆ. ಶುಕ್ರವಾರ ಸಂಜೆ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಅವರು, ನಗರದಲ್ಲಿ ಮಾದಕ ದ್ರವ್ಯ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಹಾಗೆಯೇ ರಾಜ್ಯದ ಗ್ರಹ ಸಚಿವರ ತವರ ಜಿಲ್ಲೆಯಲ್ಲಿ ಈ ಇಂತಹ ಪರಿಸ್ಥಿತಿ ಇದೆ. ಬೇರೆ ಜಿಲ್ಲೆಯ ಗತಿ ಏನಾಗಿದೆ ಎಂಬ ಸಂಶಯ ಇದೆ. ಕ್ಯಾಂಪಸ್, ಹಾಸ್ಟೆಲ್, ಅತಿಥಿ ಗೃಹ (ಪಿಜಿ) ಮುಂತಾದ ಕಡೆಗಳಲ್ಲಿ ಪರಿಸ್ಥಿತಿ ಗಂಭೀರ ಮಟ್ಟಕ್ಕೆ ತಲುಪುತ್ತಿದೆ. ಈ ಕುರಿತು ಶೀಘ್ರವಾಗಿ ಸೂಕ್ತವಾದ ಕ್ರಮ ಕೈಗೊಳ್ಳದಿದ್ದರೆ ನಗರದ ಕ್ಯಾಂಪಸ್‌ಗಳು ಮತ್ತು ವಿದ್ಯಾರ್ಥಿ -ಯುವ ಸಮುದಾಯವು ಸಮಾಜಕ್ಕೆ ಮಾರಕವಾಗುವ ಸ್ಥಿತಿಯನ್ನು ಎದುರಿಸಬೇಕಾದೀತು ಎಂದು ಎಪಿಸಿಆರ್ ಮನವಿಯಲ್ಲಿ ಎಚ್ಚರಿಸಿದ್ದಾರೆ. ಜಿಲ್ಲೆಯಾದ್ಯಂತ ಮಾದಕ ದ್ರವ್ಯದ ದುಷ್ಪರಿಣಾಮ ಮತ್ತು ಈ ಅಪರಾಧದ ಬಗೆಗಿನ ಕಾನೂನು ಜಾಗೃತಿಯನ್ನು ಮೂಡಿಸಬೇಕಿದೆ. ಪ್ರಮುಖವಾಗಿ ಹೈಸ್ಕೂಲ್ ಹಂತದಲ್ಲಿ ಬಾಲಕರಿಗೆ ಈ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಮಕ್ಕಳಿಗೆ ನಿಂಬೆ ಹುಳಿ, ಕಚ್ಚಾ ಮ್ಯಾಂಗೋ ಮತ್ತಿತರರ ಪ್ಲೇವರ್‌ಗಳಲ್ಲಿ ಎಗ್ಗಿಲ್ಲದೆ ದೊರೆಯುತ್ತಿರುವ ಚಾಕಲೇಟ್ ರೂಪದ ಮಾದಕ ವಸ್ತುಗಳಿಗೆ ಕಡಿವಾಣ ಹಾಕುವ ಮೂಲಕ ಬೆಳೆಯುವ ಚಿಗುರುಗಳನ್ನು ರಕ್ಷಿಸಬೇಕಾಗಿದೆ ಎಂದರು.ನಗರದಲ್ಲಿ ಮತ್ತು ನಗರದ ಹೊರವಲಯದಲ್ಲಿ ಮಾದಕ ವ್ಯಸನದ ಪ್ರಭಾವ ಹೆಚ್ಚಾಗುತ್ತಿದೆಯೋ ಅಲ್ಲಿ ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಧಾರ್ಮಿಕ ಮತ್ತು ವಿದ್ಯಾರ್ಥಿ ನಾಯಕರ ಸಭೆಯನ್ನು ಆಯೋಜಿಸಿ ಪರಿಹಾರ ಕಾರ್ಯಗಳ ಕುರಿತು ಚರ್ಚಿಸಬೇಕು. ಶಾಲಾ ಕಾಲೇಜಿನ 100 ಮೀಟರ್ ಅಂತರದಲ್ಲಿ ಬೀಡಿ, ಸಿಗರೇಟು, ಗುಟ್ಕಾ ಮದ್ಯ ಮುಂತಾದವುಗಳ ನಿಷೇಧ ಕಾನೂನು ಇದ್ದರೂ ಹಲವೆಡೆ ಅದರ ಮಾರಾಟ ನಡೆಯುತ್ತಿರುವುದು ಗಮನಿಸಬಹುದಾಗಿದೆ. ಇದನ್ನು ಶೀಘ್ರವಾಗಿ ತಡೆಗಟ್ಟವಂತೆ ಮಾಡಬೇಕು ಎಂದರು.ಈ ವೇಳೆ ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಅಫ್ ಸಿವಿಲ್ ರೈಟ್ಸ್ ಇಂಡಿಯಾದ ಪದಾಧಿಕಾರಿಗಳಾದ ಅಫ್ಜಲ್ ಖಾನ್, ಹಮೀದ್ ಬೇಗ್, ಅಪ್ಸರ್ ಖಾನ್ ಮತ್ತಿತರರು ಪಾಲ್ಗೊಂಡಿದ್ದರು.