ವಶಪಡಿಸಿಕೊಳ್ಳಲಾದ ಡ್ರಗ್ಸ್ ದಾಸ್ತಾನನ್ನು ಪೊಲೀಸ್ ಆಯುಕ್ತರು ವೀಕ್ಷಿಸಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದಲ್ಲಿ ಮತ್ತೆ ಡ್ರಗ್ಸ್ ಮಾರಾಟ ಜಾಲದ ಮೇಲೆ ಗದಾ ಪ್ರಹಾರ ನಡೆಸಿರುವ ಕಸ್ಟಮ್ಸ್ ಅಧಿಕಾರಿಗಳು, ನಗರ ಪೊಲೀಸರು, ಪ್ರತ್ಯೇಕವಾಗಿ 15 ಮಂದಿ ಆರೋಪಿಗಳನ್ನು ಬಂಧಿಸಿ ಒಟ್ಟು 15.64 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.ಕಳೆದ ಮೂರು ದಿನಗಳಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತ್ಯೇಕವಾಗಿ ನಾಲ್ವರು ಬ್ಯಾಂಕಾಕ್ ಪ್ರವಾಸಿಗರನ್ನು ಸೆರೆಹಿಡಿದು 10.5 ಕೋಟಿ ರು. ಮೌಲ್ಯದ ಡ್ರಗ್ಸ್ ಅನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಹಾಗೆಯೇ ನಗರ ಪೊಲೀಸರು, ಪ್ರತ್ಯೇಕವಾಗಿ ಇಬ್ಬರು ವಿದೇಶಿ ಪ್ರಜೆಗಳು ಸೇರಿ 11 ಮಂದಿಯನ್ನು ಬಂಧಿಸಿ 5.14 ಕೋಟಿ ರು. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.
ಯಲಹಂಕ ಉಪನಗರ, ಆಡುಗೋಡಿ, ಭಾರತಿನಗರ, ಜಾಲಹಳ್ಳಿ ಹಾಗೂ ಪುಲಿಕೇಶಿ ನಗರ ಠಾಣೆಗಳ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದು, ಆರೋಪಿಗಳಿಂದ 2.07 ಕೆಜಿ ಎಂಡಿಎಂಎ, 31.396 ಕೆಜಿ ಗಾಂಜಾ, 220 ಗ್ರಾಂ ಹೈಡ್ರೋ ಗಾಂಜಾ ಹಾಗೂ 162 ಗ್ರಾಂ ಹೆರಾಯಿನ್ ಸೇರಿದಂತೆ 2.25 ಕೋಟಿ ರು. ಮೌಲ್ಯದ ಡ್ರಗ್ಸ್ ಜಪ್ತಿಯಾಗಿದೆ. ಆದರೆ ಪ್ರಸ್ತುತ ಮಾರುಕಟ್ಟೆದಲ್ಲಿ ಆ ಡ್ರಗ್ಸ್ ಮೌಲ್ಯವು 5.14 ಕೋಟಿ ಇದೆ ಎಂದು ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ. ಪಂಜಾಬ್ ಗ್ಯಾಂಗ್ ಬಳಿ 2 ಕೋಟಿ ಡ್ರಗ್ಸ್:ನಗರದಲ್ಲಿ ಡ್ರಗ್ಸ್ ದಂಧೆಗಿಳಿದಿದ್ದ ನೇಪಾಳ ಪ್ರಜೆ ಸೇರಿ ಮೂವರನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನೇಪಾಳದ ಅರ್ಜುನ್ ಜೋಶಿ, ಉತ್ತರಪ್ರದೇಶದ ಬಲ್ಜಿತ್ ಸಿಂಗ್ ಹಾಗೂ ಕೋರಮಂಗಲ ಎಲ್.ಆರ್ ನಗರದ ಸಂತೋಷ ಬಂಧಿತರಾಗಿದ್ದು, ಆರೋಪಿಗಳಿಂದ 1.08 ಕೋಟಿ ರು. ಮೌಲ್ಯದ 28 ಕೆಜಿ ಗಾಂಜಾ, 220 ಗ್ರಾಂ ಹೈಡ್ರೋ ಗಾಂಜಾ ಹಾಗೂ 162 ಗ್ರಾಂ ಹೆರಾಯಿನ್ ಜಪ್ತಿ ಮಾಡಲಾಗಿದೆ.ಪಂಜಾಬ್‌ನಿಂದ ಡ್ರಗ್ಸ್ ತಂದು ನಗರದಲ್ಲಿ ಸಿಂಗ್ ದಂಧೆ ನಡೆಸುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದು ಇನ್ಸ್‌ಪೆಕ್ಟರ್ ರವಿಕುಮಾರ್ ನೇತೃತ್ವದಲ್ಲಿ ಪಿಎಸ್ಐ ತಿಮ್ಮರಾಯ, ರಾಘವೇಂದ್ರ ತಂಡ ದಾಳಿ ನಡೆಸಿದೆ. ಪಂಜಾಬ್ ಮೂಲದ ಸಿಂಗ್ ಈ ತಂಡದ ಪ್ರಮುಖನಾಗಿದ್ದು, ತನ್ನೂರಿನಿಂದ ಕಡಿಮೆ ಬೆಲೆಗೆ ಡ್ರಗ್ಸ್ ತಂದು ನಗರದಲ್ಲಿ ಆತ ಬಿಕರಿ ಮಾಡುತ್ತಿದ್ದ. ಈ ದಂಧೆಗೆ ಹಣದಾಸೆ ತೋರಿಸಿ ಅರ್ಜುನ್‌ನನ್ನು ಆತ ಬಳಸಿಕೊಂಡಿದ್ದಾನೆ. ಇನ್ನು ಸಂತೋಷ್ ವೃತ್ತಿಪರ ಪೆಡ್ಲರ್ ಆಗಿದ್ದು, ಆತನ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣಗಳಿವೆ. ಎರಡು ವರ್ಷದ ಹಿಂದೆ ಜೈಲಿನಿಂದ ಹೊರ ಬಂದಿದ್ದ ಸಂತೋಷ್ ಚಲನವಲನದ ಮೇಲೆ ನಿಗಾ ವಹಿಸಲಾಯಿತು. ಹೀಗಿದ್ದರೂ ಪೊಲೀಸರ ಭಯವಿಲ್ಲದೆ ಆತ ಮತ್ತೆ ಡ್ರಗ್ಸ್ ದಂಧೆಗಿಳಿದಿದ್ದ. ಇತ್ತೀಚೆಗೆ ಗಾಂಜಾ ಮಾರಾಟ ಮಾಡುವ ವೇಳೆ ಸಂತೋಷ್ ಖಾಕಿ ಬಲೆಗೆ ಬಿದ್ದಿದ್ದಾನೆ.
ನೈಜೀರಿಯಾ ಪ್ರಜೆಯಿಂದ 4 ಕೋಟಿ ಡ್ರಗ್ಸ್: ಇನ್ನು ಯಲಹಂಕ ಉಪನಗರ ಪೊಲೀಸರಿಗೆ ಸೆರೆಯಾದ ನೈಜೀರಿಯಾ ಮೂಲದ ಸ್ಯಾಮುಯಲ್ ಇಕೆನಾ ಬಳಿ 4 ಕೋಟಿ ರು. ಮೌಲ್ಯದ ಎರಡು ಕೆಜಿ ಎಂಡಿಎಂಎ ಜಪ್ತಿಯಾಗಿದೆ. 13 ವರ್ಷಗಳ ಹಿಂದೆ ಬ್ಯುಸಿನೆಸ್ ವೀಸಾದಡಿ ಭಾರತಕ್ಕೆ ಬಂದಿದ್ದ ಆತ, ಬಳಿಕ ಸುಲಭವಾಗಿ ಹಣ ಸಂಪಾದನೆಗೆ ಡ್ರಗ್ಸ್ ದಂಧೆಗಿಳಿದಿದ್ದಾನೆ. ಈತನ ವಿರುದ್ಧ ವಿವಿಧ ರಾಜ್ಯಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಗರಕ್ಕೆ ಬದ ಸ್ಯಾಮುಯಲ್, ಆನೇಕಲ್ ಸಮೀಪ ವಾಸವಾಗಿದ್ದ. ಈತನ ಬಗ್ಗೆ ಖಚಿತ ಮಾಹಿತಿ ಪಡೆದು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಪರಿಚಯಸ್ಥ ಪೆಡ್ಲರ್‌ಗಳಿಂದ ಕಡಿಮೆ ಬೆಲೆಗೆ ಡ್ರಗ್ಸ್ ಖರೀದಿಸುತ್ತಿದ್ದ ಸ್ಯಾಮ್ಯುಯಲ್, ಗ್ರಾಹಕರು ಹೇಳಿದ ಸ್ಥಳಕ್ಕೆ ಡ್ರಗ್ಸ್ ಪೂರೈಸುತ್ತಿದ್ದ. ನಿರ್ದಿಷ್ಟ ಸ್ಥಳದಲ್ಲಿ ಡ್ರಗ್ಸ್ ಇಟ್ಟು ಆರೋಪಿ ಬರುತ್ತಿದ್ದ .ಆನ್‌ಲೈನ್ ಮುಖಾಂತರ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದ. ಗ್ರಾಹಕರ ಜತೆ ವ್ಯಾಟ್ಸಪ್ ಕರೆಗಳಲ್ಲಿ ಮಾತ್ರ ಸಂಪರ್ಕದಲ್ಲಿರುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನೊಂದೆಡೆ ಪುಲಕೇಶಿನಗರ, ಭಾರತಿನಗರ ಹಾಗೂ ಜಾಲಹಳ್ಳಿ ಠಾಣೆಗಳ ಪೊಲೀಸರು ನಡೆಸಿದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಏಳು ಮಂದಿ ಗಾಂಜಾ ದಂಧೆಕೋರರು ಬಂಧಿತರಾಗಿದ್ದಾರೆ.