ಕನ್ನಡಪ್ರಭ ವಾರ್ತೆ ಬೆಂಗಳೂರು

ಮಾದಕ ವಸ್ತು ಮಾರಾಟ ದಂಧೆ ವಿರುದ್ಧ ನಗರದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 32 ಕೋಟಿ ಮೌಲ್ಯದ ಡ್ರಗ್ಸ್ ಅನ್ನು ಜಪ್ತಿ ಮಾಡಲಾಗಿದೆ.

ಹೆಬ್ಬಗೋಡಿ ಠಾಣೆ ಪೊಲೀಸರು ಓರ್ವ ವಿದೇಶಿ ಪ್ರಜೆಯೊಬ್ಬನನ್ನು ಬಂಧಿಸಿ ₹27 ಕೋಟಿ ಮೌಲ್ಯದ ಡ್ರಗ್ಸ್ ಅನ್ನು ವಶಪಡಿಸಿಕೊಂಡಿದ್ದಾರೆ. ನೈಜೀರಿಯಾದ ಇಮ್ಯುಯಲ್ ಸೊಪುಲು ಬಂಧಿತನಾಗಿದ್ದು, ಆರೋಪಿಯಿಂದ 12.55 ಕೆಜಿ ಎಂಡಿಎಂಎ, 275 ಗ್ರಾಂ ಕೊಕೇನ್‌, 40 ಗ್ರಾಂ ಚಿನ್ನಾಭರಣ, ₹2.85 ಲಕ್ಷ ನಗದು ಹಾಗೂ ಕಾರು ಸೇರಿದಂತೆ ₹13.50 ಕೋಟಿ ಮೌಲ್ಯದ ವಸ್ತುಗಳು ಜಪ್ತಿಯಾಗಿವೆ. ಈತನ ಬಳಿ ಪತ್ತೆಯಾದ ಡ್ರಗ್ಸ್ ಪ್ರಸುತ್ತ ಮಾರುಕಟ್ಟೆ ಮೌಲ್ಯ ₹27 ಕೋಟಿ ಇದೆ.

ಇತ್ತೀಚಿಗೆ ಡ್ರಗ್ಸ್ ವ್ಯಸನಿ ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ನೈಜೀರಿಯಾ ಪ್ರಜೆ ಸಿಕ್ಕಿಬಿದ್ದಿದ್ದಾನೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.

5 ಮನೆಗಳು, 3 ಪ್ರೇಯಸಿಯರು:


12 ವರ್ಷದ ಹಿಂದೆ ಮೆಡಿಕಲ್‌ ವೀಸಾದಡಿ ಭಾರತಕ್ಕೆ ಬಂದಿದ್ದ ಇಮ್ಯುಯಲ್‌, ಸುಲಭವಾಗಿ ಹಣ ಸಂಪಾದನೆಗೆ ಡ್ರಗ್ಸ್ ದಂಧೆಗಿಳಿದಿದ್ದ. ಅಂತಾರಾಷ್ಟ್ರೀಯ ಮಾದಕ ವಸ್ತು ಮಾರಾಟ ಜಾಲದ ಸಂಪರ್ಕದ ಮೂಲಕ ಕಡಿಮೆ ಬೆಲೆಗೆ ಡ್ರಗ್ಸ್ ಖರೀದಿಸಿ ಬಳಿಕ ಅದನ್ನು ದುಬಾರಿ ಬಲೆಗೆ ಇಮ್ಯುಯಲ್‌ ಬಿಕರಿ ಮಾಡುತ್ತಿದ್ದ. ಈ ದಂಧೆ ಸಲುವಾಗಿ ಜಿಗಣಿ, ದೇವನಹಳ್ಳಿ ಹಾಗೂ ಆನೇಕಲ್ ವ್ಯಾಪ್ತಿ 5 ಮನೆಗಳನ್ನು ಬಾಡಿಗೆ ಪಡೆದಿದ್ದ, ಆ ಮನೆಗಳಲ್ಲಿ ಡ್ರಗ್ಸ್ ಅಕ್ರಮವಾಗಿ ದಾಸ್ತಾನು ಮಾಡಿ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈತನಿಗೆ ವಿವಾಹವಾಗಿದ್ದು, ಪತ್ನಿ ಹಾಗೂ ಮಕ್ಕಳ ಇದ್ದಾರೆ. ಆದರೆ ನಗರದಲ್ಲಿ ಆತನಿಗೆ 3 ಪ್ರೇಯಸಿರು ಸಹ ಇದ್ದಾರೆ. ಡ್ರಗ್ಸ್ ಹಣದಲ್ಲಿ ಆತ ಮೋಜು ಮಸ್ತಿ ಮಾಡುತ್ತಿದ್ದ. ಕೆಲ ದಿನಗಳ ಹಿಂದೆ ಡ್ರಗ್ಸ್ ವ್ಯಸನಿಯೊಬ್ಬನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ ತನಗೆ ಡ್ರಗ್ಸ್ ಪೂರೈಸಿದ್ದ ಪೆಡ್ಲರ್‌ ಹೆಸರನ್ನು ಬಾಯ್ಬಿಟ್ಟಿದ್ದ. ಈ ಸುಳಿವು ಆಧರಿಸಿ ಎಲೆಕ್ಟ್ರಾನಿಕ್‌ ಸಿಟಿ ವಿಭಾಗದ ಡಿಸಿಪಿ ಎಂ.ನಾರಾಯಣ್ ಮಾರ್ಗದರ್ಶನದಲ್ಲಿ ಎಸಿಪಿ ಕೆ.ಎಂ.ಸತೀಶ್, ಹೆಬ್ಬಗೋಡಿ ಇನ್ಸ್‌ಪೆಕ್ಟರ್ ಸೋಮಶೇಖರ್‌ ನೇತೃತ್ವದಲ್ಲಿ ಸಬ್ ಇನ್ಸ್‌ಪೆಕ್ಟರ್‌ಗಳಾದ ಶ್ರೀಕಾಂತ್‌ ಹಾಗೂ ಮಂಜುನಾಥ್ ತಂಡ ಕಾರ್ಯಾಚರಣೆ ನಡೆಸಿತು. ಈ ವೇಳೆ ಆತನ ಬಳಿ 27 ಕೋಟಿ ರು ಮೌಲ್ಯದ ಡ್ರಗ್ಸ್ ಸಿಕ್ಕಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಲೋಕೇಷನ್ ಡ್ರಾಪ್‌:

ಡ್ರಗ್ಸ್ ವ್ಯವಹಾರವನ್ನು ಆನ್ ಲೈನ್‌ ಮೂಲಕವೇ ಆರೋಪಿ ನಡೆಸುತ್ತಿದ್ದ. ಆ ನಿಗದಿತ ಸ್ಥಳದಲ್ಲಿ ಡ್ರಗ್ಸ್ ಇಟ್ಟು ಬಳಿಕ ಆ ಜಾಗದ ಲೋಕೇಷನ್‌ ಅನ್ನು ಗ್ರಾಹಕರಿಗೆ ಕಳುಹಿಸಿದ್ದ. ಅಲ್ಲಿಗೆ ತೆರಳಿ ಗ್ರಾಹಕರು ಡ್ರಗ್ಸ್ ಪಡೆಯುತ್ತಿದ್ದರು. ಈತ ಯಾರಿಂದ ಡ್ರಗ್ಸ್ ಖರೀದಿಸಿದ್ದ ಎಂಬ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಕೆಐಎನಲ್ಲಿ ₹4.71

ಕೋಟಿ ಡ್ರಗ್ಸ್ ಪತ್ತೆ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 4.71 ಕೋಟಿ ರು ಮೌಲ್ಯದ ಡ್ರಗ್ಸ್ ಅನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಕೆಐಎಗೆ ಬ್ಯಾಂಕಾಕ್‌ನಿಂದ ಆಗಮಿಸಿದ ಪೆಡ್ಲರ್‌ನ್ನು ಬಂಧಿಸಿದ ಕಸ್ಟಮ್ಸ್ ಅಧಿಕಾರಿಗಳು, ಆತನ ಬ್ಯಾಗ್ ಪರಿಶೀಲಿಸಿದಾಗ 4.71 ಕೋಟಿ ರು ಮೌಲ್ಯದ 13.45 ಕೆಜಿ ಹೈಡ್ರೋ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ವಿದೇಶದಿಂದ ರಾಜ್ಯಕ್ಕೆ ಡ್ರಗ್ಸ್ ಕಳ್ಳ ಸಾಗಾಣಿಕೆ ಜಾಲದ ಮೇಲೆ ಕಸ್ಟಮ್ಸ್ ಹದ್ದಿನ ಕಣ್ಣಿಟ್ಟಿದೆ.

42 ಲಕ್ಷ ಡ್ರಗ್ಸ್ ಜಪ್ತಿ

ಇನ್ನೊಂದೆಡೆ ನಗರದ ಐದು ಠಾಣೆಗಳ ಪೊಲೀಸರು ಪ್ರತ್ಯೇಕವಾಗಿ ಕಾರ್ಯಾಚರಣೆ ನಡೆಸಿ 42 ಲಕ್ಷ ರು ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ. ಯಲಹಂಕ ಉಪನಗರ- 21 ಲಕ್ಷ ರು ಮೌಲ್ಯದ 21.125 ಕೆಜಿ ಗಾಂಜಾ, ಮೈಕೋಲೇಔಟ್- 6.400 ಕೆಜಿ ಗಾಂಜಾ, ಪರಪ್ಪನ ಅಗ್ರಹಾರ-7.277 ಕೆಜಿ ಗಾಂಜಾ, ಎರಡು ಬೈಕ್‌ಗಳು, ಬಾಗಲೂರು-20 ಗ್ರಾಂ ಎಂಡಿಎಂಎ ಹಾಗೂ ಬಾಣಸವಾಡಿ ಪೊಲೀಸರು 16 ಗ್ರಾಂ ಎಂಡಿಎಂ ಅನ್ನು ವಶಪಡಿಸಿಕೊಂಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತರು ವಿವರಿಸಿದ್ದಾರೆ.

ಬಿಟೆಕ್ ವಿದ್ಯಾರ್ಥಿ ಸೆರೆ

ಡ್ರಗ್ಸ್ ಮಾರಾಟ ದಂಧೆಯಲ್ಲಿ ತೊಡಗಿದ್ದ ಬಿಟೆಕ್‌ ವಿದ್ಯಾರ್ಥಿ ಸೇರಿ ಇಬ್ಬರನ್ನು ಯಲಹಂಕ ಪೊಲೀಸರು ಸೆರೆ ಹಿಡಿದಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಮಾರಸಂದ್ರ ಗ್ರಾಮದ ಆದೇಶ್.ಪಿ.ದಿಲೀಪ್ ಹಾಗೂ ಮೊಹಮ್ಮದ್ ನಿಶಾದ್ ಬಂಧಿತರಾಗಿದ್ದು, ಆರೋಪಿಗಳಿಂದ 21 ಕೆಜಿ ಗಾಂಜಾ ಜಪ್ತಿಯಾಗಿದೆ. ಒಡಿಶಾ ರಾಜ್ಯದಿಂದ ಕಡಿಮೆ ಬಲೆಗೆ ಗಾಂಜಾ ತಂದು ನಗರದಲ್ಲಿ ಈ ಇಬ್ಬರು ಮಾರುತ್ತಿದ್ದರು. ನಗರದ ಖಾಸಗಿ ಕಂಪನಿಯಲ್ಲಿ ಕೇರಳ ಮೂಲದ ನಿಶಾದ್ ಉದ್ಯೋಗದಲ್ಲಿದ್ದು, 1 ವರ್ಷದಿಂದ ಈ ದಂಧೆಯಲ್ಲಿ ಆತ ನಿರತನಾಗಿದ್ದಾನೆ. ಕೆಲ ದಿನಗಳ ಹಿಂದೆ ಆತನಿಗೆ ಬಿಟೆಕ್ ವಿದ್ಯಾರ್ಥಿ ಆದೇಶ್ ಪರಿಚಯವಾಗಿದೆ. ಬಳಿಕ ಗೆಳೆಯನಿಗೆ ಹಣದಾಸೆ ತೋರಿಸಿ ಡ್ರಗ್ಸ್ ದಂಧೆಗೆ ಆತ ಸೆಳೆದಿದ್ದಾನೆ.

ಪರಪ್ಪನ ಅಗ್ರಹಾರ ಠಾಣೆ ಪೊಲೀಸರ ಬಲೆಗೆ ಝೋಮಾಟೊ ಡಿಲವರಿ ಹುಡುಗ ರಾಹುಲ್ ಹಾಗೂ ಆಟೋ ಚಾಲಕ ಪ್ರೇಮ್ ಕುಮಾರ್ ರೆಡ್ಡಿ ಸಿಕ್ಕಿಬಿದ್ದಿದ್ದಾರೆ. ಈ ಇಬ್ಬರು ಸಹ ಹೊರ ರಾಜ್ಯದಿಂದ ಗಾಂಜಾ ತಂದು ನಗರದಲ್ಲಿ ಬಿಕರಿ ಮಾಡುತ್ತಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ. ನಗರ ಪೊಲೀಸರು ಜಪ್ತಿ ಮಾಡಿದ ₹32 ಕೋಟಿ ಮೌಲ್ಯದ ಗಾಂಜಾವನ್ನು ನಗರ ಪೊಲೀಸ್ ಆಯುಕ್ತ ಸಿಮಂತ್ ಕುಮಾರ್ ಸಿಂಗ್ ಪರಿಶೀಲಿಸಿದರು. ಎಲೆಕ್ಟ್ರಾನಿಕ್‌ ಸಿಟಿ ವಿಭಾಗದ ಡಿಸಿಪಿ ಎಂ.ನಾರಾಯಣ್ ಇದ್ದರು.