ಬೆಂಗಳೂರು: ನಗರದಲ್ಲಿ ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ‘ಡ್ರಂಕ್‌ ಅ್ಯಂಡ್‌ ಡ್ರೈವ್‌’ ವಿರುದ್ಧ ವಿಶೇಷ ಕಾರ್ಯಾಚರಣೆ ಮುಂದುವರೆಸಿರುವ ನಗರ ಸಂಚಾರ ಪೊಲೀಸರು, ಶನಿವಾರ ಪಾನಮತ್ತ ಚಾಲಕ, ಸವಾರರ ವಿರುದ್ಧ 324 ಪ್ರಕರಣ ದಾಖಲಿಸಿದ್ದಾರೆ. 

ಶನಿವಾರ ರಾತ್ರಿ ನಗರ ಸಂಚಾರ ವಿಭಾಗದ 50 ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 161 ಮಂದಿ ಸಂಚಾರ ಪೊಲೀಸ್‌ ಅಧಿಕಾರಿಗಳು ಹಾಗೂ 536 ಸಿಬ್ಬಂದಿ ಸೇರಿ ಒಟ್ಟು 697 ಮಂದಿ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. 

ಈ ವೇಳೆ 18,769 ವಿವಿಧ ಮಾದರಿಯ ವಾಹನಗಳನ್ನು ತಪಾಸಣೆ ಮಾಡಿದ್ದು, ಈ ಪೈಕಿ ಮದ್ಯ ಸೇವಿಸಿ ವಾಹನ ಚಾಲನೆ ಮಾಡುತ್ತಿದ್ದ 324 ಮಂದಿ ಸಿಕ್ಕಿಬಿದ್ದಿದ್ದಾರೆ. ಇವರ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ರಸ್ತೆ ಸುರಕ್ಷತೆ ದೃಷ್ಟಿಯಿಂದ ಇಂತಹ ಕಾರ್ಯಾಚರಣೆಗಳು ಮುಂದುವರೆಯಲಿವೆ ಎಂದು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ಎಂ.ಎನ್‌.ಅನುಚೇತ್‌ ತಿಳಿಸಿದ್ದಾರೆ.