ಕುಡುಕರ ಹಾವಳಿ: ನರಸಿಂಹರಾಜಪುರದ ಸ್ವಚ್ಛತೆಗೆ ಧಕ್ಕೆ

| Published : Jan 12 2025, 01:16 AM IST

ಸಾರಾಂಶ

ನರಸಿಂಹರಾಜಪುರ, ಸ್ವಚ್ಛತೆಗೆ ಹೆಸರಾದ ನರಸಿಂಹರಾಜಪುರ ಪಟ್ಟಣದ ಕೆಲವು ವಾರ್ಡುಗಳ ರಸ್ತೆಗಳ ಬದಿ, ಖಾಲಿ ನಿವೇಶನಗಳಲ್ಲಿ ಕುಡುಕರು ಖಾಲಿ ಬಾಟಲಿ, ಪ್ಲಾಸ್ಟಿಕ್ ಕವರ್ ಹಾಕಿ ನಗರದ ಅಂದವನ್ನು ಕೆಡಿಸುತ್ತಿದ್ದಾರೆ. ಪಟ್ಟಣದಲ್ಲಿ ಪ್ರತಿ ನಿತ್ಯ ಬೆಳಗಿನಜಾವ ಪೌರ ಕಾರ್ಮಿಕರು ಬಸ್ಸು ನಿಲ್ದಾಣದಿಂದ ಹಿಡಿದು 11 ವಾರ್ಡುಗಳಲ್ಲೂ ಸಂಚರಿಸುತ್ತಾ ರಸ್ತೆ, ಚರಂಡಿಗಳನ್ನು ಸ್ವಚ್ಛ ಗೊಳಿಸಿದರೂ ಇದಾವುದರ ಪರಿವೇ ಇಲ್ಲದೆ ರಾತ್ರಿಯಾಗುತ್ತಿದ್ದಂತೆ ಕತ್ತಲೆ ಪ್ರದೇಶ ಹುಡುಕಿ ಕುಡಿದು ಬಾಟಲಿಗಳನ್ನು ರಸ್ತೆ ಬದಿ ಹಾಕುವುದರಿಂದ ಎಲ್ಲೆಂದರಲ್ಲಿ ಕಸದ ರಾಶಿಯಾಗಿ ಸ್ವಚ್ಛತೆ ಧಕ್ಕೆ ಯಾಗಿದೆ

ರಸ್ತೆ ಬದಿ, ಖಾಲಿ ನಿವೇಶನ ಆವರಿಸುವ ಖಾಲಿ ಬಾಟಲಿ, ಪ್ಲಾಸ್ಟಿಕ್ ಕವರ್ ರಾಶಿಗಳು

ಯಡಗೆರೆ ಮಂಜುನಾಥ್

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಸ್ವಚ್ಛತೆಗೆ ಹೆಸರಾದ ನರಸಿಂಹರಾಜಪುರ ಪಟ್ಟಣದ ಕೆಲವು ವಾರ್ಡುಗಳ ರಸ್ತೆಗಳ ಬದಿ, ಖಾಲಿ ನಿವೇಶನಗಳಲ್ಲಿ ಕುಡುಕರು ಖಾಲಿ ಬಾಟಲಿ, ಪ್ಲಾಸ್ಟಿಕ್ ಕವರ್ ಹಾಕಿ ನಗರದ ಅಂದವನ್ನು ಕೆಡಿಸುತ್ತಿದ್ದಾರೆ. ಪಟ್ಟಣದಲ್ಲಿ ಪ್ರತಿ ನಿತ್ಯ ಬೆಳಗಿನಜಾವ ಪೌರ ಕಾರ್ಮಿಕರು ಬಸ್ಸು ನಿಲ್ದಾಣದಿಂದ ಹಿಡಿದು 11 ವಾರ್ಡುಗಳಲ್ಲೂ ಸಂಚರಿಸುತ್ತಾ ರಸ್ತೆ, ಚರಂಡಿಗಳನ್ನು ಸ್ವಚ್ಛ ಗೊಳಿಸಿದರೂ ಇದಾವುದರ ಪರಿವೇ ಇಲ್ಲದೆ ರಾತ್ರಿಯಾಗುತ್ತಿದ್ದಂತೆ ಕತ್ತಲೆ ಪ್ರದೇಶ ಹುಡುಕಿ ಕುಡಿದು ಬಾಟಲಿಗಳನ್ನು ರಸ್ತೆ ಬದಿ ಹಾಕುವುದರಿಂದ ಎಲ್ಲೆಂದರಲ್ಲಿ ಕಸದ ರಾಶಿಯಾಗಿ ಸ್ವಚ್ಛತೆ ಧಕ್ಕೆ ಯಾಗಿದೆ.

ಇತ್ತ ಪೌರ ಕಾರ್ಮಿಕರ ನಿರಂತರ ಸ್ವಚ್ಛತಾ ಕಾರ್ಯಕ್ಕೂ ಬೆಲೆ ಇಲ್ಲದೆ ರಸ್ತೆ ಬದಿಯಲ್ಲಿ ಮತ್ತೆ ಬಾಟಲಿ, ಪ್ಲಾಸ್ಟಿಕ್ ರಾಶಿ ಬೀಳುತ್ತದೆ. ಜತೆಗೆ ಕೆಲವು ಕುಡುಕರು ಬಾಟಲಿಗಳನ್ನು ಒಡೆದು ರಸ್ತೆ ಬದಿ ಹಾಕುತ್ತಿರುವುದು ತೀವ್ರ ತೊಂದರೆ ಉಂಟುಮಾಡಿದೆ. ಅದರಲ್ಲೂ ಹಳೇ ಪೋಸ್ಟ್ ಆಫೀಸ್ ರಸ್ತೆಯಿಂದ ಮುಖ್ಯರಸ್ತೆಗೆ ಬರುವ ಬೈಪಾಸ್ ರಸ್ತೆ ಬದಿ ಬಾಟಲಿ, ಪ್ಲಾಸ್ಟಿಕ್ ರಾಶಿಯೇ ಬಿದ್ದಿದೆ. ಪಕ್ಕದಲ್ಲಿ ಇರುವ ಖಾಸಗಿಯವರ ಖಾಲಿ ನಿವೇಶನದಲ್ಲೂ ಸಹ ಖಾಲಿ ಬಾಟಲಿಗಳು, ಕಸದ ರಾಶಿ ಬಿದ್ದಿದ್ದು ಸಮೀಪದ ನಿವಾಸಿಗಳಿಗೆ ದುರ್ವಾಸನೆ ಬರುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಒಂದು ಕಡೆ ಕುಡುಕರ ಹಾವಳಿ ಯಾದರೆ ಮತ್ತೊಂದೆಡೆ ಸಾರ್ವಜನಿಕರು ಶಾರದಾ ವಿದ್ಯಾಮಂದಿರ ಕಾಲೇಜು ಸಮೀಪದ ಕೆರೆ ದಂಡೆ, ರಾಘವೇಂದ್ರ ಬಡಾವಣೆ ಈರಮ್ಮಾಜಿ ಕೆರೆ ದಂಡೆ ಮೇಲೆ ಕಸ ತಂದು ರಾಶಿ ಹಾಕುತ್ತಿದ್ದು ಕೆರೆಯ ಸ್ವಚ್ಛತೆಗೂ ಮಾರಕವಾಗಿದೆ. ಬಸ್‌ ನಿಲ್ದಾಣದಿಂದ ಶಿವಮೊಗ್ಗ ರಸ್ತೆಯಲ್ಲಿ ಬರುವ ಗ್ರಂಥಾಲಯದ ಪಕ್ಕದ ಲೈಔಟ್ ನ್ನು ಸಹ ಸಾರ್ವಜನಿಕರು ಕಸ ಹಾಕಲು ಉಪಯೋಗಿಸುತ್ತಿದ್ದರೆ, ಇನ್ನು ಕುಡುಕರು ಖಾಲಿ ಜಾಗವನ್ನು ಬಾರ್ ಗಳಾಗಿ ಮಾಡಿಕೊಳ್ಳುತ್ತಾರೆ. ಪಟ್ಟಣ ಪಂಚಾಯಿತಿ ಮುಂಭಾಗದ ಖಾಲಿ ಇರುವ ಗ್ರಂಥಾಲಯ ಕಟ್ಟಡದ ಪಕ್ಕದ ಓಣಿ, ಜೈಲ್ ರಸ್ತೆ ಪಕ್ಕದ ಜಾಗ, ಜೀವನ್ ಜ್ಯೋತಿ ಶಾಲೆ ಹಿಂಭಾಗ, ಇಂದಿರಾ ಕ್ಯಾಂಟೀನ್ ಪಕ್ಕದ ಜಾಗ ಸೇರಿದಂತೆ ಪಟ್ಟಣದ ಯಾವುದೇ ಖಾಲಿ ಜಾಗವನ್ನು ಕುಡುಕರು ಬಿಟ್ಟಿಲ್ಲ. ಎಲ್ಲಿ ಕತ್ತಲೆ ಜಾಗ ಇದೆಯೋ ಆ ಜಾಗವನ್ನೇ ಹುಡುಕಿ ತಮ್ಮ ಅಡ್ಡ ಮಾಡಿಕೊಂಡು ನಗರದ ಅನೇಕ ಕಡೆ ತ್ಯಾಜ್ಯದ ಸಮಸ್ಯೆ ಉಲ್ಬಣಿಸಿದೆ.

ಪಟ್ಟಣ ಪಂಚಾಯಿತಿ ಹಾಗೂ ಪೊಲೀಸ್ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡು ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ನಿಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರ ಆಗ್ರಹವಾಗಿದೆ.

-- ಕೋಟ್--

ಹಳೇ ಪೋಸ್ಟ್ ಆಫೀಸ್ ರಸ್ತೆಯಿಂದ ಮುಖ್ಯ ರಸ್ತೆಯ ಲಿಂಕ್ ರಸ್ತೆಯಲ್ಲಿ ಬೀದಿ ದೀಪ ಇಲ್ಲ. ಇದರಿಂದ ಕುಡುಕರು ರಾತ್ರಿ ಮದ್ಯಪಾನ ಮಾಡಿ ಬಾಟಲಿಯನ್ನು ರಸ್ತೆ ಬದಿ ಹಾಕುತ್ತಾರೆ. ಸಂಜೆ ಮಹಿಳೆಯರು ಈ ರಸ್ತೆಯಲ್ಲಿ ಓಡಾಡಲು ಭಯ ಪಡಬೇಕಾಗುತ್ತದೆ. ಕೆಲವರು ಬೆಳಿಗ್ಗೆ 7 ರಿಂದ 8 ರವರೆಗೆ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಾರೆ. ಸಂಬಂಧಪಟ್ಟವರು ಈ ಬಗ್ಗೆ ಗಮನ ನೀಡಬೇಕು.

ಜಯರಾಂ, ಪಟ್ಟಣ ಪಂಚಾಯಿತಿ ನಾಮಿನಿ ಮಾಜಿ ಸದಸ್ಯ, ನರಸಿಂಹರಾಜಪುರ

-- ಕೋಟ್ --

ಈಗಾಗಲೇ ಪಟ್ಟಣ ಖಾಲಿ ನಿವೇಶನಗಳನ್ನು ಸ್ವಚ್ಛ ಮಾಡಬೇಕು ಎಂದು ಮಾಲೀಕರಿಗೆ ಸೂಚಿಸಲಾಗಿದೆ. ಕೆಲವರು ಖಾಲಿ ನಿವೇಶನಕ್ಕೆ ಕಸ ತಂದು ಹಾಕುತ್ತಾರೆ. ಪಟ್ಟಣ ಸುಂದರವಾಗಿರಬೇಕಾದರೆ ಸಾರ್ವಜನಿಕರ ಸಹಕಾರವೂ ಅಗತ್ಯ. ಖಾಲಿ ಇರುವ ದನದ ದೊಡ್ಡಿ ಜಾಗದಲ್ಲೂ ಸಾರ್ವಜನಿಕರು ಕಸ ಹಾಕುತ್ತಿರುವುದು ಗಮನಕ್ಕೆ ಬಂದಿದ್ದು ಕ್ರಮ ಕೈಗೊಳ್ಳಲಾಗುವುದು. ಪಟ್ಟಣ ಪಂಚಾಯಿತಿ ಹಾಗೂ ಸಾರ್ವಜನಿಕರು ಒಟ್ಟಾಗಿ ಸ್ವಚ್ಛ ನಗರ ಮಾಡಲು ಶ್ರಮಿಸಬೇಕಾಗಿದೆ.

ಪ್ರಶಾಂತಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ,

ಪಟ್ಟಣ ಪಂಚಾಯಿತಿ, ನರಸಿಂಹರಾಜಪುರ