ಮದ್ಯದ ಅಮಲಿನಲ್ಲಿ ಜಿಮ್ ತರಬೇತುದಾರರ ಮಧ್ಯೆ ಉಂಟಾದ ಜಗಳದಲ್ಲಿ ಓರ್ವ ಕೊಲೆಗೀಡಾಗಿರುವ ಘಟನೆ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಮದ್ಯದ ಅಮಲಿನಲ್ಲಿ ಜಿಮ್ ತರಬೇತುದಾರರ ಮಧ್ಯೆ ಉಂಟಾದ ಜಗಳದಲ್ಲಿ ಓರ್ವ ಕೊಲೆಗೀಡಾಗಿರುವ ಘಟನೆ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಜಕ್ಕೂರು ನಿವಾಸಿ ನಂದನ್ (25) ಮೃತ ವ್ಯಕ್ತಿ. ಈ ಸಂಬಂಧ ಮೃತನ ಸ್ನೇಹಿತರಾದ ವಿಶ್ವನಾಥ್, ಶರತ್ ಹಾಗೂ ನಿಶಾಂತ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಕೆಂಪಾಪುರದಲ್ಲಿ ತಮ್ಮ ಸ್ನೇಹಿತ ಅನೂಷ್‌ಗೆ ಸೇರಿದ ಫ್ಲ್ಯಾಟ್‌ನಲ್ಲಿ ಭಾನುವಾರ ರಾತ್ರಿ ಐವರು ಗೆಳೆಯರು ಪಾರ್ಟಿ ಮಾಡಿದ್ದಾರೆ. ಆಗ ಕುಡಿದ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಉಂಟಾದ ಜಗಳವು ಕೊನೆಗೆ ದುರಂತ ಅಂತ್ಯ ಕಂಡಿದೆ.
ಸಹಕಾರ ನಗರದ ಬಳಿ ನಂದನ್ ಜಿಮ್ ನಡೆಸುತ್ತಿದ್ದು, ತನ್ನ ಕುಟುಂಬದ ಜತೆ ನೆಲೆಸಿದ್ದ. ಈ ಜಿಮ್‌ನಲ್ಲಿ ವಿಶ್ವನಾಥ್, ಶರತ್ ಹಾಗೂ ನಿಶಾಂತ್ ಸಹ ತರಬೇತುದಾರರಾಗಿದ್ದರು. ಹಲವು ವರ್ಷಗಳಿಂದ ಅವರ ಆತ್ಮೀಯ ಸ್ನೇಹವಿತ್ತು. 2 ವರ್ಷಗಳಿಂದ ಅವರ ಬಳಿ ಖಾಸಗಿ ಕಂಪನಿ ಉದ್ಯೋಗಿ ಅನೂಷ್ ತರಬೇತಿ ಪಡೆಯುತ್ತಿದ್ದ. ಉಡುಪಿ ಜಿಲ್ಲೆಯ ಕೆಂಪಾಪುರದ ಅಪಾರ್ಟ್‌ಮೆಂಟ್‌ನಲ್ಲಿ ಆತ ವಾಸವಾಗಿದ್ದ. ಈ ಗೆಳೆತನದಲ್ಲಿ ಭಾನುವಾರ ರಾತ್ರಿ ಅನೂಷ್ ಫ್ಲ್ಯಾಟ್‌ನಲ್ಲಿ ನಂದನ್ ಹಾಗೂ ಆತನ ನಾಲ್ವರು ಗೆಳೆಯರು ಪಾರ್ಟಿ ಮಾಡಿದ್ದಾರೆ.ಈ ವೇಳೆ ಕುಡಿದ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕೆ ವಿಶ್ವ ಹಾಗೂ ನಂದನ್ ಮಧ್ಯೆ ಜಗಳ ಶುರುವಾಗಿದೆ. ತನ್ನನ್ನು ‘ಶಿಷ್ಯ’ ಎಂದು ಕರೆಯದಂತೆ ನಂದನ್‌ಗೆ ವಿಶ್ವ ತಾಕೀತು ಮಾಡಿದ್ದಾನೆ. ಆಗ ‘ನಾನೇ ನಿನ್ನ ಗುರು’ ಎಂದೆಲ್ಲ ನಂದನ್ ಬಡಬಡಿಸಿದ್ದಾನೆ. ಈ ವೇಳೆ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ವಿಶ್ವನಿಗೆ ಇನ್ನುಳಿದ ಮೂವರು ಸಾಥ್ ಕೊಟ್ಟಿದ್ದಾರೆ. ಈ ಹಂತದಲ್ಲಿ ರೊಚ್ಚಿಗೆದ್ದ ಆರೋಪಿಗಳು, ಶೌಚಾಲಯದಲ್ಲಿ ಕರೆದೊಯ್ದು ನಂದನ್ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದು, ತಲೆಗೆ ಗಂಭೀರವಾಗಿ ಪೆಟ್ಟಾಗಿ ನಂದನ್ ಮೃತಪಟ್ಟಿದ್ದಾನೆ.