ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರಮಾಜಿ ಸಂಸದ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ದಿ. ಆರ್. ಧ್ರುವನಾರಾಯಣ ಅವರು ನಿಧನರಾಗಿ ಮಾ. ೧೧ ಕ್ಕೆ ಒಂದು ವರ್ಷ ತುಂಬಲಿದೆ. ನಮ್ಮನ್ನಗಲಿದ ನಾಯಕರಿಗೆ ಪ್ರಥಮ ವರ್ಷದ ಪುಣ್ಯ ಸ್ಮರಣೆಯನ್ನು ಜಿಲ್ಲೆಯ ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಅವರ ಭಾವಚಿತ್ರವಿಟ್ಟು ಪೂಜೆ ಪುಷ್ಪಾರ್ಚನೆ ಮಾಡಿ ಅವರ ಸೇವೆಯನ್ನು ಸ್ಮರಿಸಿಕೊಳ್ಳುವ ಕೆಲಸ ಮಾಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ ತಿಳಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪಕ್ಷದ ಮುಖಂಡರು ಹಾಗೂ ಧ್ರುವನಾರಾಯಣ ಅಭಿಮಾನಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿಯು ಧ್ರುವನಾರಾಯಣ ಹೆಚ್ಚು ಚಿರ ಪರಿಚಿತರು. ಅಲ್ಲದೇ ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ ಕಾಂಗ್ರೆಸ್ ಸೇನಾನಿ, ಹಗಲು ರಾತ್ರಿ ಎನ್ನದೇ ಪಕ್ಷಕ್ಕಾಗಿದ ದುಡಿದು ತ್ಯಾಗ ಮಾಡಿದ ಧ್ರುವನಾರಾಯಣ ಅವರು ದೈಹಿಕವಾಗಿ ನಮ್ಮನ್ನಗಲಿರಬಹುದು. ಆದರೆ, ಅವರು ಮಾಡಿರುವ ಕೆಲಸ ಕಾರ್ಯಗಳು ನಮ್ಮ ಮುಂದೆ ಇದೆ. ಸದಾ ಅವರನ್ನು ನೆನಪಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಪ್ರಥಮ ವರ್ಷದ ಪುಣ್ಯರಾಧನೆಯನ್ನು ಬಹಳ ಅಚ್ಚುಕಟ್ಟಾಗಿ ಜಿಲ್ಲೆಯಲ್ಲಿ ನಿರ್ವಹಣೆ ಮಾಡಲು ಜಿಲ್ಲೆಯ ಮೂವರು ಶಾಸಕರು ಹಾಗೂ ಮಾಜಿ ಶಾಸಕರು, ಮಾಜಿ ಸಂಸದರ ಮಾರ್ಗದರ್ಶನ ಪಡೆಯಲು ಎಲ್ಲರು ಕೈ ಜೋಡಿಸಬೇಕು ಎಂದು ತಿಳಿಸಿದರು.ಮಾ. ೧೧ ರಂದು ಆಯಾ ಬ್ಲಾಕ್ ಮಟ್ಟದಲ್ಲಿ ಧ್ರುವನಾರಾಯಣ ಅವರ ಭಾವಚಿತ್ರವಿಟ್ಟು ಪೂಜೆ ಸಲ್ಲಿಸುವ ಜೊತೆಗೆ ಅನ್ನ ಸಂತರ್ಪಣೆ ಹಾಗೂ ಅವರ ಸೇವೆಯನ್ನು ಗುಣಗಾಣ ಮಾಡಬೇಕು. ನಗರಸಭೆಯ ೩೧ ವಾರ್ಡುಗಳು ಹಾಗೂ ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಅವರ ಅಭಿಮಾನಿಗಳು ಹಾಗೂ ಪಕ್ಷದ ಮುಖಂಡರು ಧ್ರುವನಾರಾಯಣ ಅವರಿಗೆ ಗೌರವ ಸಲ್ಲಿಸಬೇಕು. ಜಿಲ್ಲಾ ಕೇಂದ್ರದಲ್ಲಿ ದಿನ ಪೂರ್ತಿ ವಿವಿಧ ಘಟಕಗಳು ಕಾರ್ಯಕ್ರಮಗಳನ್ನು ಆಯೋಜನೆ ಮಾಡುವಂತೆ ಮರಿಸ್ವಾಮಿ ಸಲಹೆ ನೀಡಿದರು.
ಮಾ. ೧೨ರಂದು ಹೆಗ್ಗವಾಡಿಯಲ್ಲಿ ಪುಣ್ಯಸ್ಮರಣೆ ೧೦ ಸಾವಿರ ಮಂದಿ ಭಾಗಿ: ಸ್ವಗ್ರಾಮವಾದ ಹೆಗ್ಗವಾಡಿಯಲ್ಲಿ ಮಾ. ೧೨ ರಂದು ನಡೆಯುವ ಧ್ರುವನಾರಾಯಣ ಅವರು ಪ್ರಥಮ ವರ್ಷದ ಪುಣ್ಯಾರಾಧನೆಯನ್ನು ಅವರ ಪುತ್ರ ಶಾಸಕ ದರ್ಶನ್ ಧ್ರುವನಾರಾಯಣ ಅವರು ಆಯೋಜನೆ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಶಿವಕುಮಾರ್, ಸಚಿವರು ಹಾಗೂ ಶಾಸಕರು ಭಾಗವಹಿಸಿದ್ದಾರೆ. ಚಾಮರಾಜನಗರ ತಾಲೂಕಿನಿಂದಲೇ ೧೦ ಸಾವಿರ ಮಂದಿ ಅವರ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಬೇಕು ಎಂದು ಮರಿಸ್ವಾಮಿ ತಿಳಿಸಿದರು.ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವ್, ಅಭಿಮಾನಿ ಬಳಗದ ಅಧ್ಯಕ್ಷ ಕಾಗಲವಾಡಿ ಚಂದ್ರು, ಕೆರೆಹಳ್ಳಿ ನವೀನ್, ಸದಾಶಿವಮೂರ್ತಿ, ನಗರಸಭಾ ಸದಸ್ಯ ಆರ್.ಪಿ. ನಂಜುಂಡಸ್ವಾಮಿ, ಮಧುವನಹಳ್ಳಿ ಶಿವಕುಮಾರ್, ಮಾಂಬಳ್ಳಿ ನಂಜುಂಡಸ್ವಾಮಿ, ಸುಹೇಲ್ ಆಲಿ ಖಾನ್, ಸೈಯದ್ ರಫಿ, ಬ್ಲಾಕ್ ಅಧ್ಯಕ್ಷ ಮುನ್ನಾ, ಗುರುಸ್ವಾಮಿ, ರಾಜ್ಯ ಎಸ್ಟಿ ಘಟಕದ ಪ್ರಧಾನ ಕಾರ್ಯದರ್ಶಿ ಪು. ಶ್ರೀನಿವಾಸನಾಯಕ, ಯುವ ಕಾಂಗ್ರೆಸ್ ಉಪಾಧ್ಯಕ್ಷ ಕೆಲ್ಲಂಬಳ್ಳಿ ಸೋಮ, ನಾಗೇಂದ್ರ ಅನೇಕರು ಸಹೆ ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಮುಖಂಡರಾದ ರಾಜ್ಯ ಉಪಾಧ್ಯಕ್ಷ ಸಿ.ಎ. ಮಹದೇವಶೆಟ್ಟಿ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸೈಯದ್ ಷರೀಪ್, ಜಯರಾಜ್, ಎಸ್. ರಾಜು, ಮಹದೇವಸ್ವಾಮಿ, ಎಪಿಎಂಸಿ ಅಧ್ಯಕ್ಷ ಸೋಮೇಶ್, ಜಿ.ಪಂ. ಮಾಜಿ ಸದಸ್ಯ ರಮೇಶ್, ಮಹದೇವಶೆಟ್ಟಿ, ರಾಜೇಶ್ ಮೊದಲಾದವರು ಭಾಗವಹಿಸಿದ್ದರು.