ಸಾರಾಂಶ
ಮೂರು ವರ್ಷಗಳಿಂದ ಕೈಗೊಡುತ್ತಿರುವ ಬೆಳೆ । 7 ಸಾವಿರಕ್ಕೂ ಅಧಿಕ ರೈತರು ಬೆಂಗಳೂರಿಗೆಮಂಜುನಾಥ ಕೆ.ಎಂ.
ಕನ್ನಡಪ್ರಭ ವಾರ್ತೆ ಬಳ್ಳಾರಿಒಣಮೆಣಸಿನಕಾಯಿ ಬೆಳೆಗಾಗಿ ಲಕ್ಷಾಂತರ ರು. ಸಾಲ ಮಾಡಿಕೊಂಡಿರುವ ರೈತರು ಹೊಟ್ಟೆಪಾಡಿಗಾಗಿ ರಾಜಧಾನಿ ಬೆಂಗಳೂರಿನತ್ತ ಮುಖವೊಡ್ಡಿದ್ದಾರೆ. ಒಂದೆಡೆ ಸಾಲಗಾರರ ಕಾಟ, ಮತ್ತೊಂದೆಡೆ ನಿತ್ಯ ಬದುಕಿನ ನಿರ್ವಹಣೆಗೆ ಖರ್ಚು ವೆಚ್ಚಗಳನ್ನು ಸರಿದೂಗಿಸಲು ಕುಟುಂಬ ಸಮೇತ ವಲಸೆ ಹೋಗುತ್ತಿದ್ದಾರೆ!
ಬಳ್ಳಾರಿ ಜಿಲ್ಲೆಯಲ್ಲಿ ಒಣ ಮೆಣಸಿನಕಾಯಿ ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು ಕಳೆದ ಮೂರು ವರ್ಷಗಳಿಂದ ಸತತವಾಗಿ ಬೆಳೆ ಕೈಕೊಟ್ಟಿರುವುದು ಹಾಗೂ ಬೆಳೆಗೆ ವೈಜ್ಞಾನಿಕ ಬೆಲೆ ಸಿಗದಿರುವುದರಿಂದ ರೈತರು ಲಕ್ಷಾಂತರ ರು. ಸಾಲ ಮಾಡಿಕೊಳ್ಳುವಂತಾಗಿದೆ. ಕೆಲವು ಬೆಳೆಗಾರರು ಸಾಲ ತೀರಿಸಲು ಜಮೀನು ಮಾರಿಕೊಂಡರೆ, ಗುತ್ತಿಗೆ ಆಧಾರದಲ್ಲಿ ಕೃಷಿ ಮಾಡಿರುವ ರೈತರು ಕೃಷಿ ಸಾಲದ ಜತೆ ಕುಟುಂಬ ನಿರ್ವಹಣೆಗಾಗಿ ಬೆಂಗಳೂರಿನತ್ತ ಹೆಜ್ಜೆ ಹಾಕಿದ್ದಾರೆ.ಕಳೆದ ಎರಡೂವರೆ ತಿಂಗಳಲ್ಲಿ ಬಳ್ಳಾರಿ ಜಿಲ್ಲೆಯಿಂದಲೇ 7 ಸಾವಿರಕ್ಕೂ ಅಧಿಕ ರೈತರು ಬೆಂಗಳೂರು ಸೇರಿಕೊಂಡಿರಬಹುದು ಎಂದು ಅಂದಾಜಿಸಲಾಗಿದ್ದು, ನಿತ್ಯ ವಲಸೆ ಹೋಗುತ್ತಿರುವ ಸಂಖ್ಯೆ ಮುಂದುವರಿದಿದೆ.
ಮೂರು ವರ್ಷದಿಂದ ನಷ್ಟ:2023ನೇ ಸಾಲಿನಲ್ಲಿ ನೀರಿನ ಅಭಾವದಿಂದ ಮೆಣಸಿನಕಾಯಿ ಬೆಳೆಗೆ ಸಕಾಲಕ್ಕೆ ನೀರು ಸಿಗದೆ ಭಾಗಶಃ ಬೆಳೆ ಹಾಳಾಯಿತು. ಎಕರೆಗೆ ಸುಮಾರು ಎರಡು ಲಕ್ಷ ರು.ಗಳಷ್ಟು ಕೃಷಿ ವೆಚ್ಚ ಮಾಡಿದ್ದ ರೈತರು, ಮತ್ತೆ ಸಾಲ ಮಾಡಿ 2024ರಲ್ಲಿ ಮೆಣಸಿನಕಾಯಿ ಬೆಳೆದರು. ವಿಪರ್ಯಾಸ ಎಂದರೆ ಕಳೆದ ವರ್ಷ ಕ್ವಿಂಟಲ್‌ಗೆ ₹25 ಸಾವಿರ ವರೆಗೆ ದರ ಸಿಕ್ಕಿತಾದರೂ ಎಲೆಚುಕ್ಕಿ ಹಾಗೂ ಎಲೆಮುಟುರು ರೋಗದಿಂದಾಗಿ ಇಳುವರಿ ಏರಿಕೆ ಕಂಡು ಬರಲಿಲ್ಲ. ಈ ಸಾಲಿನ ಮಾರ್ಚ್‌ನಲ್ಲಿ ದರ ಕ್ವಿಂಟಲ್‌ಗೆ ಏಕಾಏಕಿ ₹5 ಸಾವಿರಕ್ಕೆ ಕುಸಿಯಿತು. ಅತ್ಯಂತ ಗುಣಮಟ್ಟದ ಮೆಣಸಿನಕಾಯಿ ₹12 ಸಾವಿರಕ್ಕೆ ಮಾರಾಟವಾಯಿತು. ಸತತ ಮೂರು ವರ್ಷ ಬೆಳೆಹಾನಿಯ ವ್ಯೂಹಕ್ಕೆ ಸಿಲುಕಿದ ರೈತರು ಸಾಲಗಾರರಾದರು.
ಸ್ವಂತ ಜಮೀನಿನಲ್ಲಿ ಒಣಮೆಣಸಿನಕಾಯಿ ಬೆಳೆದ ರೈತರು ಸಾಲ ತೀರಿಸಲು ಒಂದಷ್ಟು ಹೊಲ ಮಾರಿಕೊಂಡರು. ಆದರೆ, ಗುತ್ತಿಗೆ ಆಧಾರದಲ್ಲಿ ಬೆಳೆ ಬೆಳೆದವರು ಸಾಲದ ಪ್ರಮಾಣ ಏರಿಕೆಯಾಗಿ ಕೆಲವರು ಆತ್ಮಹತ್ಯೆಗೆ ಶರಣಾದರೆ, ಬಹುತೇಕರು ಬದುಕು ಕಟ್ಟಿಕೊಳ್ಳಲು ಹಾಗೂ ಸಾಲದ ಬಾಧೆಯಿಂದ ಹೊರ ಬರಲು ಬೆಂಗಳೂರಿಗೆ ತೆರಳಿದ್ದು ದಿನಗೂಲಿಗಳಾಗಿ ನಿತ್ಯ ಕೆಲಸಕ್ಕಾಗಿ ಅಲೆದಾಡುತ್ತಿದ್ದಾರೆ.ನಾಲ್ಕೂವರೆ ಲಕ್ಷ ಎಕರೆಯಲ್ಲಿ ಬೆಳೆ:
ಜಿಲ್ಲೆಯ ಐದು ತಾಲೂಕುಗಳ ಪೈಕಿ ಬಳ್ಳಾರಿ, ಸಿರುಗುಪ್ಪ, ಕಂಪ್ಲಿ ಹಾಗೂ ಕುರುಗೋಡು ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಒಣ ಮೆಣಸಿನಕಾಯಿ ಬೆಳೆಯಲಾಗುತ್ತಿದೆ. ಭತ್ತದ ಪ್ರಮಾಣದಷ್ಟೇ ಬೆಳೆಯಲಾಗುತ್ತಿದ್ದು, ಸುಮಾರು 4.50 ಲಕ್ಷ ಎಕರೆ ಪ್ರದೇಶದಲ್ಲಿ ಪ್ರತಿವರ್ಷವೂ ಮೆಣಸಿನಕಾಯಿ ಬೆಳೆಯಲಾಗುತ್ತಿದೆಯಾದರೂ ವೈಜ್ಞಾನಿಕ ಬೆಲೆ ಸಿಗದೆ ರೈತರು ಆರ್ಥಿಕ ನಷ್ಟಕ್ಕೊಳಗಾಗುತ್ತಿದ್ದಾರೆ.ಎಲ್ಲೆಲ್ಲೂ ನಮ್ಮವ್ರೆ ಕಾಣ್ತಾರೆ:
ಮೂರು ವರ್ಷಗಳಿಂದ ಬೆಳೆನಷ್ಟಗೊಂಡು ಹೊಟ್ಟೆಪಾಡಿಗಾಗಿ ಕುಟುಂಬ ಸದಸ್ಯರೊಂದಿಗೆ ಬೆಂಗಳೂರಿಗೆ ದುಡಿಯಲು ಬಂದಿರುವೆ ಎನ್ನುತ್ತಾರೆ ಬಳ್ಳಾರಿ ತಾಲೂಕಿನ ಡಿ. ಕಗ್ಗಲ್ ಗ್ರಾಮದ ಸಣ್ಣ ಮೌಲಾಸಾಬ್.ನಾನೊಬ್ಬನೇ ಕುಟುಂಬ ಕರ್ಕೊಂಡು ಬಂದೀನಿ ಅಂದ್ಕೊಡಿದ್ದೆ. ಬೆಂಗಳೂರಿನಲ್ಲಿ ಎಲ್ಲಿ ನೋಡಿದ್ರೂ ನಮ್ಮ ಜಿಲ್ಲೆಯವ್ರು ಹಾಗೂ ನಮ್ಮೂರಿನ ಸುತ್ತಮುತ್ಲ ಜನ್ರೇ ದುಡಿಯಾಕ ಬಂದಿದ್ದಾರೆ. ಮೆಣಸಿನಕಾಯಿ ಬೆಳೆ ನಷ್ಟವಾಗಿ ಬೆಂಗ್ಳೂರಿಗೆ ಬಂದೀವಿ ಎಂದು ಹೇಳ್ತಾ ಇದ್ರು. ಬಳ್ಳಾರಿ ಜಿಲ್ಲೆಯ ಸಾವಿರಾರು ಜನ ಬೆಂಗಳೂರು, ಹೈದರಾಬಾದ್‌ಗೆ ದುಡಿಯಾಕ ಹೋಗ್ಯಾರ. ನಾವೂ ಓದೋ ಮಕ್ಳ ಕರ್ಕೊಂಡು ದುಡಿಯಾಕ ಬಂದೀವಿ ಎಂದು ಮೌಲಾಸಾಬ್ ತಿಳಿಸಿದರು.
ಮೆಣಸಿನಕಾಯಿ ಬೆಳೆನಷ್ಟದಿಂದ ಸಾಕಷ್ಟು ರೈತರು ಬೆಂಗಳೂರು ಸೇರಿದಂತೆ ಬೇರೆ ಬೇರೆ ನಗರಗಳಿಗೆ ವಲಸೆ ಹೋಗಿರೋದು ನಿಜ. ಸಾಲ ಮಾಡಿಕೊಂಡಿರೋ ರೈತರ ಕಷ್ಟ ಕೇಳೋರಿಲ್ಲ. ಪ್ರತಿವರ್ಷವೂ ರೈತರು ಬೆಳೆನಷ್ಟದಲ್ಲಿಯೇ ಒದ್ದಾಡುವಂತಾಗಿದೆ. ಹೀಗಾಗಿಯೇ ಕೆಲ ರೈತರು ಕೃಷಿ ಬಿಟ್ಟು ಬೇರೆ ಕೆಲಸಗಳತ್ತ ಮುಖವೊಡ್ಡಲಾರಂಭಿಸಿದ್ದಾರೆ. ಮುಂದಿನ ದಿನಗಳಲ್ಲಿ ಕೃಷಿ ಸಮಸ್ಯೆ ನೀಗಿಸುವುದೇ ದೊಡ್ಡ ಸವಾಲಾಗಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಮಾಧವರೆಡ್ಡಿ ಕರೂರು ತಿಳಿಸಿದ್ದಾರೆ.