ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮೀಸಲಾತಿ ವಿರೋಧಿ ಎಂಬಂತೆ ಬಿಂಬಿಸುತ್ತಿರುವ ಬಿಜೆಪಿ- ಜೆಡಿಎಸ್ ಪಕ್ಷಗಳ ನಡೆಯನ್ನು ಖಂಡಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಡಾ.ಡಿ.ಜಿ.ಸಾಗರ ಬಣದಿಂದ ನಗರದ ಡಾ.ಅಂಬೇಡ್ಕರ್ ವೃತ್ತದಿಂದ ಡಿಸಿ ಕಚೇರಿಯವರೆಗೆ ಪ್ರತಿಭಟನೆ ನಡೆಸಲಾಯಿತು.ಒಂದು ದೇಶ ಒಂದು ಚುನಾವಣೆಯ ಜಾರಿಗೆ ನಿರ್ಧರಿಸಿದ ಕೇಂದ್ರ ಸರ್ಕಾರ ತನ್ನ ನಿರ್ಧಾರ ವಾಪಸ್ ಪಡೆಯಬೇಕು ಹಾಗೂ ಶಾಸಕ ಮುನಿರತ್ನ ಜಾತಿನಿಂದನೆ, ಜೀವ ಬೆದರಿಕೆ, ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾರೆ ಎನ್ನಲಾದ ಇವರನ್ನು ಕಠಿಣ ಶಿಕ್ಷಕೆ ಗುರಿ ಪಡಿಸಬೇಕೆಂದು ಒತ್ತಾಯಿಸಿ ಧರಣಿ ನಡೆಸಿ ಅಪರ ಜಿಲ್ಲಾಧಿಕಾರಿ ಸೋಮನಿಂಗ ಗೆಣ್ಣೂರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸಿದ್ದು ರಾಯನ್ನವರ ಮಾತನಾಡಿ, ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿರುವ ಒಂದು ದೇಶ ಒಂದು ಚುನಾವಣೆ ಪ್ರಸ್ತಾಪ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ. ಇದನ್ನು ಅನುಷ್ಠಾನ ಮಾಡುವುದಕ್ಕೆ ಸಾಧ್ಯವೇ ಇಲ್ಲ. ಒಂದು ದೇಶ ಚುನಾವಣೆಯ ವ್ಯವಸ್ಥೆಯ ಸಂಪೂರ್ಣವಾಗಿ ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಲೋಕಸಭೆ ಇಲ್ಲವೇ ವಿಧಾನಸಭೆಯಲ್ಲಿ ಅಡಳಿತಾರೂಢ ಪಕ್ಷ ವಿಶ್ವಾಸ ಮತ ಗಳಿಸಲು ಸೋತರೇ ಎದುರಾಗುವ ಬಿಕ್ಕಟ್ಟಿಗೆ ಪ್ರಸ್ತಾಪದಲ್ಲಿ ಪರಿಹಾರವಿಲ್ಲ. ಇಂತಹ ಸಂದರ್ಭದಲಿ ಮಧ್ಯಂತರ ಚುನಾವಣೆಯೊಂದೇ ಪರಿಹಾರವಾಗಿದೆ ಎಂದರು.ಇಡೀ ದೇಶದಲ್ಲಿ ಒಂದೇ ಬಾರಿ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳನ್ನು ನಡೆಸುವ ಶಕ್ತಿ ಸಾಮರ್ಥ್ಯ ನಮ್ಮ ಈಗ ಇರುವ ಚುನಾವಣೆ ಆಯೋಗಕ್ಕೆ ಇಲ್ಲ. ನಮ್ಮ ಚುನಾವಣಾ ವ್ಯವಸ್ಥೆಯನ್ನು ದುಪ್ಪಟ್ಟು ಪ್ರಮಾಣದಲಿ ವಿಸ್ತರಿಸಬೇಕಾಗುತ್ತದೆ. ಇವೆಲ್ಲವೂ ಅವಸರದಿಂದ ಮಾಡುವ ಕೆಲಸ ಅಲ್ಲ. ಹೊಸ ಚುನಾವಣಾ ವ್ಯವಸ್ಥೆ ಜಾರಿಗೆ ಬರಬೇಕಾದರೇ ಮೊದಲು ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ಮಾಡಬೇಕಾಗುತ್ತದೆ. ಇದರ ಜತೆಗೆ ಸಂವಿಧಾನದ ಕೈ ತಿದ್ದುಪಡಿ ತರಬೇಕಾಗುತ್ತದೆ. ಇವೆಲ್ಲವೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರಕ್ಕೆ ಗೊತ್ತಿದ್ದರೂ ಕೇವಲ ಜನರಲ್ಲಿ ಗೊಂದಲವನ್ನು ಹುಟ್ಟು ಹಾಕಿ ತಮ್ಮ ವೈಪಲ್ಯವನ್ನು ಮುಚ್ಚಿ ಹಾಕಲು ಈ ಕೆಲಸವನ್ನು ಮಾಡಲಾಗಿದೆ. ರಾಷ್ಟ್ರಪತಿಗಳು ಇದನ್ನೆಲ್ಲವನ್ನು ಗಮನ ಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಡಿಎಸ್‌ಎಫ್ ಜಿಲ್ಲಾ ಸಂಚಾಲಕ ವೈ.ಸಿ.ಮಯೂರ ಮಾತನಾಡಿ, ಒಕ್ಕಲಿಗ ಮತ್ತು ದಲಿತ ಸಮುದಾಯಗಳನ್ನು ಅವಹೇಳನ ಮಾಡುವ ರೀತಿಯಲ್ಲಿ ಮತ್ತು ಮಹಿಳೆ ಮೇಲೆ ಅತ್ಯಾಚಾರ ಕೇಸ್ ಎದುರಿಸುತ್ತಿರುವ ಶಾಸಕ ಮುನಿರತ್ನ ಈಗ ಜೈಲಿನಲ್ಲಿದ್ದಾರೆ. ಇವರ ಮೇಲಿನ ಗಂಭೀರ ಆರೋಪಗಳನ್ನು ತನಿಖೆ ಮಾಡುವುದಕ್ಕೆ ವಿಶೇಷ ತನಿಖಾ ತಂಡ ರಚಿಸಿರುವುದು ಸರ್ಕಾರದ ನಿರ್ಧಾರ ಸಮಿತಿಯು ಸ್ವಾಗತಿಸುತ್ತದೆ ಎಂದರು.ಈ ಸಂದರ್ಭದಲ್ಲಿ ಪ್ರಶಾಂತ ತೊರವಿ, ಅರುಣ ಗವಾರಿ, ಬಾಬು ಗುಡಮಿ, ಶರಣು ಚಲವಾದಿ, ನೀಲಕಂಠ ಹೊಸಮನಿ, ಜೈಭೀಮ ಕುಚಬಾಳ, ಯಮನು ಬೆರನಳ್ಳಿ, ಶಿವು ಗಂಗೋರ, ಅನಿಲ ಹಚ್ಚಾಳ, ಜೈಭೀಮ ತಳಕೇರಿ, ಸುನೀಲ ನಾಗಠಾಣ, ಜಾನು ಗುಡಿಮನಿ, ಜೈಭೀಮ ನಾಯ್ಕೋಡಿ ಮತ್ತಿತರರು ಉಪಸ್ಥಿತರಿದ್ದರು.