ಸಾರಾಂಶ
25 ಹಾಗೂ 26 ರಂದು ಸಭೆ । ಪ್ರವಾಸಿ ಮಂದಿರದಲ್ಲಿ ಕರ ಪತ್ರ ಬಿಡುಗಡೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಹರಿಹರದಲ್ಲಿ ಜನವರಿ 25 ಹಾಗೂ 26 ರಂದು ನಡೆಯಲಿರುವ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಮಟ್ಟದ ತರಬೇತಿ ಕಾರ್ಯಾಗಾರ ಹಾಗೂ ಸರ್ವ ಸದಸ್ಯರ ಸಭೆಯಲ್ಲಿ ರಾಜ್ಯ ಸಂಚಾಲಕರ ಆಯ್ಕೆ ನಡೆಯಲಿದೆ ಎಂದು ದಸಂಸ ರಾಜ್ಯ ಸಂಘಟನಾ ಸಂಚಾಲಕ ತರೀಕೆರೆ ಎನ್.ವೆಂಟಕೇಶ್ ತಿಳಿಸಿದರು.
ಭಾನುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜ. 25, 26 ರಂದು ಹರಿಹರದಲ್ಲಿ ನಡೆಯಲಿರುವ ದಲಿತ ಸಂಘರ್ಷ ಸಮಿತಿ ರಾಜ್ಯ ಮಟ್ಟದ ತರಬೇತಿ ಕಾರ್ಯಾಗಾರ ಹಾಗೂ ಸರ್ವ ಸದಸ್ಯರ ಸಭೆ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿ, ಕರ್ನಾಟಕದಲ್ಲಿ ಅನೇಕ ದಲಿತ ಸಂಘರ್ಷ ಸಮಿತಿಗಳು ಸ್ಥಾಪಿತವಾಗಿವೆ. ಕೆಲವು ಸಂಘಟನೆ ಕೇವಲ ಲೆಟರ್‌ಹೆಡ್ ಸಂಘಟನೆಗಳಾಗಿವೆ. ಮಹಾತ್ಮ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿ ಇಡೀ ರಾಜ್ಯದಲ್ಲಿ ಅತ್ಯಂತ ಪ್ರಬಲವಾಗಿದೆ. ಪಾಂಡುರಂಗ ಸ್ವಾಮಿ ನೇತೃತ್ವದ ಈ ಸಂಘಟನೆ ರಾಜ್ಯದಾದ್ಯಂತ ಶೋಷಿತರ ಧ್ವನಿಯಾಗಿ ಹೋರಾಡುತ್ತಿದೆ ಎಂದರು.ವಸತಿ ಶಾಲೆಗಳ ಪರವಾಗಿ ಹೋರಾಟ ಮಾಡಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೋಬಳಿಗೊಂದು ವಸತಿ ಶಾಲೆ ಮಂಜೂರು ಮಾಡಿದೆ. ಭೂಮಿಗಾಗಿ ಹೋರಾಟ ಪ್ರಾರಂಭಿಸಿದ್ದೇವೆ. ಕೊಡಗಿನಲ್ಲಿ ಆದಿವಾಸಿ, ಬುಡಕಟ್ಟು ಜನಾಂಗದವರು, ಕಾಫಿ ಎಸ್ಟೇಟ್‌ಗಳಲ್ಲಿ ಗುಲಾಮರಂತೆ ಬದುಕುತ್ತಿರುವ ಕೂಲಿ ಕಾರ್ಮಿಕರಿಗೆ ಸ್ವಂತ ಮನೆ ನಿರ್ಮಾಣಕ್ಕೆ ನಿವೇಶನ ಮತ್ತು ಜಮೀನು ಮಂಜೂರು ಮಾಡಿಕೊಡಬೇಕೆಂದು ಹೋರಾಟ ಮಾಡಿ ಸುಮಾರು 15 ಕಿ.ಮೀ ನಷ್ಟು ಕಾಲ್ನಡಿಗೆ ಜಾಥಾ ಮಾಡಿ, ಪೊನ್ನಂಪೇಟೆ ತಹಸೀಲ್ದಾರ್ ಗೆ ಮನವಿ ಸಲ್ಲಿಸಿದ್ದೇವೆ. ಈ ಮೂಲಕ ಭೂಮಿಗಾಗಿ ಹೋರಾಟ ಕೊಡಗಿನಿಂದ ಪ್ರಾರಂಭಿಸಿ ದ್ದೇವೆ. ನಾಯಕತ್ವದ ಬದಲಾವಣೆಗೆ ದಾವಣಗೆರೆ ಜಿಲ್ಲೆ ಹರಿಹರದಲ್ಲಿ ರಾಜ್ಯ ಮಟ್ಟದ ತರಬೇತಿ ಕಾರ್ಯಾಗಾರ ಹಾಗೂ ಸರ್ವ ಸದಸ್ಯರ ಸಭೆ ಏರ್ಪಡಿಸಲಾಗಿದೆ. ಈ ಸಭೆಗೆ ರಾಜ್ಯದ ಎಲ್ಲಾ ಜಿಲ್ಲೆಗಳ ಡಿಎಸ್‌ಎಸ್ ಸಂಘಟನೆ ಜಿಲ್ಲೆ, ತಾಲೂಕು, ಗ್ರಾಮ ಮಟ್ಟದ ಹಾಗೂ ಹೋಬಳಿ ಮಟ್ಟದ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ಸಂಘಟನೆ ರಾಜ್ಯ ಸಾರಥಿಯನ್ನು ಮುಂದಿನ ಮೂರು ವರ್ಷದ ಅವಧಿಗೆ ಆಯ್ಕೆ ಮಾಡಲಾಗುತ್ತದೆ ಎಂದರು.ಈ ಸಂದರ್ಭದಲ್ಲಿ ದಸಂಸ ರಾಜ್ಯ ಮಹಿಳಾ ಒಕ್ಕೂಟದ ರಾಜ್ಯ ಸಂಚಾಲಕಿ ಎಂ.ವಿ.ಭವಾನಿ, ಜಿಲ್ಲಾ ಸಂಚಾಲಕ ಎನ್.ಆರ್. ಪುರದ ರಾಜೇಶ್, ಜಿಲ್ಲಾ ದೌರ್ಜನ್ಯ ಸಮಿತಿ ಸದಸ್ಯ ಶೆಟ್ಟಿಕೊಪ್ಪ ಎಂ.ಮಹೇಶ್, ವಾಲ್ಮೀಕಿ ನಾಯಕ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ್, ಪದಾಧಿಕಾರಿ ಅಬ್ದುಲ್ ರೆಹಮಾನ್ ಇದ್ದರು. -- ಬಾಕ್ಸ್ --
ಸಂಸದರಿಗೆ ಜಿಲ್ಲೆ ಜನರ ಬಗ್ಗೆ ಕಾಳಜಿಯೇ ಇಲ್ಲತಾಲೂಕಿನಲ್ಲಿ ಕಾಡಾನೆಗಳ ಹಾವಳಿ ಜಾಸ್ತಿಯಾಗಿದೆ. ಈಗಾಗಲೇ ಕಾಡಾನೆ ದಾಳಿಯಿಂದ ಇಬ್ಬರು ರೈತರು ಮೃತಪಟ್ಟಿ ದ್ದಾರೆ. ಅಪಾರ ಬೆಳೆ ಹಾನಿ ಸಂಭವಿಸಿದೆ. ಆದರೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದರು ಮಾತ್ರ ಇತ್ತ ಸುಳಿದಿಲ್ಲ. ಮೃತರ ಮನೆಗೂ ಭೇಟಿ ನೀಡಿಲ್ಲ. ಕಾಡಾನೆ ದಾಳಿ ತಡೆಗೆ ಕ್ರಮವಹಿಸಲು ಇವರಿಗೆ ಅಧಿಕಾರವಿಲ್ಲವೆ..? ಇವರಿಗೆ ಜಿಲ್ಲೆಯ ಹಾಗೂ ಕ್ಷೇತ್ರದ ಜನರ ಬಗ್ಗೆ ಕಾಳಜಿಯೇ ಇಲ್ಲ ಎಂದು ಸಾಬೀತು ಮಾಡಿದ್ದಾರೆ. ಇಂತಹ ಸಂಸದರೇ ನಮ್ಮ ಜಿಲ್ಲೆಗೆ ಸಿಗುತ್ತಿರುವುದು ನಮ್ಮ ದುರ್ದೈವ ಡಿಎಸ್ಎಸ್ ರಾಜ್ಯ ಸಂಘಟನಾ ಸಂಚಾಲಕ ವೆಂಕಟೇಶ್ ಅಸಮಾಧಾನ ವ್ಯಕ್ತಪಡಿಸಿದರು.