ವಿದ್ಯಾವಂತ ಹುಡುಗಿಯರು ತಮ್ಮ ಸಾಧನೆಯ ಗುರಿ ತುಲುಪಿದ ನಂತರ ಮದುವೆಯಾಗಿ. ಎಲ್ಲರಿಗೂ ಅಧಿಕಾರ ಸಿಗುವುದಿಲ್ಲ, ಇರುವ ಸಮಯವನ್ನು ಸದುಪಯೋಗಪಡಿಸಿಕೊಂಡು ಸಾಧನೆ ಮಾಡಿದವರಿಗೆ ಮಾತ್ರ ಅಧಿಕಾರ, ಗೌರವ ಲಭಿಸುತ್ತದೆ. ಅಧಿಕಾರ ಎಂದರೆ ಸೇವೆ ಮಾತ್ರ. ಸೇವೆ ಮಾಡುವ ಅವಕಾಶ ಎಲ್ಲರಿಗೂ ಲಭಿಸಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಹೆಣ್ಣು ಭ್ರೂಣ ಹತ್ಯೆಯಿಂದಾಗಿ ಗಂಡು ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ ಎಂದು ಮಹಿಳಾ ಆಯೋಗಕ್ಕೆ ದೂರುಗಳು ಬಂದಿವೆ. ಅಲ್ಲದೇ, ಗಂಡು ಮಕ್ಕಳು ನನ್ನ ಬಳಿ ಹೇಳಿಕೊಂಡು ಅಳುತ್ತಾರೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಕಳವಳ ವ್ಯಕ್ತಪಡಿಸಿದರು.

ನಗರದ ಬಾಲಭವನದ ಆವರಣದಲ್ಲಿ ಭಾರತ ಸೇವಾದಳ ಜಿಲ್ಲಾ ಘಟಕ, ಸೆಂಟ್‌ಜಾನ್ ಆಂಬುಲೆನ್ಸ್ ಇಂಡಿಯಾ ಜಿಲ್ಲಾ ಶಾಖೆ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಡಾ. ನಾ.ಸು.ಹರ್ಡೀಕರ್ ಪ್ರಶಸ್ತಿ ಪ್ರದಾನ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯ ನೆಲ ಸಾಧನೆಯ ಕ್ಷೇತ್ರವಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದರೂ ಹೆಣ್ಣು ಭ್ರೂಣ ಹತ್ಯೆ ಹೆಚ್ಚು ನಡೆಯುತ್ತಿರುವುದು ಬೇಸರದ ಸಂಗತಿ ಎಂದರು.

ವಿದ್ಯಾವಂತ ಹುಡುಗಿಯರು ತಮ್ಮ ಸಾಧನೆಯ ಗುರಿ ತುಲುಪಿದ ನಂತರ ಮದುವೆಯಾಗಿ. ಎಲ್ಲರಿಗೂ ಅಧಿಕಾರ ಸಿಗುವುದಿಲ್ಲ, ಇರುವ ಸಮಯವನ್ನು ಸದುಪಯೋಗಪಡಿಸಿಕೊಂಡು ಸಾಧನೆ ಮಾಡಿದವರಿಗೆ ಮಾತ್ರ ಅಧಿಕಾರ, ಗೌರವ ಲಭಿಸುತ್ತದೆ. ಅಧಿಕಾರ ಎಂದರೆ ಸೇವೆ ಮಾತ್ರ. ಸೇವೆ ಮಾಡುವ ಅವಕಾಶ ಎಲ್ಲರಿಗೂ ಲಭಿಸಲ್ಲ ಎಂದರು.

ಸಾರ್ವಜನಿಕ ಜೀವನದಲ್ಲಿ ಒಬ್ಬ ಹೆಣ್ಣು ಮಗಳು ಬೆಳೆಯಬೇಕು ಎಂದರೆ ಕಷ್ಟ. ಅದೂ ರಾಜಕಾರಣದಲ್ಲಿ ಬಹಳ ಕಷ್ಟ, ಹಣ ಬಲ ತೋಳ್ಬಲ, ತಂದೆ ಎಂಎಲ್‌ಎ, ಎಂಪಿ, ಮುಖ್ಯಮಂತ್ರಿನೋ ಆಗಿರಬೇಕಿರುತ್ತದೆ. ಏನೂ ಇಲ್ಲದೆ ಬೆಳೆಯಬೇಕು ಎಂದರೆ ಪರಿಶ್ರಮ, ಪ್ರತಿಭೆ, ಉತ್ತಮ ಶಿಕ್ಷಣ ಇರಬೇಕು ಎಂದು ಸಲಹೆ ನೀಡಿದರು.

ಭಾರತ ಸೇವಾದಳದ ಜಿಲ್ಲಾ ಕಾರ್ಯದರ್ಶಿ ಜಿ.ವಿ.ನಾಗರಾಜು ಮಾತನಾಡಿ, ಮಂಡ್ಯ ಜಿಲ್ಲೆಯಲ್ಲಿ ಅತ್ಯುತ್ತಮ ಶಿಕ್ಷಣವನ್ನು ನಮ್ಮ ಮಕ್ಕಳು ಪಡೆಯುತ್ತಿದ್ದಾರೆ. ನಮ್ಮ ಎರಡು ಸಂಘಟನೆಗಳ ಮುಖಾಂತರ ಶೇ.೯೦ರಷ್ಟು ಅಂಕ ಪಡೆದ ಪ್ರತಿಭಾವಂತರಿಗೆ ನಗದು ಪುರಸ್ಕಾರ ಮತ್ತು ಪ್ರಥಮ ಸ್ಥಾನ ಪಡೆದ ಪ್ರತಿಭಾವಂತರಿಗೂ ಪುರಸ್ಕಾರ ನೀಡುತ್ತಿದ್ದೇವೆ ಎಂದರು.

೧ ಸಾವಿರ ಪ್ರತಿಭಾವಂತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಕಳೆದ ವರ್ಷ ೪೫೦ ಮಂದಿಗೆ ಪುರಸ್ಕಾರ ನೀಡಿದ್ದೇವೆ, ಪ್ರತಿ ವರ್ಷ ಹೆಚ್ಚಾಗುತ್ತಿದ್ದು, ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡುತ್ತಿದ್ದಾರೆ ಎನ್ನುವುದು ತಿಳಿಯುತ್ತದೆ. ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಅಂಕ ಗಳಿಸಿದ್ದಾರೆ ಎಂದರು.

ಇದೇ ವೇಳೆ ವಿವಿಧ ಕ್ಷೇತ್ರಗಳ ಸಾಧಕರಾದ ಸ್ವಾತಂತ್ರ್ಯ ಹೋರಾಟಗಾರ ಕೆ.ಟಿ.ಚಂದು ಮದ್ದೂರು, ಭಾರತ ಸೇವಾದಳ ಪ್ರಧಾನ ಕಾರ್ಯದರ್ಶಿ ಕಮಲ್ ಕುಮಾರ್, ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಅವರಿಗೆ ಡಾ. ನಾ.ಸು. ಹರ್ಡೀಕರ್ ಪ್ರಶಸ್ತಿ ಪ್ರದಾನ ಮಾಡಿ ಗೌರವಿಲಾಯಿತು. ಸಮಾಜ ಸೇವಕ ಡಾ.ವೈ.ಎಸ್.ರಾಮರಾವ್ ಪ್ರಶಸ್ತಿಯನ್ನು ಡಾ.ಪ್ರಕಾಶ್‌ಗುಪ್ತ, ಶಿವಶಂಕರ್, ಡಾ. ಎಂ.ಜಿ.ಆರ್. ಅರಸ್ ಅವರಿಗೆ ನೀಡಿ ಅಭಿನಂದಿಸಲಾಯಿತು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಮತ್ತು ಪ್ರಮಾಣಪತ್ರದೊಂದಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯ ನಟ ಶಂಕರ್ ಅಶ್ವಥ್, ಭಾರತ ಸೇವಾದಳ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಸಿ.ಶಿವಾನಂದ, ಮಹಿಳಾ ಇಲಾಖೆಯ ಉಪನಿರ್ದೇಶಕಿ ಗೀತಾಲಕ್ಷ್ಮೀ, ಅಂಗವಿಕಲರ ಕಲ್ಯಾಣಾಧಿಕಾರಿ ಕೋಮಲ್ ಕುಮಾರ್, ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ವಿನಯ್‌ಕುಮಾರ್, ಸೇವಾದಳದ ಜಿಲ್ಲಾ ಖಜಾಂಚಿ ಶಿವಪ್ರಕಾಶ್‌ಬಾಬು, ಎಸ್‌ಜೆಎ ಶಾಖೆಯ ಜಿಲ್ಲಾ ಖಜಾಂಚಿ ಸಜ್ಜನ್ ಕೊಠಾರಿ, ಜಿಲ್ಲಾ ಸಂಘಟಕ ಸಿ.ಎಸ್.ಗಣೇಶ್, ಜಿಲ್ಲಾ ಉಪಾಧ್ಯಕ್ಷ ಕೆ.ಎಂ.ಕೆ.ರಾಜು, ಗಾಯಕ ನಾರಾಯಸ್ವಾಮಿ, ಶಿಕ್ಷಕಿ ಉಷಾರಾಣಿ ಭಾಗವಹಿಸಿದ್ದರು.