ಸಂಡೂರಲ್ಲಿ ಧಾರಾಕಾರ ಮಳೆಗೆ ಕೆರೆ, ಹಳ್ಳ-ಕೊಳ್ಳ ಭರ್ತಿ

| Published : Oct 06 2024, 01:21 AM IST

ಸಂಡೂರಲ್ಲಿ ಧಾರಾಕಾರ ಮಳೆಗೆ ಕೆರೆ, ಹಳ್ಳ-ಕೊಳ್ಳ ಭರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಕೆಲವೆಡೆ ಮನೆಗಳು, ಹೊಲಗಳಿಗೆ ಮಳೆ ನೀರು ನುಗ್ಗಿ ಬೆಳೆನಷ್ಟಕ್ಕೆ ಕಾರಣವಾಗಿದೆ.

ಸಂಡೂರು: ತಾಲೂಕಿನಲ್ಲಿ ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳಗಿನವರೆಗೆ ಸುರಿದ ಮಳೆ ಇಲ್ಲಿನ ಹಲವು ಹಳ್ಳ-ಕೊಳ್ಳಗಳನ್ನು, ಕೆರೆಗಳನ್ನು ತುಂಬಿಸಿರುವುದಲ್ಲದೆ, ಕೆಲವೆಡೆ ಮನೆಗಳು, ಹೊಲಗಳಿಗೆ ಮಳೆ ನೀರು ನುಗ್ಗಿ ಬೆಳೆನಷ್ಟಕ್ಕೆ ಕಾರಣವಾಗಿದೆ.ಸಂಡೂರು, ಚೋರುನೂರು, ಕುರೆಕುಪ್ಪ ಹಾಗೂ ವಿಠಲಾಪುರ ಮಳೆ ಮಾಪನ ಕೇಂದ್ರಗಳಲ್ಲಿ ಕ್ರಮವಾಗಿ ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳಗಿನವರೆಗೆ ಕ್ರಮವಾಗಿ ೧೫೧.೮ ಮಿ.ಮೀ. ೮೪.೨ ಮಿ.ಮೀ, ೬೩ ಮಿ.ಮೀ ಹಾಗೂ ೫೮.೨ ಮಿ.ಮೀ ಮಳೆಯಾದ ವರದಿಯಾಗಿದೆ.

ತುಂಬಿದ ನಾರಿಹಳ್ಳ ಜಲಾಶಯ: ಉತ್ತಮ ಮಳೆಯಿಂದಾಗಿ ಸಂಡೂರಿನ ಜೀವನಾಡಿಯಾಗಿರುವ ನಾರಿಹಳ್ಳ ಜಲಾಶಯವು ಭರ್ತಿಯಾಗಿದೆ. ಜಲಾಶಯ ಭರ್ತಿಯಾಗಿರುವ ಹಿನ್ನೆಲೆ ಮತ್ತು ಒಳಹರಿವು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜಲಾಶಯದ ಐದು ಗೇಟ್‌ಗಳ ಪೈಕಿ ನಾಲ್ಕು ಗೇಟ್‌ಗಳ ಮೂಲಕ ಶನಿವಾರ ಒಟ್ಟು ೨೯೧೯ ಕ್ಯುಸೆಕ್ ನೀರನ್ನು ಹೊರ ಬಿಡಲಾಗಿದೆ.

ಅಪಾರ ಪ್ರಮಾಣದ ನೀರನ್ನು ಜಲಾಶಯದಿಂದ ಹೊರಬಿಡುತ್ತಿರುವ ಕಾರಣ, ಜಲಾಶಯದ ಕೆಳಭಾಗದಲ್ಲಿ ನಾರಿಹಳ್ಳದ ಪಾತ್ರದಲ್ಲಿನ ಬಸಾಪುರ, ವಡ್ಡು, ಕುರೆಕುಪ್ಪ ಗ್ರಾಮಗಳಲ್ಲಿನ ಹೊಲ, ಗದ್ದೆ ಹಾಗೂ ಊರಲ್ಲಿ ನೀರು ನುಗ್ಗಿದೆ. ಮೆಕ್ಕೆಜೊಳ, ಹೂಕೋಸು, ಮೆಣಸಿನಕಾಯಿ ಮುಂತಾದ ಬೆಳೆಗಳಿಗೆ ಹಾನಿಯಾಗಿದೆ.

ಮನೆಗೆ ಹಾನಿ: ಚೋರುನೂರು ಹೋಬಳಿಯ ಅಂಕಮನಹಾಳ್ ಗ್ರಾಮದ ನಿವಾಸಿ ಓಬಯ್ಯನವರ ಮನೆಯು ಮಳೆಯಿಂದಾಗಿ ಕುಸಿದಿದೆ. ಹರಿಶಂಕರ, ನಂದಿಹಳ್ಳಿ ಬಳಿಯಲ್ಲಿ ಸ್ಟಾಕ್ ಯಾರ್ಡ್ಗಳ ಬಳಿಯಲ್ಲಿ ನಿಲ್ಲಿಸಿದ್ದ ಅದಿರು ಸಾಗಣೆ ಲಾರಿಗಳು ಬಹುತೇಕ ನೀರು ಮತ್ತು ಮಣ್ಣಿನಿಂದ ಮುಚ್ಚಿಹೋಗಿವೆ.

ತಾಲೂಕಿನ ಬಂಡ್ರಿ, ಜಿಗೇನಹಳ್ಳಿ, ಓಬಳಾಪುರ ಕೆರೆಗಳು ಕೋಡಿ ಬಿದ್ದಿವೆ. ಬೆಳೆ ಹಾನಿಯ ಸುದ್ದಿ ತಿಳಿದು ಗಂಗಾವತಿಯ ಶಾಸಕ ಜಿ. ಜನಾರ್ದನ ರೆಡ್ಡಿ ಹಾಗೂ ಮುಖಂಡ ಕೆ.ಎಸ್. ದಿವಾಕರ ಬಸಾಪುರ ಹಾಗೂ ಕುರೆಕುಪ್ಪ ಗ್ರಾಮಗಳಿಗೆ ತೆರಳಿ, ರೈತರಿಂದ ಬೆಳೆ ನಷ್ಟದ ಮಾಹಿತಿ ಪಡೆದರು.

ಬೆಳೆ ನಷ್ಟ: ಕುರೆಕುಪ್ಪ ಗ್ರಾಮದ ರೈತ ಹೊಸಗೇರಪ್ಪ ಕನ್ನಡಪ್ರಭದೊಂದಿಗೆ ಮಾತನಾಡಿ, ನಾರಿಹಳ್ಳ ಜಲಾಶಯದಿಂದ ನೀರನ್ನು ಹೊರ ಬಿಡುತ್ತಿರುವುದರಿಂದ ಹಳ್ಳದ ಪಾತ್ರದಲ್ಲಿರುವ ಕುರೆಕುಪ್ಪ ಗ್ರಾಮದಲ್ಲಿನ ಹೊಲ ಮತ್ತು ಮನೆಗಳಿಗೆ ನೀರು ನುಗ್ಗಿದೆ. ನಾನು ಎರಡು ಎಕರೆಯಲ್ಲಿ ಹೂಕೋಸು, ೨ ಎಕರೆ ಪ್ರದೇಶದಲ್ಲಿ ಮೆಣಸಿನಕಾಯಿ, ಮೆಕ್ಕೆಜೋಳ ಬೆಳೆದಿದ್ದೆ. ಹೂಕೋಸು ಹಾಗೂ ಮೆಣಸಿನ ಕಾಯಿ ಗಿಡಗಳು ಹೂಬಿಟ್ಟು ಫಲ ಕೊಡುವ ಹಂತದಲ್ಲಿದ್ದವು. ಹಬ್ಬದ ನಂತರ ಮೆಕ್ಕೆಜೋಳ ಕಟಾವು ಮಾಡುವುದಿತ್ತು. ಇದೀಗ ಜಲಾಶಯದ ನೀರು ಹೊಲಗಳಲ್ಲಿ ನಿಂತು ಬೆಳೆ ಕಾಣದಂತಾಗಿದೆ. ಸಂಪೂರ್ಣ ಬೆಳೆ ನಷ್ಟವಾಗಿದೆ. ನಮ್ಮ ಗ್ರಾಮದಲ್ಲಿ ಸುಮಾರು ೧೫೦-೧೮೦ ಎಕರೆಯಷ್ಟು ಬೆಳೆ ಸಂಪೂರ್ಣ ನಾಶವಾಗಿದೆ ಎಂದರು.

ಭುಜಂಗನಗರದ ರೈತ ಎಂ. ಯರಿಸ್ವಾಮಿ ಮಾತನಾಡಿ, ನಾನು ೩ ೧/೨ ಎಕರೆ ಪ್ರದೇಶದಲ್ಲಿ ಅಡಿಕೆಯೊಂದಿಗೆ ಮೆಕ್ಕೆಜೋಳ ಬೆಳೆದಿದ್ದೆ. ಶುಕ್ರವಾರ ಸುರಿದ ಭಾರಿ ಮಳೆಯಿಂದಾಗಿ ಹಳ್ಳದ ನೀರು ಮತ್ತು ಮಣ್ಣು ಹೊಲದಲ್ಲಿ ಹರಿದು ಮೆಕ್ಕೆಜೋಳ ಸಂಪೂರ್ಣ ನೆಲಕ್ಕೊರಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದು ಅಳಲು ತೋಡಿಕೊಂಡರು.

ಸಂಡೂರು ಬಳಿಯ ಲಕ್ಷ್ಮೀಪುರದ ಬಳಿಯಲ್ಲಿ ಮೈದುಂಬಿ ಹರಿಯುತ್ತಿದ್ದ ನಾರಿಹಳ್ಳವನ್ನು ನೋಡಲು ಸಂಡೂರು ಹಾಗೂ ಲಕ್ಷ್ಮೀಪುರ ಜನತೆ ಛತ್ರಿಗಳನ್ನು ಹಿಡಿದು ಗುಂಪುಗುಂಪಾಗಿ ಸೇರಿದ್ದ ದೃಶ್ಯ ಕಂಡು ಬಂದಿತು.

ಶುಕ್ರವಾರ ರಾತ್ರಿ ಸುರಿದ ಮಳೆ ಒಂದೆಡೆ ಹಳ್ಳ-ಕೊಳ್ಳ, ಕೆರೆಗಳನ್ನು ತುಂಬಿಸಿ ಜನತೆಗೆ ಸಂತಸವನ್ನುಂಟು ಮಾಡಿದ್ದರೆ, ಕೆಲವೊಂದು ಕಡೆಗಳಲ್ಲಿ ಬೆಳೆ ಹಾನಿಗೆ ಕಾರಣವಾಗಿ ರೈತರು ಆರ್ಥಿಕ ನಷ್ಟವನ್ನು ಅನುಭವಿಸುವಂತೆ ಮಾಡಿದೆ.