ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಕಾನೂನು ಅರಿವು ಕೊರತೆಯಿಂದ ಸಮಾಜದಲ್ಲಿ ಹೆಣ್ಣು ಭ್ರೂಣ ಹತ್ಯೆ, ಬಾಲ್ಯ ವಿವಾಹ, ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಅಪರ ಹಿರಿಯ ಶ್ರೇಣಿ ನ್ಯಾಯಾಧೀಶೆ ಬಿ.ಪಾರ್ವತಮ್ಮ ವಿಷಾದಿಸಿದರು.ತಾಲೂಕಿನ ಹೆಗ್ಗಡಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಜನರಿಗೆ ಕಾನೂನಿನ ಬಗ್ಗೆ ಅರಿವು ಕೊರತೆಯಿಂದ ಹೆಣ್ಣುಭ್ರೂಣ ಹತ್ಯೆ, ಬಾಲ್ಯವಿವಾಹದಂತಹ ಕೃತ್ಯಗಳು ಸಮಾಜದಲ್ಲಿ ಹೆಚ್ಚಾಗುತ್ತಿವೆ ಎಂದರು.
ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರು ಕಾನೂನಿನ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು. ನ್ಯಾಯಾಧೀಶರಾಗಿ ಪಾಂಡವಪುರ ಕೋರ್ಟ್‌ಗೆ ಬಂದು ಎರಡು ವರ್ಷಗಳಾಗಿದೆ. ಇಲ್ಲಿಗೆ ಬಂದ ಬಳಿಕ ಹೆಚ್ಚಾಗಿ ಭ್ರೂಣ ಹತ್ಯೆ, ಬಾಲ್ಯವಿವಾಹ, ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳೇ ಹೆಚ್ಚಾಗಿ ಬರುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.ತಾಲೂಕಿನಲ್ಲಿ ನಡೆದ ಹೆಣ್ಣು ಭ್ರೂಣಹತ್ಯೆ ಇಡೀ ಸಮಾಜವೇ ತಲೆತಗ್ಗಿಸುವಂತಹ ಕೃತ್ಯ. ಒಂದು ಹೆಣ್ಣಾಗಿ ಮತ್ತೊಂದು ಹೆಣ್ಣು ಮಗುವನ್ನು ಕೊಲ್ಲುವುದು ಅಪರಾಧ ಅಲ್ಲವೇ?. ಇಂತಹ ಕೃತ್ಯ ನಡೆಸುವವರಿಗೆ ಕಾನೂನಿನಲ್ಲಿ ಕಠಿಣ ಶಿಕ್ಷೆ ಇದ್ದರೂ ಸಹ ಅದರ ಬಗ್ಗೆ ಅರಿವು ಮೂಡಿಸಿಕೊಳ್ಳದೆ ಅಪರಾಧ ಕೃತ್ಯಗಳನ್ನು ನಡೆಸುತ್ತಿದ್ದಾರೆ ಎಂದರು.ಪರವಾನಗಿ ಇಲ್ಲದೆ ಬೈಕ್ ಓಡಿಸುವುದು, ಮದ್ಯಪಾನ ಮಾಡಿ ವಾಹನ ಚಲಾಯಿಸುವುದು, ತ್ರಿಬಲ್ ರೇಡಿಂಗ್ ಎಲ್ಲವೂ ಕಾನೂನು ಬಾಹಿರವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಗಳು ಪೋಷಕರು, ಹಿರಿಯರನ್ನು ಗೌರವಿಸುವ ಕೆಲಸ ಮಾಡಬೇಕು ಎಂದರು.
ನಮ್ಮ ಪೋಷಕರು ಸಮಾಜದಲ್ಲಿ ಮರ್ಯಾದೆ, ಗೌರವದಿಂದ ಬದುಕಲು ಅವಕಾಶ ಮಾಡಿಕೊಡಬೇಕು. ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳು ಭವಿಷ್ಯ ಹಾಳು ಮಾಡುಕೊಳ್ಳುತ್ತಿದ್ದಾರೆ. ವಸ್ತುಗಳಿಗಿಂತ ಮನುಷ್ಯತ್ವ ಸಂಬಂಧಕ್ಕೆ ಹೆಚ್ಚು ಬೆಲೆ ಕೊಡುವುದನ್ನು ಪ್ರತಿಯೊಬ್ಬರು ಕಲಿತುಕೊಳ್ಳಬೇಕು ಎಂದರು.ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್ ಮಾತನಾಡಿ, ತಾಲೂಕಿನಲ್ಲಿ ನಡೆದ ಹೆಣ್ಣುಭ್ರೂಣಹತ್ಯೆ ಪ್ರಕರಣ ಇಡೀ ದೇಶವೇ ತಲೆತಗ್ಗಿಸುವಂತಹ ಪ್ರಕರಣವಾಗಿದೆ. ಪೋಷಕರು ಹೆಣ್ಣುಭ್ರೂಣ ಹತ್ಯೆಯಂತಹ ಕೃತ್ಯಕ್ಕೆ ಮುಂದಾಗಬಾರದರು ಎಂದರು.
ಪ್ರಸ್ತುತ ದಿನಗಳಲ್ಲಿ ರೈತರ ಮಕ್ಕಳಿಗೆ ಹೆಣ್ಣು ಸಿಗುವುದೇ ಕಷ್ಟವಾಗಿದೆ. ದೇಶಕ್ಕೆ ಅನ್ನ ನೀಡುವ ರೈತರ ಮಕ್ಕಳಿಗೆ ಹೆಣ್ಣು ಕೊಡುವುದಕ್ಕೆ ಯಾರು ಹಿಂಜರಿಯಬಾರದು. ಹೈನುಗಾರಿಕೆ ರೈತರ ಆರ್ಥಿಕ ಪ್ರಗತಿಗೆ ಸಹಕಾರಿಯಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.ತಾಪಂ ಇಒ ಲೋಕೇಶ್‌ಮೂರ್ತಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲೂ ಸಹ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಹಾಗಾಗಿ ಪೋಷಕರು ಇಂಗ್ಲಿಷ್ ವ್ಯಾಮೋಹಕ್ಕೆ ಬಿದ್ದು ಖಾಸಗಿ ಶಿಕ್ಷಣ ಸಂಸ್ಥೆಗ ಮಕ್ಕಳನ್ನು ಸೇರಿಸುವುದನ್ನು ಕಡಿಮೆ ಮಾಡಬೇಕು. ಸರ್ಕಾರಿ ಶಾಲೆಗಳ ಉಳಿವಿಗೆ ಶಿಕ್ಷಕರು, ಪೋಷಕರು, ಗ್ರಾಮಸ್ಥರ ಸಹಕಾರ ಅತ್ಯಗತ್ಯವಾಗಿದೆ, ಗ್ರಾಮದ ಸರ್ಕಾರಿ ಶಾಲೆಯ ಉಳಿವಿಗೆ ಗ್ರಾಪಂ ಸದಸ್ಯ ಎಚ್.ಜೆ.ರಾಮಕೃಷ್ಣ ಅವರ ಪರಿಶ್ರಮ ಹೆಚ್ಚಾಗಿದೆ ಎಂದರು.
ಇದೇ ವೇಳೆ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್‍ಯಕ್ರಮಗಳು ಮೂಡಿಬಂದವು. ಖಾಸಗಿ ಶಿಕ್ಷಣ ಸಂಸ್ಥೆಗಳನ್ನೇ ಮೀರಿಸುವಂತೆ ಸರಕಾರಿ ಶಾಲೆಯ ಮಕ್ಕಳಿಂದ ನೃತ್ಯ ಪ್ರದರ್ಶನಗಳು ಮೂಡಿಬಂದವು.ಸಮಾರಂಭದಲ್ಲಿ ಗ್ರಾಪಂ ಅಧ್ಯಕ್ಷೆ ಪ್ರಮೀಳ, ಸದಸ್ಯ ಎಚ್.ಜೆ.ರಾಮಕೃಷ್ಣ, ಬಿಆರ್‌ಸಿ ಪ್ರಕಾಶ್, ಸಬ್ ಇನ್ಸ್‌ಪೆಕ್ಟರ್ ಮರಿಯಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಚಂದ್ರು, ಜೆಡಿಎಸ್ ಮುಖಂಡ ಚೇತನ್, ಮುಖ್ಯಶಿಕ್ಷಕ ಯೋಗನರಸಿಂಹೇಗೌಡ, ಶಿಕ್ಷಕರಾದ ಪುರುಷೋತ್ತಮ್, ಮೋದವ್ವ, ನಿವೃತ್ತ ಮುಖ್ಯಶಿಕ್ಷಕ ಆರ್.ನಾಗರಾಜು, ಗ್ರಾಪಂ ಮಾಜಿ ಸದಸ್ಯ ಅಪ್ಪಣ್ಣ, ಪ್ರಕಾಶ್, ಉಮೇಶ್ ಸೇರಿದಂತೆ ಮುಖಂಡರು, ಎಸ್‌ಡಿಎಂಸಿ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.