ಸಾರಾಂಶ
ಶಿವಾನಂದ ಗೊಂಬಿ
ಹುಬ್ಬಳ್ಳಿ: ರಾಜ್ಯ ಸರ್ಕಾರ ಬರ ಪರಿಹಾರ ಘೋಷಿಸಿ ರೈತರ ಖಾತೆಗಳಿಗೆ ಜಮೆ ಮಾಡುತ್ತಿದೆ. ಆದರೆ, ಜಿಲ್ಲೆಯ 6083 ರೈತರ ಬ್ಯಾಂಕ್ ಖಾತೆಗಳು ವಿವಿಧ ಕಾರಣಗಳಿಂದ ಹಣ ಜಮೆ ಆಗಿಲ್ಲ. ಹೀಗಾಗಿ ಅವುಗಳನ್ನು ಸರಿಪಡಿಸಿ ಪರಿಹಾರ ಜಮೆ ಮಾಡಿಸುವ ಜವಾಬ್ದಾರಿಯನ್ನು ಗ್ರಾಮ ಲೆಕ್ಕಾಧಿಕಾರಿಗಳ ಹೆಗಲಿಗೆ ಹಾಕಲಾಗಿದೆ.
ಜಿಲ್ಲೆಯ ಎಂಟು ತಾಲೂಕನ್ನು ಬರಪೀಡಿತವೆಂದು ಸರ್ಕಾರ ಘೋಷಿಸಿದ್ದು ಜಿಲ್ಲೆಯ 1,68,669 ರೈತರ ಪೈಕಿ 1,06,707 ರೈತರು ಬರ ಪರಿಹಾರಕ್ಕೆ ಅರ್ಹರಾಗಿದ್ದಾರೆ. ಆದರೆ ಈ ಪೈಕಿ 6083 ರೈತರ ಖಾತೆಗಳಿಗೆ ತಾಂತ್ರಿಕ ಕಾರಣದಿಂದ ಪರಿಹಾರ ಆಗಿರಲಿಲ್ಲ. ಇದೀಗ ಈ ಸಮಸ್ಯೆಯನ್ನು ನಿವಾರಿಸುವ ಹೊಣೆ ಗ್ರಾಮ ಲೆಕ್ಕಾಧಿಕಾರಿಗಳಿಗೆ ನೀಡಲಾಗಿದೆ.
ಏನಿದು ತಾಂತ್ರಿಕ ಸಮಸ್ಯೆ?: ರೈತರ ಖಾತೆ ಬ್ಲಾಕ್ ಆಗಿರುವುದು, ಆಧಾರ್ ಕಾರ್ಡ್‌ನಲ್ಲಿರುವ ಹೆಸರು ಹಾಗೂ ಫ್ರುಟ್ಸ್ ಸಾಫ್ಟ್‌ವೇರ್‌ನಲ್ಲಿನ ಹೆಸರು ಹೊಂದಾಣಿಕೆ ಆಗದಿರುವುದು, ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗದೇ ಇರುವುದು, ಖಾತೆಯೇ ಬಂದ್ ಆಗಿರುವುದು, ಐಎಫ್‌ಎಸ್‌ಸಿ ಕೋಡ್ ಸರಿ ಇಲ್ಲದಿರುವುದು. ಹೀಗೆ ವಿವಿಧ ಕಾರಣಗಳಿಂದ 6083 ರೈತರ ಖಾತೆಗಳಿಗೆ ಹಣ ಜಮೆಯಾಗಿರಲಿಲ್ಲ. ಇದನ್ನು ಸರಿಪಡಿಸುವ ಜವಾಬ್ದಾರಿಯನ್ನು ಗ್ರಾಮ ಲೆಕ್ಕಾಧಿಕಾರಿಗಳಿಗೆ ವಹಿಸಲಾಗಿದೆ. ಗ್ರಾಮ ಲೆಕ್ಕಾಧಿಕಾರಿಗಳು ಪರಿಶೀಲನೆ ವೇಳೆ 6083 ರೈತರ ಪೈಕಿ 660 ಜನ ರೈತರು ನಿಧನರಾಗಿದ್ದಾರೆ. 205 ರೈತರು ಬೇರೆ ಜಿಲ್ಲೆಗಳಲ್ಲಿ ವಾಸವಾಗಿರುವುದು ಬೆಳಕಿಗೆ ಬಂದಿದೆ. ಇನ್ನುಳಿದ 5218 ರೈತರ ಖಾತೆ ಸರಿಪಡಿಸುವ ಕೆಲಸದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ತೊಡಗಿದ್ದಾರೆ.
ಬರ ಪರಿಹಾರ ಯಾವ ರೈತನ ಖಾತೆಗೆ ಜಮೆಯಾಗಿಲ್ಲ. ಆತನದು ಯಾವ ಊರು ಎಂಬುದನ್ನು ತಿಳಿದುಕೊಂಡು ಆ ಗ್ರಾಮ ಪಂಚಾಯಿತಿಯಲ್ಲಿನ ಗ್ರಾಮ ಲೆಕ್ಕಾಧಿಕಾರಿಗೆ ಮಾಹಿತಿ ನೀಡಲಾಗುತ್ತದೆ. ಆತ ಆ ರೈತನ ಮನೆಗೆ ತೆರಳಿ ಖಾತೆಯಲ್ಲಿನ ಸಮಸ್ಯೆ ಏನು? ಎಂದು ಪತ್ತೆ ಹಚ್ಚಿ. ಖಾತೆ ಸಕ್ರಿಯಗೊಳಿಸಿ ಪರಿಹಾರ ಜಮೆ ಮಾಡಿಸಲಾಗುತ್ತಿದೆ. ಇನ್ನು ಸ್ವಲ್ಪ ಖಾತೆಗಳನ್ನು ಸಕ್ರಿಯಗೊಳಿಸುವುದು ಬಾಕಿ ಉಳಿದಿದೆ. ಅವುಗಳನ್ನು ಇನ್ನೊಂದು ವಾರದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.
ಸವಾಲಿನ ಕೆಲಸ: ಊರಲ್ಲಿರುವ ರೈತರ ಖಾತೆಗಳು ತಾಂತ್ರಿಕ ಸಮಸ್ಯೆಯಾಗಿದ್ದರೆ ಸರಿಪಡಿಸುವ ಕೆಲಸವನ್ನೇನೋ ಮಾಡಲಾಗುತ್ತಿದೆ. ಆದರೆ 205 ರೈತ ಕುಟುಂಬಗಳು ಬೇರೆ ಬೇರೆ ಜಿಲ್ಲೆಗಳಿಗೆ ವಲಸೆ ಹೋಗಿರುವುದುಂಟು. ಅಂಥವರನ್ನು ಪತ್ತೆ ಹಚ್ಚಿ ಅವರ ಖಾತೆಗಳಿಗೆ ಪರಿಹಾರದ ಹಣ ಹಾಕಿಸುವ ಕೆಲಸ ಸವಾಲಿನಿಂದ ಕೂಡಿದೆ ಎಂದು ಗ್ರಾಮ ಲೆಕ್ಕಾಧಿಕಾರಿಗಳು ತಿಳಿಸಿದ್ದಾರೆ. ಇನ್ನು ಹೊಲದ ಮಾಲೀಕ ಮೃತನಾಗಿದ್ದರೆ ಆತನ ಕುಟುಂಬಸ್ಥರಿಗೆ ಶೀಘ್ರದಲ್ಲೇ ವಾರ್ಸಾ ದಾಖಲಿಸಿಕೊಂಡು ವಾಟ್ನಿ ಮಾಡಿಕೊಳ್ಳಿ. ಈ ಸಲವಂತೂ ಪರಿಹಾರ ಬರಲ್ಲ. ಆದರೆ ಮುಂದಿನ ಸಲ ಪರಿಹಾರ ಬರಬೇಕೆಂದರೆ ಸರಿಪಡಿಸಿಕೊಳ್ಳಿ ಎಂಬ ಸಲಹೆ ನೀಡಲಾಗುತ್ತಿದೆ.
ಒಟ್ಟಿನಲ್ಲಿ ತಾಂತ್ರಿಕ ಸಮಸ್ಯೆಯಿಂದ ಪರಿಹಾರದ ಹಣ ಜಮೆಯಾಗದ ರೈತರ ಖಾತೆಗಳನ್ನು ಸರಿಪಡಿಸುವ ಕೆಲಸ ಗ್ರಾಮ ಲೆಕ್ಕಾಧಿಕಾರಿಗಳ ಹೆಗಲೇರಿದಂತಿದ್ದು ಸುಳ್ಳಲ್ಲ.