ಸಾರಾಂಶ
ಹಗರಿಬೊಮ್ಮನಹಳ್ಳಿ: ತಿಂಗಳಿಗೆ ಒಂದ್ ಸಲ ಎನ್‌ಎಂಆರ್ ತೆಗೆದ್ರೆ ಜೀವನ ಮಾಡೋದು ಹ್ಯಾಂಗ್‌ರೀ, ನೀವು ಏನ್ ಆರಾಮ್ ಇರ್ತೀರಿ, ಜನರ ಕಷ್ಟ ನಿಮ್ಗೆ ಗೊತ್ತಾಗಲ್ಲ ಎಂದು ತಾಲೂಕಿನ ತೆಲುಗೋಳಿ ಗ್ರಾಮದ ನರೇಗಾ ಕೂಲಿಕಾರ್ಮಿಕರು ನರೇಗಾ ಸಹಾಯಕ ನಿರ್ದೇಶಕ ರಮೇಶ ಮಹಲಿಂಗಪುರ ಬಳಿ ತಮ್ಮ ಅಳಲು ತೋಡಿಕೊಂಡರು.
ತಾಲೂಕಿನ ಮುತ್ಕೂರು ಗ್ರಾಪಂ ಕಚೇರಿ ಮುಂಭಾಗ ತೆಲುಗೋಳಿ ನರೇಗಾ ಕೂಲಿಕಾರ್ಮಿಕರು ಎನ್‌ಎಂಆರ್ ತೆಗೆಯದ ಹಿನ್ನೆಲೆಯಲ್ಲಿ ಪ್ರತಿಭಟಿಸಿ ಕೂಡಲೇ ಕೆಲಸ ನೀಡುವಂತೆ ಆಗ್ರಹಿಸಿದರು. ಕೆಲಸಕ್ಕೆ ಅರ್ಜಿ ಹಾಕಿದರೂ ಕೆಲಸ ನೀಡುತ್ತಿಲ್ಲ. ಯಾರದೋ ಮಾತು ಕೇಳಿ ಹಿನ್ನೀರು ಕೆರೆ ಪ್ರದೇಶದಲ್ಲಿ ಕೆಲಸ ಕೊಡುವುದನ್ನು ನಿಲ್ಲಿಸಿರುವುದು ಕಾರ್ಮಿಕರ ಹೊಟ್ಟೆ ಮೇಲೆ ಬರೆ ಎಳೆದಂತಾಗಿದೆ ಎಂದು ತೆಲುಗೋಳಿ ಗ್ರಾಮದ ಮಲ್ಲಿಕಾರ್ಜುನಗೌಡ, ಯಂಕಾರೆಡ್ಡಿ, ಮೈಲಾರಪ್ಪ ಬೇಸರ ವ್ಯಕ್ತಪಡಿಸಿದರು.ಮುಖಂಡ ದಳಪತಿ ಕೊಟ್ರಯ್ಯ ಮಾತನಾಡಿ, ಸರ್ಕಾರಿ ಭೂಮಿಯಲ್ಲಿ ಕೆಲಸ ಕೊಡುವುದಕ್ಕೆ ಯಾರ ಪರವಾನಗಿ ಪಡೆಯಬೇಕಾಗಿಲ್ಲ. ಯಾರದೋ ಪೋನ್ ಕರೆಗೆ ಹೆದರಿ ಕಾರ್ಮಿಕರಿಗೆ ಕೆಲಸ ಕೊಡದಿರುವುದು ಸಮಂಜಸವಲ್ಲ. ಬರಗಾಲ ಇರುವುದರಿಂದ ಕಾರ್ಮಿಕರು ಕೆಲಸವಿಲ್ಲದೇ ಊರು ಬಿಡುವ ಪರಿಸ್ಥಿತಿ ಬಂದಿದೆ. ಇಂತಹ ದುಸ್ಥಿತಿಯಲ್ಲಿ ಗ್ರಾಪಂ ಅಧಿಕಾರಿಗಳು ಕೆಲಸ ನೀಡದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಯುವ ಮುಖಂಡ ಮೇಗೇರಿ ಲೋಕೇಶ್ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿಕಾರ್ಮಿಕರಿಗೆ ಕೆಲಸ ನೀಡುವುದು ಗ್ರಾಪಂ ಅಧಿಕಾರಿಗಳ ಕರ್ತವ್ಯವಾಗಿದೆ. ವಿನಾಕಾರಣ ವಿಳಂಬ ಮಾಡಿದರೆ ತಾಪಂ ಮುಂಭಾಗ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ದಾಸರ ಗಿರೀಶ್, ರಾಜಶೇಖರ್‌ರೆಡ್ಡಿ, ಅಂಬಿಗರ ನಿಂಗಪ್ಪ, ಬೀಮೇಶ್, ಕೃಷ್ಣರೆಡ್ಡಿ, ಶಿವರಾಜ್, ಸಾಲ್ಮನಿ ಗಂಗಪ್ಪ, ಜಿ.ರಮೇಶ, ರುದ್ರಗೌಡ, ಗಾಳೆಪ್ಪ, ಶೋಭಮ್ಮ, ಮಾನವ್ವ, ಮೀನಾಕ್ಷಮ್ಮ, ಪ್ರೇಮಕ್ಕ, ರೇಖಾ ಇತರರಿದ್ದರು.
ತೆಲುಗೋಳಿ ಗ್ರಾಮಸ್ಥರಿಗೆ ಕೂಡಲೇ ಕೆಲಸ ಕೊಡಲಾಗುವುದು. ಕಚೇರಿ ಕೆಲಸ ಇರುವುದರಿಂದ ಸ್ವಲ್ಪ ತಡವಾಗಿದೆ. ಸೋಮವಾರ ಇಲ್ಲವೇ ಮಂಗಳವಾರ ಎನ್‌ಎಂಆರ್ ತೆಗೆಯಲಾಗುವುದು. ಮುತ್ಕೂರು ಗ್ರಾಪಂಗೆ ಹೆಚ್ಚು ಮಾನವ ದಿನಗಳನ್ನು ನೀಡಿದ್ದೇವೆ ಎನ್ನುತ್ತಾರೆ ನರೇಗಾ ಸಹಾಯಕ ನಿರ್ದೇಶಕ ರಮೇಶ ಮಹಲಿಂಗಪುರ.