ಸಂಸ್ಕಾರದ ಕೊರತೆಯಿಂದ ಪಾಶ್ಚಾತ್ಯರ ದಾಸರಾಗುತ್ತಿದ್ದೇವೆ-ನರಸಿಂಹ ಕುಲಕರ್ಣಿ

| Published : Aug 27 2024, 01:33 AM IST

ಸಂಸ್ಕಾರದ ಕೊರತೆಯಿಂದ ಪಾಶ್ಚಾತ್ಯರ ದಾಸರಾಗುತ್ತಿದ್ದೇವೆ-ನರಸಿಂಹ ಕುಲಕರ್ಣಿ
Share this Article
  • FB
  • TW
  • Linkdin
  • Email

ಸಾರಾಂಶ

ವೃದ್ಧಾಶ್ರಮ ಸಂಸ್ಕೃತಿ ನಮ್ಮದಲ್ಲ, ದಾನ ತ್ಯಾಗದ ಮೂಲಕ ಸಮಾಜ ಸೇವೆ ನಮ್ಮದು ಸೇವಾ ಸಂಕಲ್ಪ, ನಿಷ್ಕಾಮ ಸೇವೆಯೇ ಭಾರತೀಯರ ಹೆಗ್ಗಳಿಕೆ, ಈಗ ಸಂಸ್ಕಾರದ ಕೊರತೆಯಿಂದ ಪಾಶ್ಚಾತ್ಯರ ದಾಸರಾಗುತ್ತಿದ್ದೇವೆ ಎಂದು ಸೇವಾ ಭಾರತಿ ಟ್ರಸ್ಟ್‌ ಕರ್ನಾಟಕ ಉತ್ತರ ವಿಶ್ವಸ್ಥ ಪ್ರಾಂತ ಸೇವಾ ಪ್ರಮುಖ ನರಸಿಂಹ ಕುಲಕರ್ಣಿ ತಿಳಿಸಿದರು.

ಹಾನಗಲ್ಲ: ವೃದ್ಧಾಶ್ರಮ ಸಂಸ್ಕೃತಿ ನಮ್ಮದಲ್ಲ, ದಾನ ತ್ಯಾಗದ ಮೂಲಕ ಸಮಾಜ ಸೇವೆ ನಮ್ಮದು ಸೇವಾ ಸಂಕಲ್ಪ, ನಿಷ್ಕಾಮ ಸೇವೆಯೇ ಭಾರತೀಯರ ಹೆಗ್ಗಳಿಕೆ, ಈಗ ಸಂಸ್ಕಾರದ ಕೊರತೆಯಿಂದ ಪಾಶ್ಚಾತ್ಯರ ದಾಸರಾಗುತ್ತಿದ್ದೇವೆ ಎಂದು ಸೇವಾ ಭಾರತಿ ಟ್ರಸ್ಟ್‌ ಕರ್ನಾಟಕ ಉತ್ತರ ವಿಶ್ವಸ್ಥ ಪ್ರಾಂತ ಸೇವಾ ಪ್ರಮುಖ ನರಸಿಂಹ ಕುಲಕರ್ಣಿ ತಿಳಿಸಿದರು.ಹಾನಗಲ್ಲಿನ ವೆಂಕಟೇಶ್ವರ ಮಂದಿರದ ಸಭಾ ಭವನದಲ್ಲಿ ಸೇವಾ ಭಾರತಿ ಟ್ರಸ್ಟಿನ ಶ್ರೀ ದಯಾಶಂಕರ ಛಾತ್ರಾಲಯ ಸೇವಾ ಭಾರತಿ ರಜತ ಮಹೋತ್ಸವದ ಅಂಗವಾಗಿ ಆಯೋಜಿಸಿದ ಮಾತೆಯರ ರಕ್ಷಾ ಬಂಧನ ಕಾರ್ಯಕ್ರಮದ ವಕ್ತಾರರಾಗಿ ಮಾತನಾಡಿದ ಅವರು, ಸಮಾನತೆ, ಸ್ವಾವಲಂಬನೆ, ವಿಶೇಷ ಚೇತನರಿಗೆ ಸಹಾಯ, ಉಪೇಕ್ಷಿತ ಸಮಾಜದ ಸೇವೆ ನಮ್ಮ ದೇಶದಲ್ಲಿ ಈಗ ಅತ್ಯವಶ್ಯವಾಗಿ ಬೇಕಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಸೇವೆ ಅತ್ಯಂತ ಪೂಜನೀಯವಾದುದು. ಅದು ನಿಷ್ಕಾಮ, ನಿಸ್ವಾರ್ಥ, ಪೂಜನೀಯ ಹಾಗೂ ಪ್ರೀತಿ ತುಂಬಿದ ಕರ್ತವ್ಯ ಎಂದು ಭಾವಿಸಲಾಗಿತ್ತು. ಆದರೆ ಸೇವೆಯ ಸೋಗಿನಲ್ಲಿ ಒಡೆದಾಳುವ ಜನ ಈಗ ಬಂದಿದ್ದಾರೆ. ಹಿಂದೂ ಸಮಾಜ ಅವನತಿಯ ಹಾದಿಯಲ್ಲಿದೆ. ಹಿಂದುಗಳು ಅಲ್ಪಸಂಖ್ಯಾತರಾಗುವ ಸ್ಥಿತಿಯಲ್ಲಿದ್ದೇವೆ. ಈಗಲಾದರೂ ಹಿಂದುಗಳು ಎಚ್ಚೆತ್ತುಕೊಳ್ಳಬೇಕು. ಸ್ವದೇಶಿ ಜೀವನಶೈಲಿ ನಮ್ಮದಾಗಿರಲಿ. ಕುಟುಂಬಗಳು ವಿಚಲಿತವಾಗುವುದು ಬೇಡ. ಸಂಕುಚಿತತೆಯಿಂದ ಮುಕ್ತರಾಗಿ ದೇಶ ರಕ್ಷಣೆಯ ಹೊಣೆಗೆ ಸಿದ್ಧರಾಗೋಣ ಎಂದರು.ಅಧ್ಯಕ್ಷತೆವಹಿಸಿ ಮಾತನಾಡಿದ ಸೇವಾ ಭಾರತಿ ಟ್ರಸ್ಟಿನ ಶ್ರೀ ದಯಾಶಂಕರ ಛಾತ್ರಾಲಯದ ಅಧ್ಯಕ್ಷೆ ರೇಖಾ ಶೆಟ್ಟರ ಮಾತನಾಡಿ, ಆರೋಗ್ಯ ಶಿಕ್ಷಣ ಸ್ವಾವಲಂಬಿ ಸಮಾಜದ ಕನಸು ನನಸಾಗಬೇಕಾಗಿದೆ. ಸೇವಾ ಭಾರತಿ ಟ್ರಸ್ಟ ೨೫ ವರ್ಷಗಳಿಂದ ಇಡೀ ದೇಶವ್ಯಾಪಿ ಸೇವಾ ಕಾರ್ಯದಲ್ಲಿದೆ. ಸಂಸ್ಕಾರ ಭಾರತದ ಪುನರುತ್ಥಾನಕ್ಕೆ ಎಲ್ಲರೂ ಜೊತೆಗೂಡಬೇಕಾಗಿದೆ. ಮಹಿಳೆಯರ ಸ್ವಾವಲಂಬೀ ಸಬಲೀಕರಣಕ್ಕೆ ಆದ್ಯತೆ ಬೇಕಾಗಿದೆ. ಸರಕಾರದ ಸಹಾಯಧನವಿಲ್ಲದೆ ದಾನಿಗಳ ಸೇವೆಯಿಂದಲೇ ನಡೆಯುತ್ತಿರುವ ಈ ಸಂಸ್ಥೆಯ ಸೇವಾ ಕಾರ್ಯಗಳು ಮುಂಚೂಣಿಯಲ್ಲಿವೆ. ಇಡೀ ಸಮಾಜದ ಹಿತಕ್ಕೆ ಎಲ್ಲರೂ ಸಂಕಲ್ಪದ ಮೂಲಕ ಕಾರ್ಯಪ್ರವೃತ್ತರಾಗಬೇಕಾಗಿದೆ. ನಾಳೆಯ ಉತ್ತಮ ಸಮಾಜಕ್ಕೆ ಇಂದೇ ಕ್ರಿಯಾಶೀಲರಾಗಬೇಕಾಗಿದೆ ಎಂದರು.ನಿವೃತ್ತ ಉಪತಹಸೀಲ್ದಾರ್‌ ಸುಧಾ ದೇಶಪಾಂಡೆ ಮುಖ್ಯ ಅತಿಥಿಯಾಗಿ ಮಾತನಾಡಿ, ಹಿಂದು ಸಮಾಜದಲ್ಲಿ ಸಂಬಂಧಗಳ ಕೊಂಡಿಗಳು ಕಳಚುತ್ತಿವೆ. ಮಹಿಳೆಯರು ಆತಂಕದಲ್ಲಿ ಹೆಜ್ಜೆ ಹಾಕಬೇಕಾಗಿದೆ. ಹೆಣ್ಣು ಮಕ್ಕಳ ರಕ್ಷಣೆಗೆ ಬಿಗಿಯಾದ ಕಾನೂನು ಬೇಕು. ಈಗ ಹಿಂದು ಸಂಸ್ಕೃತಿಯ ಉಳಿವು ತಾಯಂದಿರ ಕೈಯಲ್ಲಿದೆ. ಮಕ್ಕಳಿಗೆ ಒಳ್ಳೆಯ ಸಂಸ್ಕಾರದ ಜೊತೆಗೆ ದೇಶಭಕ್ತಿ, ಸಾಮಾಜಿಕ ಜವಾಬ್ದಾರಿಯ ಶಿಕ್ಷಣ ನೀಡಬೇಕಾಗಿದೆ ಎಂದರು.ಕದಳಿ ಮಹಿಳಾ ವೇದಿಕೆ ಉಪಾಧ್ಯಕ್ಷೆ ಸುಜಾತಾ ನಂದೀಶೆಟ್ಟರ, ಪಾರ್ವತಿಬಾಯಿ ಕಾಶೀಕರ ಮಾತನಾಡಿದರು. ಮಾಧುರಿ ದೇಶಪಾಂಡೆ ದೇಶಭಕ್ತಿ ಗೀತೆ ಹಾಡಿದರು. ಉಮಾ ನಾಗರವಳ್ಳಿ ಸ್ವಾಗತಿಸಿದರು. ವಿಜಯಲಕ್ಷ್ಮೀ ಹಳ್ಳೀಕೇರಿ ನಿರೂಪಿಸಿದರು. ವನಿತಾ ರೇವಡಿಗಾರ ವಂದಿಸಿದರು.