ನಾಳೆ ದುಗ್ಗಹಟ್ಟಿ ಧೀಮಂತ ಕೃತಿ ಲೋಕಾರ್ಪಣೆ

| Published : Jan 15 2025, 12:49 AM IST

ಸಾರಾಂಶ

ಯಳಂದೂರು ಪಟ್ಟಣದ ಎಸ್‌ಡಿವಿಎಸ್ ವಿದ್ಯಾಸಂಸ್ಥೆಯಲ್ಲಿ ಸಂಸ್ಥೆಯ ಅಧ್ಯಕ್ಷ ವಿ.ಮಲ್ಲಿಕಾರ್ಜುಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಯಳಂದೂರು

ಪಟ್ಟಣದ ಎಸ್‌ಡಿವಿಎಸ್ ವಿದ್ಯಾಸಂಸ್ಥೆಯಲ್ಲಿ ಜ.೧೬ ಕ್ಕೆ ಸಮಾಜ ಸೇವಕ ದುಗ್ಗಹಟ್ಟಿ ಪಿ.ವೀರಭದ್ರಪ್ಪ ಅವರ ದುಗ್ಗಹಟ್ಟಿ ಧೀಮಂತ ಕೃತಿ ಸುತ್ತೂರು ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ಸಿದ್ದಗಂಗಾ ಶ್ರೀಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳ ದಿವ್ಯ ಸಮ್ಮುಖದಲ್ಲಿ ನಡೆಯಲಿದೆ ಎಂದು ಎಸ್‌ಡಿವಿಎಸ್ ವಿದ್ಯಾಸಂಸ್ಥೆಯ ಅಧ್ಯಕ್ಷ ವಿ.ಮಲ್ಲಿಕಾರ್ಜುನಸ್ವಾಮಿ ಮಾಹಿತಿ ನೀಡಿದರು.ಪಟ್ಟಣದ ಎಸ್‌ಡಿವಿಎಸ್ ವಿದ್ಯಾಸಂಸ್ಥೆಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು. ದುಗ್ಗಹಟ್ಟಿ ಪಿ.ವೀರಭದ್ರಪ್ಪ ಯಳಂದೂರು ತಾಲೂಕು ಬೋರ್ಡ್‌ನ ಪ್ರಥಮ ಅಧ್ಯಕ್ಷರಾಗಿ ಅನೇಕ ಸಮಾಜಪರ ಕೆಲಸಗಳನ್ನು ಮಾಡಿದ್ದಾರೆ. ಇವರ ಅವಧಿಯಲ್ಲಿ ತಾಲೂಕಿನ ಬಿಳಿಗಿರಿರಂಗನಬೆಟ್ಟಕ್ಕೆ ೧೯೬೧ರಲ್ಲಿ ರಸ್ತೆ ಸಂಪರ್ಕ ಕಲ್ಪಿಸಲಾಗಿತ್ತು. ಆಗ ಇದರಿಂದ ಉಳಿದ ಹಣವನ್ನು ಇವರು ಸರ್ಕಾರಕ್ಕೆ ವಾಪಸ್ಸು ಮಾಡಿದ್ದರು. ಅಲ್ಲದೆ ಜಿಲ್ಲೆಯ ಪ್ರಥಮ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾಗಿ ಮತ್ತು ರಾಜ್ಯ ಗಿರಿಜನರ ಮಂಡಳಿಯ ನಿರ್ದೇಶಕರಾಗಿ ಟಿ.ನರಸೀಪುರ ವಿದ್ಯೋದಯ ಸಂಸ್ಥೆಯ ನಿರ್ದೇಶಕರಾಗಿ ಇವರು ಸಾಕಷ್ಟು ಸಮಾಜಪರ ಕೆಲಸಗಳನ್ನು ನಿರ್ವಹಿಸಿದ್ದಾರೆ. ಪಟ್ಟಣದಲ್ಲಿ ಮಹಾಕವಿ ಷಡಕ್ಷರದೇವರ ಗದ್ದುಗೆಯ ಜೀರ್ಣೋದ್ಧಾರ ಮತ್ತು ಗಂಗವಾಡಿ ಶ್ರೀ ವೀರಭದ್ರೇಶ್ವರ ಭದ್ರಕಾಳಮ್ಮ ದೇವಸ್ಥಾನದ ಜೀರ್ಣೋದ್ದಾರ, ಶಿವರಾತ್ರಿ ರಾಜೇಂದ್ರ ಜಾನಪದ ರಂಗಮಂದಿರ, ಸಭಾಭವನ, ಪ್ರಸಾದ ನಿಲಯಗಳ ನಿರ್ಮಾಣದ ಮುಂಚೂಣಿ ವಹಿಸಿ ಕೆಲಸ ಮಾಡಿದ್ದಾರೆ. ಯಳಂದೂರು ಪಟ್ಟಣದಲ್ಲಿ ಪ್ರಥಮ ಸುಸಜ್ಜಿತ ಚಿತ್ರಮಂದಿರ ನಿರ್ಮಿಸಿದ್ದಾರೆ. ಬಿಳಿಗಿರಿರಂಗನಬೆಟ್ಟ, ಮಲೆಮಹದೇಶ್ವರ ಬೆಟ್ಟದ ದೇಗುಲದ ಅಭಿವೃದ್ಧಿ ತೇರಿನ ನಿರ್ಮಾಣ ದೇವಸ್ಥಾನ ಮಂಡಳಿಯ ಸದಸ್ಯರಾಗಿ ಅನೇಕ ಸಮಾಜಪರ ಕೆಲಸಗಳನ್ನು ಮಾಡಿದ್ದಾರೆ. ಉಪರಾಷ್ಟ್ರಪತಿ ಬಿ.ಡಿ.ಜತ್ತಿ, ಮಾಜಿ ಮುಖ್ಯಮಮತ್ರಿ ನಿಜಲಿಂಗಪ್ಪ, ಮಾಜಿ ರಾಜ್ಯಪಾಲರಾದ ಬಿ.ರಾಚಯ್ಯ ಕೇಂದ್ರದ ಸಚಿವರಾಗಿದ್ದ ಎಂ.ಎನ್.ಗುರುಪಾದಸ್ವಾಮಿ, ಎಂ. ರಾಜಶೇಖರಮೂರ್ತಿ, ವಿ. ಶ್ರೀನಿವಾಸ್ ಪ್ರಸಾದ್‌ರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಇವರು ಅನೇಕ ಜನಪರ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಕಳೆದ ೨೪ ವರ್ಷಗಳ ಹಿಂದೆ ಯಳಂದೂರು ಪಟ್ಟಣದಲ್ಲಿ ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಒಂದು ಉತ್ತಮ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ಇಲ್ಲಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಿದ್ದು ಇವರ ಕುರಿತಾದ ಪುಸ್ತಕವನ್ನು ಲೋಕಾರ್ಪಣೆಗೊಳಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.ಕಸಾಪ ನಿಖಟಪೂರ್ವ ಅಧ್ಯಕ್ಷ ಮದ್ದೂರು ವಿರೂಪಾಕ್ಷ ಮಾತನಾಡಿ, ದುಗ್ಗಹಟ್ಟಿ ಧೀಮಂತ ಕೃತಿಯು ೩೦೦ ಪುಟವಿರುವ ಒಂದು ಅಭಿನಂದನಾ ಗ್ರಂಥವಾಗಿದೆ. ಇದರಲ್ಲಿ ೧೪೦ ಪುಟಗಳಲ್ಲಿ ೨೪ ಲೇಖಕರು ದುಗ್ಗಹಟ್ಟಿ ವೀರಭದ್ರಪ್ಪರವರು ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಸೇವೆಯನ್ನು ದಾಖಲಿಸಿದ್ದಾರೆ. ಇನ್ನುಳಿದ ಪುಟಗಳಲ್ಲಿ ತಾಲೂಕಿನ ಇತಿಹಾಸವನ್ನು ಕುರಿತಾದ ಮಾಹಿತಿಗಳಿದ್ದು ಇದೊಂದು ಸಂಗ್ರಹಯೋಗ್ಯ ಪುಸ್ತಕವಾಗಿದೆ. ತಾಲೂಕು ಕಂಡ ಉತ್ತಮ ಸಮಾಜ ಸೇವಕರಲ್ಲಿ ಇವರ ಹೆಸರಿದ್ದು ನಾಡಿನ ಅನೇಕರು ಇವರ ಬಗ್ಗೆ ಈ ಪುಸ್ತಕದಲ್ಲಿ ಲೇಖನಗಳನ್ನು ದಾಖಲಿಸಿದ್ದಾರೆ. ಡಾ.ಶೀಲಾಕುಮಾರಿ ಈ ಪುಸ್ತಕದ ಸಂಪಾದಕರಾಗಿದ್ದು ಈ ಕಾರ್ಯಕ್ರಮವನ್ನು ಮಾಜಿ ಗೃಹ ಸಚಿವ ಪಿ.ಜಿ.ಆರ್.ಸಿಂಧ್ಯಾ ಉದ್ಘಾಟಿಸಲಿದ್ದಾರೆ. ಅಭಿನಂದನಾ ಗ್ರಂಥವನ್ನು ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಬಿಡುಗಡೆಗೊಳಿಸಲಿದ್ದಾರೆ.

ಶಾಸಕ ಎ.ಆರ್.ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ. ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಡಾ.ಶ್ರೀ ಶರತ್ ಚಂದ್ರಸ್ವಾಮಿಜಿ, ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ಹನೂರು ಶಾಸಕ ಎಂ.ಆರ್ಮಂಜುನಾಥ್, ಮಾಜಿ ಶಾಸಕರಾದ ಪರಿಮಳಾ ನಾಗಪ್ಪ, ಜಿ.ಎನ್.ನಂಜುಂಡಸ್ವಾಮಿ, ಎನ್.ಮಹೇಶ್, ಎಸ್.ಬಾಲರಾಜು, ಕಾಡಾ ಅಧ್ಯಕ್ಷ ಮರಿಸ್ವಾಮಿ, ಚಾಮುಲ್ ಅಧ್ಯಕ್ಷ ವೈ.ಸಿ. ನಾಗೇಂದ್ರ, ಪಪಂ ಅಧ್ಯಕ್ಷೆ ಲಕ್ಷ್ಮಿಮಲ್ಲು ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ. ಎಸ್‌ಡಿವಿಎಸ್ ವಿದ್ಯಾಸಂಸ್ಥೆಯ ವಿಖ್ಯಾತ್, ಶಿಕ್ಷಕರಾದ ಗುಂಬಳ್ಳಿ ಬಸವರಾಜು, ಮಹಾದೇವ ಇದ್ದರು.