ತಾಕೋಡೆ ಅರಣ್ಯ ಪ್ರದೇಶದಲ್ಲಿ ತ್ಯಾಜ್ಯ ಸುರಿದು ಅನಾಗರಿಕ ವರ್ತನೆ

| Published : Feb 23 2024, 01:49 AM IST

ತಾಕೋಡೆ ಅರಣ್ಯ ಪ್ರದೇಶದಲ್ಲಿ ತ್ಯಾಜ್ಯ ಸುರಿದು ಅನಾಗರಿಕ ವರ್ತನೆ
Share this Article
  • FB
  • TW
  • Linkdin
  • Email

ಸಾರಾಂಶ

ಎಲ್ಲೆಂದರಲ್ಲಿ ಕಸ ಎಸೆಯುವುದು ಇತ್ತೀಚಿನ ಬಹಳ ದೊಡ್ಡ ಸಮಸ್ಯೆ. ಕಾಡಿನ ರಸ್ತೆಯಲ್ಲಿ ಕಸವನ್ನು ಎಸೆಯಲು ಅವಿದ್ಯಾವಂತರು ಬರುವುದಿಲ್ಲ. ವಿದ್ಯಾವಂತರೇ ಇಂತಹ ಸಮಸ್ಯೆಗಳಿಗೆ ಕಾರಣ ಎಂದು ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಮಂಜುನಾಥ್ ಹೇಳಿದರು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಮೂಡುಬಿದಿರೆ- ಬಂಟ್ವಾಳ ಹೆದ್ದಾರಿಯಲ್ಲಿ ತಾಕೋಡೆ ಬಿರಾವು ಮಧ್ಯೆ ಮೀಸಲು ಅರಣ್ಯ ಪ್ರದೇಶದಲ್ಲಿ ರಸ್ತೆ ಬದಿ ಎಲ್ಲೆಂದರಲ್ಲಿ ತಾಜ್ಯ ಪೊಟ್ಟಣಗಳನ್ನು ಎಸೆದಿದ್ದು, ಪರಿಸರ ಅಶುಚಿತ್ವದಿಂದ ಕೂಡಿತ್ತು. ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಸ್ವಚ್ಛತಾ ಆಂದೋಲನ ನಡೆಸಿ ರಾಶಿ ಕಸ ತೆರವುಗೊಳಿಸಿದ್ದಾರೆ.

ಎಲ್ಲೆಂದರಲ್ಲಿ ಕಸ ಎಸೆಯುವುದು ಇತ್ತೀಚಿನ ಬಹಳ ದೊಡ್ಡ ಸಮಸ್ಯೆ. ಕಾಡಿನ ರಸ್ತೆಯಲ್ಲಿ ಕಸವನ್ನು ಎಸೆಯಲು ಅವಿದ್ಯಾವಂತರು ಬರುವುದಿಲ್ಲ. ವಿದ್ಯಾವಂತರೇ ಇಂತಹ ಸಮಸ್ಯೆಗಳಿಗೆ ಕಾರಣ ಎಂದು ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಮಂಜುನಾಥ್ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅರಣ್ಯ ಇಲಾಖೆ ಮೂಡುಬಿದಿರೆ ವಲಯ, ಹೊಸಬೆಟ್ಟು ಗ್ರಾಮ ಪಂಚಾಯತ್, ತಾಕೊಡೆ, ಪುಚ್ಚಮೊಗರು ಗ್ರಾಮಸ್ಥರ ಸಹಭಾಗಿತ್ವದಲ್ಲಿ ನಡೆದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಜ್ಞಾವಂತರು ಎಸೆದಿರುವ ಕಸವನ್ನು ಪರಿಸರ ಪ್ರಜ್ಞೆ ಹೊಂದಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಶೌರ್ಯ ವಿಪತ್ತು ನಿರ್ವಹಣಾ ತಂಡ, ಸ್ವಸಹಾಯ ಸಂಘಗಳ ಒಕ್ಕೂಟ, ಸ್ಥಳೀಯರೆಲ್ಲರೂ ಸೇರಿಕೊಂಡು ಸ್ವಚ್ಛ ಮಾಡಲು ನಿರ್ಧರಿಸಿರುವುದು ಉತ್ತಮ ಬೆಳವಣಿಗೆ. ಇಲ್ಲಿ ಮತ್ತೆ ತಪ್ಪು ಮರುಕಳಿಸದಂತೆ ನಿಟ್ಟಿನಲ್ಲಿ ಸಿ.ಸಿ ಕ್ಯಾಮರಾ ಅಳವಡಿಸಬೇಕು. ಮೂಡುಬಿದಿರೆ ನಗರದಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವುದು ತಡೆಯಲು ಕಸ ಎಸೆದವರ ಭಾವಚಿತ್ರವನ್ನು ಸಾರ್ವಜನಿಕ ಸ್ಥಳದಲ್ಲಿ ಅಳವಡಿಸುವ ಕೆಲಸ ಮಾಡಲಾಗುತ್ತಿದೆ. ಇದರಿಂದಾಗಿ ಕಸ ಎಸೆಯುವ ಸಮಸ್ಯೆ ಒಂದಿಷ್ಟು ಕಡಿಮೆ ಆಗಿದೆ ಇಂತಹ ಪ್ರಯತ್ನ ಎಲ್ಲೆಡೆ ಆಗಬೇಕು ಎಂದರು.

ಗ್ರಾಮಾಭಿವೃದ್ಧಿ ಯೋಜನೆಯ ದ.ಕ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಮಾತನಾಡಿ ಶೌರ್ಯ ವಿಪತ್ತು ನಿರ್ವಹಣಾ ತಂಡದ ಮೂಲಕ ರಾಜ್ಯದ 90 ತಾಲ್ಲೂಕು ಗಳಲ್ಲಿಇಂತಹ ಕಾರ್ಯಕ್ರಮ ಗಳನ್ನು ಮಾಡಿಕೊಂಡು ಬರಲಾಗುತ್ತಿದೆ. 10,300 ಸ್ವಯಂಸೇವಕರು ಶೌರ್ಯ ಘಟಕದಲ್ಲಿದ್ದು ಕಳೆದ ಮೂರು ವರ್ಷಗಳಿಂದ ಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆಯ ಇಕ್ಕೆಲ, ದೇವಸ್ಥಾನದ ಪರಿಸರದಲ್ಲಿ ಸ್ವಚ್ಛತೆ, ಶ್ರಮದಾನ ಮಾಡಲಾಗುತ್ತಿದೆ. ವೇಣೂರು ಬಾಹುಬಲಿ ಮಹಾ ಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ರಸ್ತೆಯ ಇಕ್ಕೆಲಗಳಲ್ಲಿ 65 ಸ್ವಯಂಸೇವಕರು ಶ್ರಮದಾನ ಮಾಡುತ್ತಿದ್ದಾರೆ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೌಮ್ಯ , ಧರ್ಮಸ್ಥಳ ಮೂಡಬಿದರೆ ಯೋಜನಾಧಿಕಾರಿ ಸುನೀತಾ, ಗುರುವಾಯನಕೆರೆ ಯೋಜನಾಧಿಕಾರಿ ದಯಾನಂದ, ವಿಪತ್ತು ನಿರ್ವಹಣಾ ಯೋಜನಾಧಿಕಾರಿ ಜೈವಂತ ಪಟಗಾರ್, ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ, ಅರಣ್ಯಾಧಿಕಾರಿ ಅಶ್ವಿತ್ ಗಟ್ಟಿ, ಮೇಲ್ವಿಚಾರಕರು, ಸ್ಥಳೀಯರಾದ ರಿಕ್ಕಿ, ಮೂಡುಬಿದಿರೆ ವಲಯದ ಒಕ್ಕೂಟದ ಪದಾಧಿಕಾರಿಗಳು,, ಸೇವಾಪ್ರತಿನಿಧಿಗಳು, ಮೇಲ್ವಿಚಾರಕರು ಹಾಜರಿದ್ದರು.