ಕಲ್ಲಂಗಡಿ ಹಣ್ಣಿನಲ್ಲಿ ಕೃತಕ ಬಣ್ಣ ಪತ್ತೆ!

| Published : Mar 02 2025, 01:16 AM IST

ಸಾರಾಂಶ

ಆಹಾರ ಸುರಕ್ಷತೆಯ ಬಗ್ಗೆ ರಾಜ್ಯ ಸರ್ಕಾರ ಸಾಕಷ್ಟು ಜಾಗೃತಿ ಮೂಡಿಸುತ್ತಿರುವ ಸಂದರ್ಭದಲ್ಲಿಯೇ ತುಮಕೂರು ಜಿಲ್ಲೆ ಕುಣಿಗಲ್‌ ಪಟ್ಟಣದಲ್ಲಿ ಮಾರಾಟವಾಗಿರುವ ಕಲ್ಲಂಗಡಿ ಹಣ್ಣಿನಲ್ಲಿ ಅಧಿಕ ಪ್ರಮಾಣದ ಕೆಂಪು ಬಣ್ಣ ಕಾಣಿಸಿಕೊಂಡಿದೆ.

ಕುಣಿಗಲ್‌ನಲ್ಲಿ ಘಟನೆ । ಅಂಗಡಿ ಬಂದ್‌ಕನ್ನಡಪ್ರಭ ವಾರ್ತೆ ಕುಣಿಗಲ್ ಆಹಾರ ಸುರಕ್ಷತೆಯ ಬಗ್ಗೆ ರಾಜ್ಯ ಸರ್ಕಾರ ಸಾಕಷ್ಟು ಜಾಗೃತಿ ಮೂಡಿಸುತ್ತಿರುವ ಸಂದರ್ಭದಲ್ಲಿಯೇ ತುಮಕೂರು ಜಿಲ್ಲೆ ಕುಣಿಗಲ್‌ ಪಟ್ಟಣದಲ್ಲಿ ಮಾರಾಟವಾಗಿರುವ ಕಲ್ಲಂಗಡಿ ಹಣ್ಣಿನಲ್ಲಿ ಅಧಿಕ ಪ್ರಮಾಣದ ಕೆಂಪು ಬಣ್ಣ ಕಾಣಿಸಿಕೊಂಡಿದೆ. ಈ ಬಗ್ಗೆ ಸ್ಥಳೀಯ ನಿವಾಸಿ ಶಿವರಾಂ ಎಂಬುವರು ದೂರು ನೀಡಿದ್ದು, ತಾಲೂಕು ವೈದ್ಯಾಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಅಂಗಡಿಯನ್ನು ತಾತ್ಕಾಲಿಕವಾಗಿ ಬಂದ್‌ ಮಾಡಿಸಲಾಗಿದೆ.

ಶಿವರಾಂ ಅವರು ಇಲ್ಲಿನ ಮಹಾತ್ಮಗಾಂಧಿ ಕಾಲೇಜು ಬಳಿ ತಮಿಳುನಾಡು ಮೂಲದ ವ್ಯಕ್ತಿ ಮಾರುತ್ತಿದ್ದ ಕಲ್ಲಂಗಡಿ ಹಣ್ಣನ್ನು ಖರೀದಿಸಿದ್ದರು. ಮನೆಯಲ್ಲಿ ಹಣ್ಣನ್ನು ಕತ್ತರಿಸುವ ಸಂದರ್ಭದಲ್ಲಿ ತಮ್ಮಲ್ಲಿದ್ದ ಬಿಳಿಯ ಟಿಶ್ಯೂ ಪೇಪರನ್ನು ಹಣ್ಣಿನ ಮೇಲೆ ಇಟ್ಟಿದ್ದರು. ಬಿಳಿಯ ಟಿಶ್ಯೂ ಪೇಪರ್ ಕೆಂಪು ಬಣ್ಣಕ್ಕೆ ತಿರುಗಿದೆ. ಇದರಿಂದ ಅನುಮಾನಗೊಂಡು ಪುರಸಭಾ ಅಧಿಕಾರಿಗಳಿಗೆ ದೂರು ನೀಡಿದ್ದರು. ಪುರಸಭೆಯ ಆರೋಗ್ಯ ವಿಭಾಗದ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಕಲ್ಲಂಗಡಿ ಹಣ್ಣಿನಲ್ಲಿ ಕೆಂಪು ಬಣ್ಣ ಅತಿ ಹೆಚ್ಚಾಗಿ ಇರುವುದು ಕಂಡು ಬಂತು. ಈ ಹಿನ್ನೆಲೆಯಲ್ಲಿ ಅಂಗಡಿಯಲ್ಲಿರುವ ಕಲ್ಲಂಗಡಿ ಹಣ್ಣುಗಳನ್ನು ಮಾರಾಟ ಮಾಡದಂತೆ ಎಚ್ಚರಿಕೆ ನೀಡಿ, ಮೇಲಾಧಿಕಾರಿಗಳಿಗೆ ವಿಷಯ ಮುಟ್ಟಿಸಿದರು. ತುಮಕೂರು ಆಹಾರ ಸುರಕ್ಷತಾ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಕಲ್ಲಂಗಡಿ ಹಣ್ಣಿಗೆ ಹೆಚ್ಚಾಗಿ ಇಂಜೆಕ್ಷನ್ ಕೊಟ್ಟು ಅದು ತುಂಬಾ ಕೆಂಪಾಗಿ ಕಾಣುವಂತೆ ಮಾಡಲಾಗುತ್ತದೆ. ಇದು ವೇಗವಾಗಿ ಬೆಳೆಯಲು ನಿಟ್ರೋಜನ್‌, ಆಕ್ಸಿಟಾಕ್ಸಿನ್ ಕೂಡ ಇಂಜೆಕ್ಟ್ ಮಾಡುತ್ತಾರೆ. ಕಲ್ಲಂಗಡಿಗೆ ಗಾಢವಾದ ಬಣ್ಣ ನೀಡಲು ಕ್ರೋಮೇಟ್, ಮೆಂಥಾಲ್ ಯಲ್ಲೋ ಮತ್ತು ಸುಡಾನ್ ರೆಡ್ ಬಣ್ಣ ಬಳಸಲಾಗುತ್ತದೆ ಎಂದು ವರದಿಯಾಗಿತ್ತು. ಅದರ ಬೆನ್ನಲ್ಲೇ ಕುಣಿಗಲ್‌ನಲ್ಲಿ ಈ ಘಟನೆ ನಡೆದಿದೆ.